ಸ್ಟೇಟಸ್ ಕತೆಗಳು (ಭಾಗ ೧೪೦೮) - ಹೆಜ್ಜೆ
ಬರಹಗಾರರ ಬಳಗ
ಆಗಸ್ಟ್ ೦೯, ೨೦೨೫
೯ ವೀಕ್ಷಣೆಗಳು
ಅವರು ಮನೆಗೆ ಬರ್ತಾರೆ ಅಂದ್ರೆ ಭಯ ಶುರುವಾಗ್ತಾ ಇತ್ತು, ಅವರದ್ದು ತಿಂಗಳಿಗೊಂದು ಸಲ ನನ್ನ ಮನೆಗೆ ಭೇಟಿಯು ಆಗ್ತಾ ಇತ್ತು. ಅವರು ನಮ್ಮ ಶಾಲೆಯ ವೇದವ್ಯಾಸ ಮೇಷ್ಟ್ರು. ಅವರಿಗೆ ನಾನಂದ್ರೆ ಎಲ್ಲರಿಗಿಂತ ಸ್ವಲ್ಪ ಹೆಚ್ಚು ಪ್ರೀತಿ, ಮನೆಯಲ್ಲಿ ನನ್ನವರು ಅಂತ ಯಾರು ಇಲ್ಲದ ಕಾರಣ ನನ್ನನ್ನ ಸ್ವಲ್ಪ ಹೆಚ್ಚು ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದರು. ಆಗಾಗ ಬಂದು ಬದುಕಿನ ದಾರಿಯನ್ನ ಸರಿಯಾಗಿ ಮನ ಮುಟ್ಟುವ ಹಾಗೆ ಹೇಳಿ ಹೋಗ್ತಾ ಇದ್ರು. ಆದರೆ ಅವರ ಮಾತುಗಳನ್ನು ಕಿವಿಯಲ್ಲಿ ಕೇಳಿ ಕಾರ್ಯರೂಪಕ್ಕೆ ತರಲು ತುಂಬಾ ಸಮಯ ತೆಗೆದುಕೊಳ್ತಾಯಿದ್ದೆ. ಮೊನ್ನೆ ಬಂದಾಗ ಸ್ವಲ್ಪ ಜೋರು ಮಾತಿನಲ್ಲಿ ಮಾತನಾಡುವುದಕ್ಕೆ ಪ್ರಾರಂಭ ಮಾಡಿದ್ರು. ನೋಡು ಮಗ ನಿನ್ನ ಸಮಸ್ಯೆ ಏನು ಗೊತ್ತಾ, ನೀನು ನಿನ್ನ ಮನೆಯ ಜಗಲಿಯಲ್ಲಿ ಕುಳಿತು ಮನೆಯ ಗೇಟಿನ ಹೊರಗಡೆ ದಾರಿ ಸರಿಯಾಗಿ ಕಾಣುತ್ತಿಲ್ಲ, ನನಗೆ ಇನ್ನು ತುಂಬಾ ದೂರ ಹೋಗುವುದಿದೆ ನಾನು ಹೇಗೆ ತಲುಪೋದು ಅಂತ ಕುಳಿತಲ್ಲೇ ಯೋಚಿಸಿದರೆ ಖಂಡಿತವಾಗಿಯೂ ಮುಂದೆ ಹೋಗುವುದಕ್ಕೆ ಸಾಧ್ಯವಾಗಲ್ಲ. ಎದ್ದು ಒಂದೆರಡು ಹೆಜ್ಜೆ ನಡೆಯುವುದಕ್ಕೆ ಪ್ರಾರಂಭ ಮಾಡು, ನಡಿತಾ ನಡಿತಾ ದಾರಿ ಸರಿಯಾಗಿ ಕಾಣುವುದಕ್ಕೆ ಪ್ರಾರಂಭವಾಗುತ್ತದೆ. ಆಗ ಎಷ್ಟು ದೂರ ತಲುಪಬೇಕು ಅನ್ನೋದು ಗೊತ್ತಾಗುತ್ತೆ. ಎಷ್ಟು ದೂರ ಬಂದಿದ್ದೇನೆ ಅನ್ನೋದು ಗೊತ್ತಾಗುತ್ತೆ. ಬಾಯಿ ಮಾತಿನಲ್ಲಿ ಜಗತ್ತನ್ನೇ ಗೆದ್ದಿದ್ದೇನೆ ಅಂತ ಸಂಭ್ರಮಿಸಬಹುದು ಆದರೆ ಕೆಲಸಕ್ಕಿಳಿದಾಗ ಗೊತ್ತಾಗೋದು ನೀನು ನಿನ್ನೂರನ್ನಾದರೂ ಗೆದ್ದಿದ್ದೀಯಾ? ಅಂತ.
ಅರ್ಥ ಮಾಡ್ಕೊ ಇನ್ನಾದರೂ ಕೆಲಸದ ಕಡೆಗೆ ಮನಸ್ಸು ಮಾಡು.ಮಾತಿಗಿಂತ ಕೆಲಸದ ಕಡೆಗೆ ಹೆಚ್ಚು ಗಮನ ನೀಡು. ಅಂತಂದವರು ಹೋಗೇ ಬಿಟ್ರು. ಆ ಮಾತು ತುಂಬಾ ಆಳವಾಗಿ ಮನಸ್ಸಿಗೆ ನಾಟಿತು. ಇನ್ನಾದರೂ ಬದಲಾಗಬೇಕಲ್ವಾ?
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಆಗಸ್ಟ್ ೦೯, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬