ಸಮುದ್ರರಾಜನಿಗೆ ಒಡೆಯುತ್ತಿತ್ತು ತೆರೆ ನಡುಗುತ್ತಿತ್ತು ತಿರೆ ಭೋರ್ಗರೆಯುವ ಕಡಲಬ್ಬರ ಕರಕರೆ ಹುಟ್ಟುತಿತ್ತು ಹುಟ್ಟಳಿಯುತಿತ್ತು ತೆರೆ ನಿಮಿಷ-ನಿಮಿಷಕೆಡೆಬಿಡದ ತೆರೆಯ ಮೊರೆ !   ಯಾವ ಕಾರಣಕೆ ನೀನು ಬೊಬ್ಬಿಡುವೆ ಕಡಲದೊರೆ ಕುಬೇರ? ಜೀವಸಂಕುಲಕೆ ಜಲಜ ಸಂಪದಕೆ ನೆಲೆಯ ನಿಧಿ ಸಮೀರ !   ಮಗಳು ಲಕ್ಷ್ಮಿ ನಿನ್ನೇಕನಾಡಿ ನಿಜ ಚಿತ್ತಚಂಚಲವತಿ ನಿಂತ ಕಡೆಗೆ ನೆಲೆಯಾಗಿ ನಿಲ್ಲದೈ - ಸಿರಿಯ ಹಿರಿಯ ದಾತ್ರಿ !   ಏಕಪುತ್ರ ನಿನಗಿರುವುದೇನೊ ದಿಟ ಆದೋಡೇನು ತೋಷ? ಪೂರ್ಣಚಂದ್ರನಾಗಿರುವುದೊಂದೆ ದಿನ - ದಿನವು ಬೇರೆ ವೇಷ !   ಒಡೆಯನಾದರೂ ಸಿರಿಯ ಸಂಪದಕೆ ಕೊರಗುತಿರುವೆ ಏಕೆ? ತಡೆಯಲಾರದೀ ದುಃಖದಳ್ಳುರಿಗೆ ಬೇರೆ ಉಪಮೆ ಬೇಕೆ? *** ಹೆಜ್ಜೆ ಗುರುತು ಬಿಟ್ಟು ಹೋದ ಹೆಜ್ಜೆ ಗುರುತು ಅಳಿಯದಂತೆ ಉಳಿದುಕೊಂಡು ಕಳೆದುಹೋದ ದಿನಗಳನ್ನು ನೆನೆಪಿಸುತ್ತಲಿರುವುದು ; ಮರೆಯಬೇಕು ಹಳೆಯದನ್ನು  ತೊರೆಯಬೇಕು ತಳಕುಗಳನು ಆದರೇನು? ನೆನಪು ತಾನೆ ತೂರಿಕೊಂಡು ಬರುವುದು !   ಕಟ್ಟಿಕೊಂಡ ಹಲವು ಕನಸ- ನಿಟ್ಟುಕೊಡು ಮನಸ್ಸಿನಲ್ಲಿ ಹುಟ್ಟಿಕೊಳುವ ಯೋಚನೆಗಳು ಗಟ್ಟಿಯಾಗತೊಡಗಲು ; ಬಿಟ್ಟು ಬಿಡುವ ಯೋಚನೆಗಳ ಕಟ್ಟುಗಳನು ನಾಶಗೊಳಿಸಿ ಕಟ್ಟಕಡೆಗೆ ನಿರಾತಂಕ ಭಾವಗಳಲಿ ಮುಳುಗಲು !   ಬೇಡವೆನುವ ಭಾವಬಿಂಬ ಕೂಡಿಕೊಂಡು ಮನದ ತುಂಬ ಕಾಡುವಂತೆ ಗಮನವಿಟ್ಟು ತಾನೆ ಬಲಿಯುತಿರುವುದು ; ಮರೆತು ಬಿಡುವ ಮನೋಧೈರ್ಯ ನಿರತವಾಗಿ ಭರಿತವಾಗಿ ಸ್ಫುರಣಗೊಳುತ ಅನುರಣಿಸುತ ಜೀವ ತಳೆದು ನಿಲುವುದು !   ಸೇರಿ ಬರುವ ನೆನಪುಗಳಿಗೆ ಸಾರಿ-ಸಾರಿ ಹೇಳಿ-ಹೇಳಿ ತೀರದಂಥ ಸೆಳೆತಗಳನು ಕರಣಗೊಳಿಸಿಕೊಳುವುದು ; ಬಿಟ್ಟು ಹೋದ ಹೆಜ್ಜೆ ಗುರುತು ಅಳಿಯದಂತೆ ಉಳಿಸಿಕೊಂಡು ಕಳೆದುಹೋದ ನೆನಪುಗಳನು ಮರಳಿ- ಮರಳಿ ತರುವುದು ! ***