ಆಕಾಶವೊಂದು ದಿನ ಭೂಮಿಗೆಂದಿತು ಹೀಗೆ :  “ ಯಾಕಾಗಿ ನನ್ನತ್ತ ನೋಡುತಿರುವೆ?” ಈ ಪ್ರಶ್ನೆಗಾಕಾಶ ಭೂಮಿಗೆಂದಿತು ಹೀಗೆ :  “ಬೇಕಾದ ರೀತಿಯಲಿ ನಿನ್ನ ಮುದ್ದಿಸಲೆಂದು”   ಭೂತಾಯಿಯ ಪ್ರಕೃತಿಲೀಲೆ - ಗಾಕಾಶವೆ ಕನ್ನಡಿ ;  ಆಕಾಶಕೆ ಭೂಮಾತೆಯ ವೈವಿಧ್ಯವೆ ಮುನ್ನುಡಿ !   ಮೇಲೆ ನೋಡೆ ನಿರಾಕಾರ ನಿರಭ್ರತೆಯ ವಿಭ್ರಮ ; ಲೀಲೆಯಾಗಿ ಪರಿವರ್ತಿತ - ವಾದ ದಿವ್ಯ ಸಂಭ್ರಮ !   ಪ್ರಕೃತಿ ತನ್ನ ಲಾಲಿತ್ಯದ ವೈವಿಧ್ಯದ ದೃಶ್ಯವ ಬೆತ್ತಲಾಗಿ ತೋರಿಕೊಳುತ ಆಕಾಶದ ಸ್ಪರ್ಶವ   ನಿನಗೆ ನಾನು ನನಗೆ ನೀನು ತೋರಿಕೊಳುವ ಅಂತರ ಮೇಲೆ-ಕೆಳಗೆ ಆಚೆ - ಈಚೆ ಇರದೆ ಇರೆ ನಿರಂತರ   ನಿರಾಕಾರ ದರ್ಶನಕ್ಕೆ ಸಾಕಾರದ ಸ್ಪರ್ಶನ ಚಿದಾಕಾಶ ನಿದರ್ಶನಕೆ ಸದವಕಾಶ ದರ್ಶನ ! *** ‘ನಾನು’ ಎಂಬ ಚಿದಾನಂದ ‘ತಾನು’ ಎಂಬ ಅಹಂಕಾರ- ವನ್ನು ಹರಣ ಮಾಡು ‘ನಾನು’ ಎಂಬ ಚಿದಾನಂದ ಭಾವ ಸ್ಫುರಣೆ ನೀಡು !   ನನ್ನದೆಂಬುದೆಲ್ಲವನ್ನು ನಿನ್ನ ಪದಕೆ ಸುರಿದು ನಿನ್ನ ದಯೆಗೆ ತಲೆಯ ಬಾಗಿ ನನ್ನತನವ ತರಿದು !   ನನ್ನ ಮೋಹ ಮದಗಳನ್ನು ಗಂಟು ಕಟ್ಟಿ ಎಸೆದು ನಿನ್ನ ನೇಹ-ಗೇಹಗಳಿಗೆ ನಂಟು ಮಾಡಿ ಬೆಸೆದು !   ನಾನು ಬೇರೆ ನೀನು ಬೇರೆ ಎಂಬ ದ್ವಂದ್ವ ತರಿದು ಸಾನುರಾಗದಿಂದ ನಿನ್ನ ಬಿಂಬದಲ್ಲಿ ಬೆರೆದು !   ‘ತಾನು’ ಎಂಬ ಅಹಂಕಾರ- ವನ್ನು ಹರಣ ಮಾಡು ; ‘ನಾನು’ ಎಂಬ ಚಿದಾನಂದ ದಲ್ಲಿ ಲೀನ ಮಾಡು ! ***