ಭಾನು ಮಂಡಲ ನಭೋ ಮಂಡಲದ ಮಹಾವಲಯದಲಿ ಪ್ರಭಾ ಪುಂಜ ನೀನು ; ಚರಾಚರಗಳಿಗೆ ಪರಾಪರಗಳಿಗೆ ಜೀವಶಕ್ತಿ ಭಾನು !   ಭೂಮಿ ಮಂಡಲಕೆ ಭಾನು ಮಂಡಲವೆ ಅತ್ಯಮೂಲ್ಯ ಸೊತ್ತು ; ಜೀವರಾಶಿಗಳ ಜೀವಕೋಶಗಳ ಜೀವನಕ್ಕೆ ಪತ್ತು !   ನಿನ್ನ ಕಿರಣಗಳು ಜೀವ ಸ್ಫುರಣಗಳು ಬದುಕಿಗದುವೆ ಮೂಲ ; ಜೀವರಾಶಿಗಳ ಭವ್ಯ ಸಂಕುಲಕೆ ದಿವ್ಯ ಪ್ರಾಣ ಮೂಲ !   ಚರಾಚರಗಳಲಿ ಪರಾಪರಗಳಲಿ ನೀನು ಸುಪ್ತ ಜಾಲ ; ಜೀವ - ಜಂತುಗಳ ಭಾವ ತಂತುಗಳ ಮಹಾಶಕ್ತಿ ಮೂಲ !   ನಭೋ ಮಂಡಲದ ಪ್ರಭಾವಲಯದಲಿ ಸುಪ್ತಶಕ್ತಿ ನೀನು ; ಚರಾಚರಗಳಲಿ ಪರಾಪರಗಳಲಿ ಸರ್ವಶಕ್ತ ಭಾನು ! *** ಬಯಕೆ ಬಯಕೆಗಳನು ಮೊದಲು ಬಿಗಿದು ಕಟ್ಟಿಹಾಕಬೇಕು ಬಳಿಕ ಬಯಕೆ ಹುಟ್ಟಿಕೊಳುವು- ದನ್ನು ತಿಳಿಯಬೇಕು !   ಕಳ್ಳನೊಬ್ಬ ಕತ್ತಲೆಯಲಿ ಮಾಯವಾದ ಹಾಗೆ ಬೆಳಕನೊಮ್ಮೆ ಅವನ ಕಡೆಗೆ ಚೆಲ್ಲಿ ಮತ್ತೆ ಹೀಗೆ !   ಅಡಗಿಕೊಂಡನೆಲ್ಲಿ ಎಂದು ಹುಡುಕಿಕೊಳ್ಳಬೇಕು ಹುಡುಕಿಕೊಂಡ ಬಳಿಕ ತ್ವರಿತ ಗಟ್ಟಿಗೊಳಿಸಬೇಕು !   ಕಳವು ಮಾಡುವವಗೆ ನಿಜಕು ಇರುವುದೊಂದೆ ದಾರಿ ; ಕಳವು ಮಾಡಿ ತಿರುಗಿ ಬರಲು ಬೇಕು ಅದೇ ದಾರಿ !   ಬಯಕೆಗಳನು ಸೃಷ್ಟಿಮಾಡಿ ತೂರಿಬಿಟ್ಟರೇನು? ನಿಯತವಾಗಿ ಬಯಕೆಗಳನು ಮೆಟ್ಟಿ ಹಾಕು ನೀನಿ ! ***