ಕೆಲಸದ ನಿಮಿತ್ತ ಊರು ಬಿಡುವವನಿದ್ದ ಮಗ. ಅಪ್ಪ ಪಕ್ಕದಲ್ಲಿ ಕುಳಿತು ಮಾತನಾಡುವುದಕ್ಕೆ ಪ್ರಾರಂಭ ಮಾಡಿದ್ರು. ಇಷ್ಟು ವರ್ಷದವರೆಗೆ ಪ್ರತಿದಿನವೂ ತಪ್ಪುಗಳನ್ನೇ ಹೇಳಿ ಹೇಳಿ ತಂದೆಯ ಬಗ್ಗೆ ಒಂಥರಾ ಜಿಗುಪ್ಸೆ ಮಗನಿಗೂ ಉಂಟಾಗಿತ್ತು. ಆದರೆ ಇವತ್ತು ಕೆಲಸದ ನಿಮಿತ್ತ ದೂರದೂರಿಗೆ ಹೊರಡಲೇಬೇಕು ತಂದೆಯ ಮಾತನ್ನ ಕೇಳಿಸಿ ಕೊಳ್ಳಲೇಬೇಕು. ಆದರೆ ಇವತ್ತು ಅಪ್ಪ ತಪ್ಪಿನ ಬಗ್ಗೆ ಮಾತನಾಡಲೇ ಇಲ್ಲ. ಅಪ್ಪ ಹೇಳಿದ್ದು ಇಷ್ಟೆ ನೋಡು ಮಗ ನಿನ್ನ ಎದೆಯೊಳಗೆ ಮನಸಿನೊಳಗೆ ಕದವನ್ನು ಹಾಕಿಕೊಂಡು ಜೋಪಾನವಾಗಿ ಬದುಕಲಾರಂಭಿಸು. ಎದೆಯೊಳಗೆ ಮನಸೊಳಗೆ ಯಾರು ಬರುವವರಿದ್ದರೂ ಕದವನ್ನ ತಟ್ಟಿ ಒಳ ಬರಬೇಕು. ಹಾಗೆ ಒಳಬರುವವರನ್ನ ನಿನಗೆ ಅಗತ್ಯವಿದ್ದರೆ ಮಾತ್ರ ಒಳ ಬಿಡು. ಇಲ್ಲವಾದರೆ ಅಲ್ಲೇ ಮಾತಾಡಿ ವಾಪಾಸು ಕಳಿಸು. ನಿನ್ನ ಎದೆಯೊಳಗೆ ಮನಸೊಳಗೆ ನಿನ್ನ ಬದುಕಿಗೆ ಪೂರಕವಾಗುವವರು ಮಾತ್ರ ಮನೆ ಮಾಡಬೇಕು. ಅಂತಹವರಿಗೆ ಮಾತ್ರ ಅಲ್ಲಿ ಸ್ಥಳಾವಕಾಶ ಇರಬೇಕು. ಅದರ ಹೊರತಾಗಿ ನಿನ್ನನ್ನ ಕೆಳಗಿಳಿಸುವವರು ನೋವುಂಟು ಮಾಡುವವರು ನಿನಗೆ ಅಗತ್ಯವಿಲ್ಲದವರನ್ನ ಕದದಿಂದ ಹೊರಗಿಟ್ಟು ಗಟ್ಟಿಯಾದ ಕದವನ್ನು ಹಾಕಿಕೊಂಡು ಬಿಡು. ಇಷ್ಟಿದ್ದರೆ ಸಾಕು ನಿನಗೆ ಯಾವತ್ತೂ ಸೋಲಾಗುವುದಿಲ್ಲ. ಎಲ್ಲವೂ ಒಳಿತಾಗುತ್ತದೆ .ಇಷ್ಟು ದಿನದವರೆಗೂ ತಂದೆಯಾಡುತ್ತಿದ್ದ ಮಾತು ಬೇರೆ ಈಗ ಬೇರೆ ಆದರೂ ಪರವಾಗಿಲ್ಲ ತಂದೆ ಬದುಕಿಗೆ ದಾರಿ ಹೇಳುವವರು ಅಂತಂದುಕೊಂಡು ಎಲ್ಲವನ್ನ ಕೇಳಿ ಪರಿಚಯವಿಲ್ಲದ ಊರಿಗೆ ಹೊರಟುಬಿಟ್ಟ ಅಪ್ಪನ ಮಾತು ಕಿವಿಯೊಳಗೆ ಗಟ್ಟಿಯಾಗಿತ್ತು. -ಧೀರಜ್ ಬೆಳ್ಳಾರೆ ಚಿತ್ರ ಕೃಪೆ: ಇಂಟರ್ನೆಟ್ ತಾಣ