ಸಮುದಾಯ ಪ್ರಜ್ಞೆ ಬಿತ್ತುವ ಪ್ರಥಮ ಪೂಜಿತ
ಕೆ.ಪಿ.ಅಶ್ವಿನ್ ರಾವ್
ಆಗಸ್ಟ್ ೨೮, ೨೦೨೫
೧೦ ವೀಕ್ಷಣೆಗಳು
ಆ ಕಾಲಕ್ಕೂ, ಈ ಕಾಲಕ್ಕೂ ಗಣಪ ಪ್ರಥಮ ಪೂಜಿತ. ಅಂದು ದೇವಾನುದೇವತೆಗಳು ತಮ್ಮನ್ನು ರಕ್ಷಿಸೆಂದು ಬಗೆಬಗೆಯಲ್ಲಿ ಈ ಗಜಾನನನ್ನು ಪ್ರಾರ್ಥಿಸಿದ್ದು ಪುರಾಣದ ಕತೆಗಳಾದರೆ, ಆಧುನಿಕ ಕಾಲಘಟ್ಟದಲ್ಲಿ ಗಣಪ ಸ್ವೀಕರಿಸುತ್ತಿರುವ ಪ್ರಾರ್ಥನೆಗಳೇ ವಿಭಿನ್ನ. ಗಣೇಶ ಎಳೆಯ ಮಕ್ಕಳಿಂದ ಹಿರಿಯರ ತನಕ ಸರ್ವರಿಗೂ ಇಷ್ಟವಾಗುವ ದೇವರು. ಬುದ್ಧಿ ಪ್ರದಾಯಕ, ವಿಘ್ನ ನಿವಾರಕ ಮುಂತಾದ ಗುಣಗಳ ಮೂಲಕ ಧರ್ಮವನ್ನೂ ಮೀರಿದ ಸಾಂಸ್ಕೃತಿಕ ರಾಯಭಾರಿ ಅವನು. ಅನಾದಿ ಕಾಲದಿಂದಲೂ ಶುಭಾರಂಭದ ಪ್ರತೀಕನಾಗಿದ್ದಾನೆ. ಎಲ್ಲಾ ಕಾಲಕ್ಕೂ ಎಲ್ಲಾ ಪರಿಸ್ಥಿತಿಗಳಿಗೂ ಹೊಂದಿಕೊಳ್ಳುವ ಗಣೇಶ ಸದಾ ಪ್ರಸ್ತುತ.
ಗಣೇಶ ಹಬ್ಬದಂದು ಊರ ಜನರೆಲ್ಲಾ ಒಗ್ಗೂಡುತ್ತಾರೆ. ಸಕುಟುಂಬ ಪರಿವಾರ ಸಮೇತರಾಗಿ ಪೆಂಡಾಲು, ದೇವಸ್ಥಾನಗಳಲ್ಲಿ ಗಣೇಶನ ದರುಶನ ಪಡೆದು ಕೃತಾರ್ಥರಾಗುತ್ತಾರೆ. ಹೀಗೆ ಆಚರಣೆಯಿಂದಲೇ ಒಗ್ಗಟ್ಟನ್ನು ಜನರಿಗೆ ಕಲಿಸುತ್ತಾನೆ. ಡಿಜಿಟಲ್ ಯುಗದಲ್ಲಿ ಎಲ್ಲರೂ ತಮ್ಮ ತಮ್ಮ ಮೊಬೈಲುಗಳೊಳಗೆ ಹೊಕ್ಕಂತ ದಿನಗಳಲ್ಲಿ, ಅದರಿಂದ ಎದ್ದು ಬಂದು, ಸಮುದಾಯಗೊಳ್ಳುವಂತೆ ಪ್ರೇರೇಪಿಸುವವನು ಗಣಪ.
ಇತ್ತೀಚಿನ ದಿನಗಳಲ್ಲಿ ಗಣೇಶ ಪರಿಸರ ಸಂರಕ್ಷಣೆಯ ಕಾಳಜಿ ಮೂಡಿಸುವ ನ್ಯಾಚುರಲಿಸ್ಟ್ ಆಗಿಯೂ ಜನಪ್ರಿಯನಾಗಿದ್ದಾನೆ. ಪರಿಸರಕ್ಕೆ ಹಾನಿಯಾಗದಂತೆ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಗಣೇಶೋತ್ಸವ ಆಚರಿಸಬೇಕಾದುದು ಎಲ್ಲರ ಕರ್ತವ್ಯ ಎನ್ನುವುದನ್ನೂ ಆತ ನೆನಪಿಸುತ್ತಾನೆ. ಹೀಗಾಗಿ ಗಣೇಶೋತ್ಸವ ಆಚರಣೆ ಮಾತ್ರವಲ್ಲ ಸಾಮಾಜಿಕ ಬದ್ಧತೆಯನ್ನು ಮೆರೆಯುವ ಹಬ್ಬವೂ ಇದಾಗಿದೆ. ಒಟ್ಟಾರೆ ಹೇಳುವುದಾದರೆ, ಗಣೇಶ ಹಬ್ಬಧಾರ್ಮಿಕ ಆಚರಣೆಗಷ್ಟೇ ಸೀಮಿತವಾಗಿಲ್ಲ. ಆಧ್ಯಾತ್ಮಿಕತೆ, ಸಂಸ್ಕೃತಿ, ಸಾಮಾಜಿಕ ಮೌಲ್ಯಗಳು ಮತ್ತು ಪರಿಸರ ಪ್ರೇಮ ಎಲ್ಲವೂ ಮೇಲೈಸಿದ ಪರ್ವವಾಗಿದೆ. ಸಮಸ್ತರಿಗೂ ಗೌರಿ ಗಣೇಶ ಒಳಿತನ್ನುಂಟು ಮಾಡಲಿ.
ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೨೭-೦೮-೨೦೨೫
ಪ್ರಕಟಿಸಿದ: ಆಗಸ್ಟ್ ೨೮, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬