ಪುಲಕಿತವಾಯಿತು ನೆಲ ಪುಲಕಿತವಾಯಿತು ನೆಲ, ನೀ ಸುರಿಯಲು ಮುಂಗಾರಿನ ಮಳೆಯೆ ಕಲುಷಿತವೆಲ್ಲವ ತೊಳೆಯುತ ಹರಿಯುವ  ಜಲಧಾರೆಯ ಸೆಲೆಯೆ!   ಸುಡು-ಸುಡು ಬಿಸಿಲಿಗೆ ಬಣ - ಬಣ ಒಣಗುತ ಮೈಯೊಡ್ಡಿದ ಭೂಮಿ ಕಣ-ಕಣದಲು ಜಲಧಾರೆಯ ಹೀರುತ ಜಲಾವರ್ತಗಾಮಿ !   ಭೂತಾಯಿಗೆ ಹಸಿರುಡುಗೆಯನುಡಿಸುತ ಮಾತಾಯಿಯ ಚೆಲುವು ಮಾತಾಡಿತು ಚೆಲುವು ಮಾತಾಡಿತು ಕಂಗೊಳಿಸುತ ಕಂಗಳ ಆ ತಾಯಿಯ ಒಲವು !   ಹೊಸ ಚಿಗುರಿಗೆ ಹೊಸ ಜೀವವ ತುಂಬುವ ಮನಮೋಹಕ ದಾತೆ ಕಸಗಳಿಗೂ ಸಹ ಕಸುವನು ನೀಡುವ ಮೃತ್ಯುಂಜಯ ಮಾತೆ !   ಪುಲಕಿತವಾಯಿತು ನೆಲ ನೀ ಸುರಿಯಲು ಮುಂಗಾರಿನ ಮಳೆಯ ಕಲುಷಿತವೆಲ್ಲವ ತೊಳೆಯುವ ಕಳೆಯುವ ಮುಂಗಾರಿನ ಕಳೆಯೇ ! *** ಮೀಟು ತಂತಿಯ ಮೀಟು ತಂತಿಯ ನಾದ ಮಿಲನಕೆ ಗಾನಗಂಗೆಯ ತುಡಿತಕೆ ; ನಾಟುವಂದದ ತಾಳ - ಮೇಳಕೆ ಸಾನುರಾಗದ ದುಡಿತಕೆ !   ಭಾವಮಾಲೆಯ ನಾದಲೀಲೆಯ  ಕಲ್ಪನೆಯ ಆಲೋಕಕೆ ; ಜೀವ ತುಂಬುವ ಭವ್ಯ ಬಿಂಬದ ನಂಬಿಕೆಯ ಅಭಿಷೇಕಕೆ !   ದಿವ್ಯ ಮಿಲನದ ಸವ್ಯ ಸಲಿಲದ ನವ್ಯ ರೂಪಿನ ಚಿಂತನ ; ಭವ್ಯ ಭಾವದ ಕವ್ಯ ಕಲ್ಪದ ಸತ್ವ ಸಿಂಚನ ಮಂಥನ !   ಮೀಟು ತಂತಿಯ ನಾದ ಮಿಲನದ  ಗಾನಗಂಗೆಯ ತುಡಿತಕೆ ; ನಾಟುವಂದದ ತುಡಿತ - ಮಿಡಿತಕೆ ಹಿಡಿದ ನಾಡಿಯ ಬಡಿತಕೆ ! ***