ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಅನುದಾನಿತ ಖಾಸಗಿ ಕಾಲೇಜುಗಳಲ್ಲಿ ಮೈಗಳ ಅಧ್ಯಾಪಕರಿಗೆ (ಸಹಾಯಕ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು, ಪ್ರಾಧ್ಯಾಪಕರು) ಕಾಲೇಜು ಶಿಕ್ಷಣ ಇಲಾಖೆ ಮೂಗುದಾರ ಹಾಕಲು ಮುಂದಾಗಿರುವುದು ಸ್ವಾಗತಾರ್ಹ, ಪದವಿ ಹಂತದ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಮಾರ್ಗದರ್ಶಕರಾಗಬೇಕಾದ ಅಧ್ಯಾಪಕರೇ ತಮ್ಮ ಜವಾಬ್ದಾರಿ ಮರೆತು, ತರಗತಿಗೆ ಚಕ್ಕರ್ ಹೊಡೆದು, ಅನಗತ್ಯ ರಾಜಕೀಯ ನಡೆಸುತ್ತಿದ್ದವರಿಗೆ ಇದು ಚಿಕಿತ್ಸಕ ಕ್ರಮ. ವಿದ್ಯಾರ್ಥಿಗಳು ಜ್ಞಾನಾರ್ಜನೆಗಾಗಿ ನಿತ್ಯ ಕಾಲೇಜಿಗೆ ಆಗಮಿಸುತ್ತಾರೆ. ಎಷ್ಟೋ ವೇಳೆ ಅಧ್ಯಾಪಕರ ಗೈರು ಹಾಜರಿ ವಿದ್ಯಾರ್ಥಿಗಳಿಗೆ ದೊಡ್ಡ ಹಿನ್ನಡೆ ಬಹುತೇಕ ಕಾಲೇಜುಗಳಲ್ಲಿ ಪಾಠಕ್ಕಿಂತ ಹೆಚ್ಚಾಗಿ ರಾಜಕೀಯ, ಬಂಡವಾಳ ಹೂಡಿಕೆ ವಿಷಯಗಳ ಚರ್ಚೆಯೇ ಜೋರಾಗಿರುತ್ತದೆ. ಕೈತುಂಬ ಸಂಬಳ ಪಡೆಯುವ ಅಧ್ಯಾಪಕರಲ್ಲಿ ಕೆಲವರು ಹೀಗೆ ಮೈಗಳ್ಳರಂತೆ ವರ್ತಿಸುವುದು ವೃತ್ತಿಧರ್ಮಕ್ಕೆ ಬಗೆದ ದ್ರೋಹವೇ ಸರಿ. ಕೆಲವು ಅಧ್ಯಾಪಕರು ಕಾಲೇಜಿಗಿಂತ ಹೆಚ್ಚಾಗಿ ಕ್ಯಾಂಟೀನ್‌ಗಳಲ್ಲಿಯೇ ಕಳೆದು, ಬೋಧನೆ ತಯಾರಿಗಿಂತ ಅನಗತ್ಯ ಚಿಂತನೆಗಳಲ್ಲಿ ತೊಡಗುವ ಬಗ್ಗೆ ದೂರುಗಳಿವೆ. ರಾಜ್ಯದಲ್ಲಿ ೪೩೦ ಸರಕಾರಿ ಪ್ರಥಮ ದರ್ಜೆ, ೩೨೧ ಅನುದಾನಿತ ಕಾಲೇಜುಗಳಿವೆ. ಅಧ್ಯಾಪಕರು, ಸಹ ಅಧ್ಯಾಪಕರು ವಾರದಲ್ಲಿ ೪೦ ತಾಸು ಕಾರ್ಯ ನಿರ್ವಹಿಸಬೇಕು ಎಂದು ಶಿಕ್ಷಣ ಇಲಾಖೆ ೨೦೦೯ರಲ್ಲೇ ಆದೇಶಿಸಿತ್ತು. ಆದರೆ, ಇದು ಕಾಲೇಜು ಹಂತದಲ್ಲಿ ಸಮರ್ಪಕ ಪಾಲನೆಯಾಗುತ್ತಿಲ್ಲ. ಕಾಲೇಜು ಶಿಕ್ಷಣ ಹಂತದಲ್ಲಿ ಮೇಲ್ವಿಚಾರಣೆ ಕೊರತೆಯಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಾದರೆ ಸಿ ಆರ್ ಪಿ,, ಬಿ ಆರ್‌ ಪಿ, ಬಿಇಒ, ಡಿಡಿಪಿಐ ಹೀಗೆ ವಿವಿಧ ಹಂತಗಳಿವೆ. ಈ ಇಲಾಖೆಯ ಅಧಿಕಾರಿಗಳು ಶಾಲೆಗಳಿಗೆ ದಿಢೀರ್ ಭೇಟಿ ನೀಡುವ ಭಯ ಕೆಳ ಹಂತದ ಶಿಕ್ಷಕರಿಗೆ ಸದಾ ಕಾಡುತ್ತಿರುತ್ತದೆ. ಆದರೆ, ಕಾಲೇಜು ಶಿಕ್ಷಣ ಇಲಾಖೆಯ ವಿಭಾಗ ಮಟ್ಟದಲ್ಲಿ ಜಂಟಿ ನಿರ್ದೇಶಕರು ಹಾಗೂ ರಾಜ್ಯ ಮಟ್ಟದಲ್ಲಿ ಆಯುಕ್ತರ ಕಚೇರಿ ಹೊರತುಪಡಿಸಿದರೆ ಮೇಲ್ವಿಚಾರಣೆಯ ಅಧಿಕಾರಿಗಳಿಲ್ಲ, ಸ್ನಾತಕ, ಸ್ನಾತಕೋತ್ತರ ಹಂತದಲ್ಲಿ ಶಿಕ್ಷಣ ಗುಣಮಟ್ಟ ಕಾಪಾಡುವಲ್ಲಿ ಹಿನ್ನಡೆಯಾಗಲು ಇದೂ ಒಂದು ಕಾರಣ. ಶೈಕ್ಷಣಿಕ ಅಭಿವೃದ್ಧಿಗಾಗಿಯೇ ಪ್ರತಿ ಕಾಲೇಜಿಗೆ ಕಾಲೇಜು ಅಭಿವೃದ್ಧಿ ಸಮಿತಿ ರಚಿಸಲಾಗಿದೆ. ಆದರೆ, ಇವುಗಳ ಮೇಲ್ವಿಚಾರಣೆ ಅಷ್ಟಕ್ಕಷ್ಟೇ ಎನ್ನುವಂತಿದೆ. ಬಹುತೇಕ ಕಾಲೇಜುಗಳಲ್ಲಿ ಕಾಯಂ ಅಧ್ಯಾಪಕರಿಲ್ಲ. ಹಲವೆಡೆ ಅಧ್ಯಾಪಕರು ತಮ್ಮೆಲ್ಲ ಕಾರ್ಯಭಾರವನ್ನೆಲ್ಲ 'ಅತಿಥಿ'ಗಳ ಮೇಲೆ ಹೇರಿ, ಅನ್ಯ ಚಟುವಟಿಕೆಗಳಲ್ಲಿ ತೊಡಗುವುದು ಸಾಮಾನ್ಯ. ಕೆಲವು ಕಾಲೇಜುಗಳು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿ ಮಾದರಿ ಕಾಲೇಜುಗಳಾಗಿವೆ. ಅಲ್ಲಿಯ ಪ್ರಾಂಶುಪಾಲರು, ಅಧ್ಯಾಪಕರ ಪರಿಶ್ರಮ ಸ್ಮರಣೀಯ. ಹೊಸತನ್ನು ಆವಿಷ್ಕರಿಸುವ, ಸಂಶೋಧಿಸುವ, ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುವ ಅಧ್ಯಾಪಕರಿದ್ದಾರೆ ಎನ್ನುವುದನ್ನು ಮರೆಯುವಂತಿಲ್ಲ ಇನ್ನಾದರೂ ಅಲ್ಲಲ್ಲಿ ಇರುವ ಮೈಗಳ ಅಧ್ಯಾಪಕರು ಸರಕಾರ ನೀಡುವ ಕೈತುಂಬ ವೇತನಕ್ಕೆ ಋಣಿಯಾಗಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಮೈಗೊಡವಿ ನಿಲ್ಲಬೇಕಿದೆ. ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೦೭-೦೮-೨೦೨೫ ಚಿತ್ರ ಕೃಪೆ: ಅಂತರ್ಜಾಲ ತಾಣ