"He must be called the Saviour of Humanity. I believe that if a man like him were to assume the dictatorship of the modern world, he would succeed in solving its problems in a way that would bring it much-needed Peace & Happiness"-ಬರ್ನಾಡ್ ಶಾ, The Genuine Islam, Singapore, Vol. 1, No 8, 1936. ನಾಲ್ಕನೇ ಶತಮಾನದ ಪ್ರಾರಂಭದಲ್ಲಿ ಹಾಗೂ ಮಧ್ಯಯುಗದ ಹೊತ್ತಿಗೆ, ಅರೇಬಿಯದ ಮರುಭೂಮಿ ಯುದ್ಧರಕ್ತದಿಂದ ಜರ್ಜರಿತಗೊಂಡಿತ್ತು. ತಲಬುಡವಿಲ್ಲದ ಅಲ್ಪ ಕಾರಣಗಳಿಗೂ ಕತ್ತಿಗಳ ಘರ್ಷಣೆ, ರಕ್ತದ ಹೊಳೆಗಳೇ ಹರಿಯುತ್ತಿದ್ದವು; ಅಜ್ಞಾನತೆಯ ಕ್ರೂರಿತೆಯು ಹೆಣ್ಣು ಮಕ್ಕಳನ್ನು ಮರಳಿನೊಳಗೆ ಜೀವಂತವಾಗಿ ಸಮಾಧಿ ಮಾಡಿದ ಕಾಲವು ಅದು. ಅದೇ ಸಮಯದಲ್ಲಿ, ಐರೋಪ್ಯ ಖಂಡಗಳಲ್ಲಿ ಕ್ರೈಸ್ತ ಧರ್ಮವು ಸೀಸರಿಸಂ ಸಿದ್ಧಾಂತಕ್ಕೆ ತಲೆಬಾಗಿತ್ತು; ಇದರಿಂದಲೇ ಅದು “ಸೀಸರೈಸ್ ಧರ್ಮ”ವೆಂಬ ಹೆಸರಿನ ಕಟ್ಟುಬದ್ಧ ತತ್ವವಾಗಿ ರೂಪಾಂತರಗೊಂಡಿತು. ಮೂರು ಶತಮಾನಗಳ ಹಿಂದೆ ಯೇಸು ಕ್ರೈಸ್ತ ಅವರು ಉಪದೇಶಿಸಲ್ಪಟ್ಟ ಶುದ್ಧ ಕ್ರೈಸ್ತಧರ್ಮ ಅದಾಗಿರಲಿಲ್ಲ; ಬದಲಿಗೆ, ಅಧ್ಯಾತ್ಮಿಕತೆ ಮತ್ತು ಹರ್ಷಾಚರಣೆಗಳನ್ನು ಮರೆಯಿಸಿಕೊಂಡ ಕಠಿಣ ರಾಜಕೀಯ ವಾದವಾಗಿತ್ತು. ಮಾನವಕುಲವೆಲ್ಲ ಅಜ್ಞಾನದ ಅಂಧಕಾರದಲ್ಲಿ ನರಳುತ್ತಿದ್ದ ಈ ಸಂದರ್ಭದಲ್ಲಿ, ಜ್ಞಾನ-ಕರುಣೆಯ ದೀಪವಾಗಿ ಪ್ರವಾದಿ ಮುಹಮ್ಮದ್ (ಸ) ಅವರು ಮಾನವರ ಪಾಲಿಗೆ ವರದಾನವಾಗಿ ಲೋಕದಲ್ಲಿ ಅವತಾರ ಮಾಡಿದರು. ಅಜ್ಞಾನ ಮತ್ತು ನಿಷ್ಕರುಣೆಗೆ ಅಪಕೀರ್ತಿ ಪಡೆದಿದ್ದ ಅರೇಬಿಯ ಬಂಜರು ಮರುಭೂಮಿಯಲ್ಲೇ ಶಾಂತಿ-ಸೌಹಾರ್ದದ ನೆಲೆಗಟ್ಟನ್ನು ಯಶಸ್ವಿಯಾಗಿ ಸ್ಥಾಪಿಸಿದರು. ಅರೇಬಿಯಾ ಪರ್ಯಾಯದ್ವೀಪದ ಸುಡುವ ಮರುಭೂಮಿಯಿಂದ ಬೀಸಿದ ಆ ಕರುಣೆಯ ತಂಪಾದ ಬಿರುಗಾಳಿ, ಜಗತ್ತಿನಾದ್ಯಂತ ಜನಾಂಗಗಳಿಗೆ ನೆಮ್ಮದಿಯನ್ನು ನೀಡಿತು. ಪ್ರವಾದಿ (ಸ) ಅವರ ಧರ್ಮ ಬೋಧನೆಯ ಕೆಲವೇ ವರ್ಷಗಳಲ್ಲಿ, ಇದೆಲ್ಲವೂ ಕೊನೆಗಾಣಿತು; ಕ್ರಿ.ಶ. 650ರ ಹೊತ್ತಿಗೆ ಈ ಪ್ರಪಂಚದ ಒಂದು ದೊಡ್ಡ ಭಾಗವು ಮೊದಲು ಇದ್ದಕ್ಕಿಂತ ವಿಭಿನ್ನವಾದ ಪ್ರಪಂಚವಾಯಿತು. ಇದು ಮಾನವನ ಇತಿಹಾಸದ ಅತ್ಯಂತ ಗಮನಾರ್ಹ ಅಧ್ಯಾಯಗಳಲ್ಲಿ ಒಂದಾಗಿದೆ. ಈ ಅದ್ಭುತ ನಾಟಕೀಯ ಬದಲಾವಣೆಗೆ ಒಂದೇ ಒಂದು ಮುಖ್ಯ ಕಾರಣವಾಗಿದ್ದು ಒಬ್ಬ ವ್ಯಕ್ತಿಯ ಜೀವನವಾಗಿದೆ. ಅದು ಕರುಣೆಗೆ ಹೊಸ ಭಾಷೆಯನ್ನು ಪರಿಚಯಿಸಿದ ಮೆಕ್ಕಾದ ಪ್ರವಾದಿಯ ಶಾಂತಿಯ ಪ್ರಚಾರವಾಗಿತ್ತು. ಅವರ ನುಡಿ ಮತ್ತು ನಡೆಗಳ ಬೆರಳೆಣಿಕೆಯ ಉದಾಹರಣೆಗಳು ಅವರು ಶಾಂತಿಯ ಪ್ರತಿಪಾದಕರು ಎಂದು ಎತ್ತಿ ಹಿಡಿಯಲು ಸಾಧ್ಯವಾಗಿದೆ. ಮಕ್ಕಾದ ಖುರೈಶ್ ಪಂಗಡದವರು ಧೈರ್ಯಶಾಲಿಯಾಗಿದ್ದರು. ಹಾಗೆಯೇ, ಅವರು ಯುದ್ಧಗಳಲ್ಲಿ ಪ್ರವೀಣರಾಗಿದ್ದರು. ಅವರು ರಕ್ತವನ್ನು ಹರಿಸುವಲ್ಲಿ ಹಿಂದೇಟು ಹಾಕುತ್ತಿರಲಿಲ್ಲ. ಅವರಲ್ಲಿ ಉಮರ್ (ರ) ಅವರೂ ಒಬ್ಬರು. [ನಂತರ, ಅವರು ಪ್ರವಾದಿ (ಸ) ಅವರ ದಯಾಶೀಲ ನಡತೆಗೆ ಮನಸೋತು ಪ್ರವಾದಿ (ಸ) ಅವರ ಅನುಯಾಯಿ ಆದರು]. ಅಂತಹವರ ನಡುವೆ ಶಾಂತಿಯ ಸಂದೇಶ ಸಾರುವುದು ಕಷ್ಟಕರವಾಗಿತ್ತು. ಆದರೆ, ಪ್ರವಾದಿ (ಸ) ಅವರ ಕರುಣೆಯ ನಡೆಗಳು ವಿರೋಧಿಗಳ ಕಠೋರ ಮನಸ್ಸುಗಳನ್ನೂ ಮೃಧುಗೊಳಿಸುತಿತ್ತು. ಇಂದು ತಮ್ಮನ್ನು ‘ಮುಸ್ಲಿಮರು’ ಎಂದು ಕರೆದುಕೊಳ್ಳುವ ಕೆಲವು ಮೂಲಭೂತ ಗುಂಪುಗಳ ಅಸಹಿಷ್ಣು ನಡೆಗಳಿಂದ, ಇಸ್ಲಾಂ ಧರ್ಮವನ್ನು ಪ್ರಸ್ತುತ ಹಿಂಸೆಯ ಧರ್ಮವೆಂದು ವ್ಯಾಪಕವಾಗಿ ಗ್ರಹಿಸಲಾಗಿದೆ. ನಿಜವಾಗಿ, ಇವರು ಪ್ರವಾದಿ (ಸ) ಅವರ ತತ್ವಬೋಧನೆಗಳಿಗೆ ತದ್ವಿರುದ್ಧವಾಗಿವೆ. ಪ್ರವಾದಿ(ಸ) ಅವರ ಬದುಕಿನ ಕೆಲವೇ ಕೆಲವು ಘಟನೆಗಳು ಅವರನ್ನು ಶಾಂತಿಯ ಪ್ರತಿಪಾದಕರು ಎಂದು ಎತ್ತಿ ಹಿಡಿಯಲು ಸಾಧ್ಯವಾಗಿದೆ. ಉದಾಹರಣೆಗೆ, ಒಮ್ಮೆ ಪ್ರವಾದಿ(ಸ) ಅವರು ತಮ್ಮ ಅನುಯಾಯಿಗಳೊಂದಿಗೆ ರಾತ್ರಿಯ ನಮಾಜ್ ಅನ್ನು ಮಾಡಲು ಮಸೀದಿಯತ್ತ ಹೋಗುತ್ತಿದ್ದರು. ದಾರಿಯಲ್ಲಿ ನಾಯಿಯೊಂದು ಮಲಗಿದ್ದ ಕಾರಣ, ಪ್ರವಾದಿ ಅವರು ದಾರಿಯನ್ನು ಬದಲಾಯಿಸಿ, ಬೇರೆ ದಾರಿಯಿಂದ ಮಸೀದಿಗೆ ಹೋದರು. ಕೇಳಿದಾಗ, ತಮ್ಮ ನಡಿಗೆ ನಾಯಿಯ ನಿದ್ರೆಯನ್ನು ಕೆಡಿಸಬಹುದು ಎಂದರು!! 'ಸಲಾಂ' ಎಂಬುವುದು ಪ್ರವಾದಿ (ಸ) ಅವರಿಂದ ಬೋಧಿಸಲ್ಪಟ್ಟ ಶಾಂತಿಯ ಜಪ; ಮತ್ತು ಅವರ ಜೀವನದಲ್ಲಿ ಅದನ್ನು ಉದಾಹರಣೆಯಾಗಿ ನಾವು ಕಾಣಬಹುದು. ಪ್ರವಾದಿ (ಸ) ಅವರು ಹಿಂಸೆಯ ಪ್ರವಾದಿಯಾಗಿರಲಿಲ್ಲ; ಬದಲಾಗಿ, ಶಾಂತಿ ಬೋಧಿಸಿದ ಪ್ರವಾದಿಯಾಗಿದ್ದರು. ಕುರ್‌ಆನ್‌ ನಲ್ಲಿ ಅವರನ್ನು ‘ಸಮಗ್ರ ಮಾನವೀಯತೆಗಾಗಿ ಕಳುಹಿಸಲ್ಪಟ್ಟ ಕರುಣಾಮಯಿ’ ಎಂದು ಹೇಳಲಾಗಿದೆ. ಅವರು ಸಂಪೂರ್ಣ ಅರ್ಥದಲ್ಲಿ ಶಾಂತಿಪರ ವ್ಯಕ್ತಿತ್ವ ಹೊಂದಿದ್ದರು. ಅವರ ಶಾಂತಿಗೆ ಒಲಿದುಕೊಳ್ಳುವ ಸ್ವಭಾವ ಎಷ್ಟು ಇತ್ತು ಅಂದರೆ:  ಒಮ್ಮೆ ಅವರು ‘ಹರ್ಭ್’ (ಅರ್ಥ: ಯುದ್ಧ) ಎಂಬ ಹೆಸರಿನ ಮಗುವನ್ನು ಭೇಟಿಯಾದರು. ಪ್ರವಾದಿ (ಸ) ಅವರು ಆ ಹೆಸರನ್ನು ಇಷ್ಟ ಪಡಲಿಲ್ಲ. ಹಾಗಾಗಿ, ಅವರು ಆ ಮಗುವಿನ ಹೆತ್ತವರಿಗೆ ಗೆ ಆ ಹೆಸರನ್ನು ‘ಹಸನ್’ (ಅರ್ಥ: ಒಳಿತು) ಎಂದು ಬದಲಾಯಿಸಲು ಸಲಹೆ ನೀಡಿದರು. ಮಗು ಬದುಕುದ್ದಕ್ಕೂ ಶಾಂತಿ ಸ್ವಭಾವವನ್ನು ಬೆಳೆಸಬೇಕೆಂಬ ನಂಬಿಕೆಯಲ್ಲಿ ಇದ್ದರು. ಜನರಿಗಾಗಿ ಉತ್ತಮ ಕಾರ್ಯಗಳನ್ನು ಮಾಡಬೇಕೆಂದು ತಮ್ಮ ಅನುಯಾಯಿಗಳಿಗೆ ಬೋಧಿಸಿದರು, ಮತ್ತು ಅವರು ಶಾಂತಿ ಮತ್ತು ಸಮೃದ್ಧಿಯ ಸಂದೇಶವನ್ನೇ ಹರಡಬೇಕು; ಧ್ವಂಸ ಮತ್ತು ಮರಣವನ್ನಲ್ಲ ಎಂದು ಒತ್ತಿ ಹೇಳಿದ್ದರು. ಪ್ರವಾದಿ (ಸ) ಅವರ ಮೇಲೆ ತೀವ್ರ ವಿರೋಧ ವ್ಯಕ್ತಪಡಿಸಿದ್ದವರು; ಅಥವಾ ಅವರನ್ನು ಮತ್ತು ಅವರ ಅನುಯಾಯಿಗಳನ್ನು ಹಿಂಸಿಸಿದ್ದವರ ವಿರುದ್ಧ ಅವರು ಮಕ್ಕಾ ನಗರದಲ್ಲಿ ಅವರು ಒಂದು ಸಲವೂ ಹಿಂಸಾತ್ಮಕ ಕೃತ್ಯವನ್ನು ನೆರವೇರಿಸಲಿಲ್ಲ. ಅವರು ಮಕ್ಕಾದಲ್ಲಿರುವಾಗ, ಅವರ ಉಪದೇಶಗಳು ಸದಾ ಸಹನೆಯು, ಸಹಿಷ್ಣುತೆಯು ಮತ್ತು ಶಾಂತಿಯ ನಡವಳಿಕೆಯು ಎಂಬವುಗಳೇ ಆಗಿದ್ದವು. "He who makes peace between the people by inventing good information or saying good things, is not a liar." - Sahih al-Bukhari:* 2692; Book 53, Hadith 3. ಪ್ರವಾದಿ (ಸ) ಅವರ ಜೀವನವು ದಯಾ, ಕರುಣೆ ಮತ್ತು ಸಹಾನುಭೂತಿಯ ನಿಜವಾದ ಉದಾಹರಣೆಯಾಗಿತ್ತು. ಅವರು ತಮ್ಮ ಮೇಲೆ ನಿರಂತರ ಕಿಡಿಗೇಡಿತನ ತೋರಿಸಿದ್ದ ವೃದ್ಧೆಯೊಬ್ಬಳಿಗೆ ಸಹ ಕರುಣೆ ತೋರಿಸಿದರು; ಮಕ್ಕಾ ನಗರದ ವಿಜಯದ ಸಂದರ್ಭದಲ್ಲಿ ತಮ್ಮ ಶತ್ರುಗಳನ್ನು ಕ್ಷಮಿಸಿದರು; ತನ್ನ ಮರಿಗಳನ್ನು ಕದ್ದೊಯ್ಯಲ್ಪಟ್ಟ ಒಂದು ಹೆಣ್ಣು ಹಕ್ಕಿಯ ತೀವ್ರ ವ್ಯಾಕುಲತೆಯನ್ನು ಕಂಡು, ಅದರ ಮರಿಗಳನ್ನು ವಾಪಸ್ಸು ತಂದುಕೊಡುವ ಮೂಲಕ ಆ ಹಕ್ಕಿಗೆ ಸಹಾನುಭೂತಿ ವ್ಯಕ್ತಪಡಿಸಿದರು. ತನ್ನ ಪೋಷ್ಯ ಹಕ್ಕಿಯನ್ನು ಕಳೆದುಕೊಂಡು ದುಃಖಿತನಾದ ಬಾಲಕನನ್ನು ಸಾಂತ್ವನಗೊಳಿಸಿದರು. ಪ್ರಾಣಿಗಳ ಮೇಲೂ ಅವರು ಕರುಣೆಯ ದೃಷ್ಠಿಕೋಣ ಹೊಂದಿದ್ದರು; ಅವುಗಳ ಮೇಲೆ ಸೌಮ್ಯವಾಗಿ ವರ್ತಿಸಬೇಕೆಂದು ಉಪದೇಶಿಸಿದರು. 'ಕರುಣೆ' ಎಂಬುದು ಅವರ ಉಪದೇಶಗಳ ಅಡಿಷ್ಟಾಂಭವಾಗಿತ್ತು ಮತ್ತು ಅವರ ವ್ಯಕ್ತಿತ್ವದ ಹೃದಯ ಭಾಗವಾಗಿತ್ತು. ಈ ಕರುಣೆಯೇ ಅವರನ್ನು ದಾನಶೀಲತೆಯನ್ನು ಉತ್ತೇಜಿಸಲು, ಅನಾಥ ಮಕ್ಕಳನ್ನು ಪೋಷಿಸಲು ಹಾಗೂ ಸಮಾಜದ ಅಶಕ್ತರಿಗೆ ಆರೈಕೆ ನೀಡಲು ಪ್ರೇರೇಪಿಸಿತು. ಪ್ರವಾದಿ (ಸ) ಅವರ ಕಡುವೈರಿಗಳಲ್ಲಿ ಉಮರ್ (ರ) ಅವರೂ ಒಬ್ಬರಾಗಿದ್ದರು. ಒಮ್ಮೆ ಉಮರ್ (ರ) ಅವರ ತಂಗಿ ಮತ್ತು ಭಾವ ಇಸ್ಲಾಂ ಬೋಧನೆಯನ್ನು ಸ್ವೀಕರಿಸಿದರು. ಈ ಸುದ್ದಿ ಕೇಳಿ ಉಮರ್ (ರ) ಅವರು ಬಹಳ ಕುಪಿತರಾದರು. ಅವರು ತಂಗಿ-ಭಾವ ಅವರ ಮೇಲೆ ಹಲ್ಲೆಗೈದು, ಪ್ರವಾದಿ (ಸ) ಅವರನ್ನು ಹತ್ಯೆಗೈಯ್ಯಲ್ಲು ಹೋದರು. ತನ್ನನ್ನು ಹತ್ಯೆ ಮಾಡಲು ಬಂದ ಉಮರ್ ಅವರನ್ನು ಪ್ರವಾದಿ (ಸ) ಹೃತ್ಪೂರ್ವಕವಾಗಿ ಸ್ವಾಗತಿಸಿ ಸತ್ಕರಿಸಿದರು. ಪ್ರವಾದಿ (ಸ) ಅವರ ಈ ನಡೆಯಿಂದ ಮನಸೋತ ಉಮರ್ (ರ) ಅವರು ಅಲ್ಲೇ ಪ್ರವಾದಿ (ಸ) ಅವರ ಬೋಧನೆಯನ್ನು ಸ್ವೀಕರಿಸಿದರು. "ಅನಾಥರ ಸೊತ್ತನ್ನು ಅವರಿಗೇ ಕೊಟ್ಟು ಬಿಡಿರಿ ಹಾಗೂ ನಿರ್ಮಲವಾದುದಕ್ಕೆ ಪರ್ಯಾಯವಾಗಿ ಮಲಿನವಾದುದನ್ನು ಕೊಡಬೇಡಿ. ಅವರ ಸೊತ್ತನ್ನು ನಿಮ್ಮ ಸೊತ್ತಿನ ಜೊತೆ ಬೆರೆಸಿ ತಿನ್ನಬೇಡಿ. ಅದು ಖಂಡಿತ ಮಹಾ ಪಾಪ ಕೃತ್ಯವಾಗಿದೆ."- ಸೂರ ಅನ್ನಿಸಾ, ಶ್ಲೋಕ 2 "ಧರ್ಮವನ್ನು ಸುಲಭಗೊಳಿಸಿರಿ; ಕಠಿಣಗೊಳಿಸದಿರಿ. ಸಾಂತ್ವನ ನೀಡಿರಿ; ದ್ವೇಷ ಉಂಟು ಮಾಡದಿರಿ" ಎಂದು ಅವರು ಬೋಧಿಸಿದರು; ತೀವ್ರವಾದನ್ನು ಅವರು ಎಂದಿಗೂ ಸಹಿಸಿರಲಿಲ್ಲ. "Beware of going to extremes in religious matters; For those who came before you were destroyed because of going to extremes in religious matters" ಎಂದು ಅವರು ತಮ್ಮ ಅನುಯಾಯಿಗಳಿಗೆ ಕಲಿಸಿಕೊಟ್ಟರು. ಕರುಣೆ ತೋರಿಸುವವರ ಮೇಲೆ ಪರಮ ಕರುಣಾಳುವಾದ ಅಲ್ಲಾಹನೂ ಕರುಣೆ ತೋರಿಸುವನು; ಭೂಮಿಯಲ್ಲಿರುವವರ ಮೇಲೆ ಕರುಣೆ ತೋರಿಸಿರಿ. ಆಕಾಶದಲ್ಲಿರುವವನು ನಿಮ್ಮ ಮೇಲೆ ಕರುಣೆ ತೋರಿಸುವನು ಎಂದೂ ವಾಚಿಸಿದರು. ಮನುಷ್ಯರೆಲ್ಲರೂ ಸಮಾನರು; ಆಡಂ ಮತ್ತು ಹವ್ವ ಅವರ ಸಂತತಿಗಳು. ಕರಿಯ ಬಿಳಿಯನೆನ್ನದೇ ಎಲ್ಲರನ್ನು ಒಂದೇ ಸಾಲಿನಲ್ಲಿ ನಿಲ್ಲಿಸಿ ಹೆಗಲಿಗೆ ಹೆಗಲನ್ನು ಹಚ್ಚಿ ನಮಾಝನ್ನು (ಮುಸ್ಲಿಮರ ಪ್ರಾರ್ಥನೆ) ನೆರವೇರಿಸಲು ಆದೇಶಿಸಿದರು. ಪ್ರವಾದಿ ಅವರು ಬಿಳಿ ವರ್ಣದ ಅರಬ್ ಆದರೂ, ಅವರು ಮೊತ್ತಮೊದಲ ಅಝಾನ್ (ಪ್ರಾರ್ಥನೆಗೆ ಕರೆಯುವ ಪದ್ಯ) ಅನ್ನು ಕರೆಯಲು ಅವರು ಕರಿಯ ಗುಲಾಮನಾಗಿದ್ದ ಬಿಲಾಲ್ (ರ) ಅವರಿಗೆ ಅವಕಾಶ ಮಾಡಿಕೊಟ್ಟರು. ಹೆಣ್ಣು ಮಕ್ಕಳನ್ನು ಜೀವಂತ ದಫನ ಮಾಡುವವರನ್ನು ಹೆಣ್ಣನ್ನು ಗೌರವಿಸಲು ಕಳಿಸಿಕೊಟ್ಟರು; ತಾಯಿಯ ಪಾದದಡಿ ನಿಮ್ಮ ಸ್ವರ್ಗವಿದೆ, ಮಗಳು ನಿಮ್ಮನ್ನು ನರಕದಿಂದ ಸಂರಕ್ಷಿಸುವಳು, ಮತ್ತು ಮಡದಿ ನಿಮ್ಮ ಅರ್ಧ ಧರ್ಮವನು ಪೂರ್ತಿಗೊಳಿಸುವಳು ಎಂದು ಬೋಧಿಸಿದರು. ಅಲ್ಲದೇ, ವಿಧವೆಯರನ್ನು ಮತ್ತು ವಿಚ್ಛೇದಿತರನ್ನು ಮದುವೆಯಾಗಿಸಿ ಅವರಿಗೆ ಉತ್ತಮ ಬದುಕನ್ನು ನೀಡಲು ಉಪದೇಶಿಸಿದರು. ಆಯಿಶಾ(ರ) ಹೊರತು ಪ್ರವಾದಿ(ಸ) ಅವರ ಎಲ್ಲ ಮಡದಿಯರು ವಿಧವೆಯರಾಗಿದ್ದರು. ಪ್ರವಾದಿ (ಸ) ಅವರು ಋತುವಿನ ಮೊದಲ ಹಣ್ಣು-ಹಂಪಲನ್ನು ಮಕ್ಕಳಲ್ಲಿ ಹಂಚುತ್ತಿದ್ದರು; ವಿಶೇಷವಾಗಿ ಹೆಣ್ಣು ಮಕ್ಕಳಲ್ಲಿ! ಹಾಗೆಯೇ, ಸ್ವತಃ ಲಕ್ಷಾಂತರ ಅನುಯಾಯಿಗಳನ್ನು ಹೊಂದರೂ, ಅವರು ಅತ್ಯಂತ ಸರಳ ಜೀವನವನ್ನು ಬದುಕಿದರು. ಅವರು ಎಂದಿಗೂ ಉನ್ನತಮಟ್ಟದ ಆಹಾರವನ್ನು ಬಯಸಲಿಲ್ಲ; ಬದಲಿಗೆ, ವಾರಗಟ್ಟಲೆ ಹಸಿವಿನಿಂದ ಕಳೆಯುತ್ತಿದ್ದರು. ಕೇವಲ ಖರ್ಜೂರಗಳನ್ನು ತಿಂದು ಉಪವಾಸಗಳನ್ನು ಆಚರಿಸುತ್ತಿದ್ದರು. ನೆಲದ ಮೇಲೆ ಹಾಸಿಗೆಯನ್ನು ಚಾಚಿ ಮಲಗುತ್ತಿದ್ದರು. ತಾವು ಹಸಿದಿದ್ದರು ದಾನ ಮಾಡುವುದರಲ್ಲಿ ಅವರು ಎಂದಿಗೂ ಹಿಂದಿರಲಿಲ್ಲ. ಮನೆಯಲ್ಲಿ ಕೇವಲ ಒಂದೇ ಒಂದು ಖರ್ಜೂರವಿದ್ದರೂ, ಅದನ್ನು ಬಡವರಲ್ಲಿ ಹಂಚಲು ಇಷ್ಟಪಡುತ್ತಿದ್ದರು. "ದಾನವು ಸಂಪತ್ತನ್ನು ಕಡಿಮೆಗೊಳಿಸುವುದಿಲ್ಲ; ಒಂದೇ ಒಂದು ಖರ್ಜೂರವಾದರೂ ದಾನ ಮಾಡಿ ನರಕಾಗ್ನಿಯಿಂದ ತಮ್ಮನ್ನು ರಕ್ಷಿಸಿರಿ" ಎಂದು ಹೇಳಿಕೊಟ್ಟರು. ಬಾಯಾರಿದ ನಾಯಿಗೆ ಕೇವಲ ನೀರು ನೀಡಿದಕ್ಕಾಗಿ ಒಬ್ಬ ಮಹಿಳೆಯನ್ನು ಸ್ವರ್ಗವಾಸಿ ಎಂದು ನಮಗೂ ದಾನ ಶ್ರೇಷ್ಠತೆಯನ್ನು ಪರಿಚಯಿಸುತ್ತ, ದಾನ ಮಾಡಲು ಪ್ರೇರಣೆ ನೀಡಿದರು. ಯಹೂದಿಯೊಬ್ಬರ ಶವಮೆರವಣಿಗೆ ಸಾಗುತ್ತಿದ್ದಾಗ ಪ್ರವಾದಿ(ಸ) ಅವರು ಎದ್ದು ನಿಂತು ಗೌರವ ಸಲ್ಲಿಸಿದ್ದರು. ಪ್ರವಾದಿ (ಸ) ಅವರನ್ನು "ಸಾದಿಕ್" ಅಂದರೆ "ಸತ್ಯವಾದಿ" ಮತ್ತು "ಅಮೀನ್" ಅಂದರೆ "ಪ್ರಾಮಾಣಿಕರು" ಎಂದು ಉಪನಾಮದಿಂದ ಕರೆದಿದ್ದು ಮುಸಲ್ಮಾನರಲ್ಲ; ಬದಲಿಗೆ, ಪ್ರವಾದಿ (ಸ) ಅವರ ಶತ್ರುಗಳೇ!  ಪ್ರವಾದಿ (ಸ) ಬದುಕಿನುದ್ದಕ್ಕೂ ನಡೆದ ಹೋರಾಟದ ಮಾರ್ಗದಲ್ಲಿ ಅವರು ಶಾಂತಿಯನ್ನು ಸ್ಥಾಪಿಸುತ್ತ ನಮಗೆ ಮಾರ್ಗದರ್ಶನ ನೀಡಿದರು. ಹೀಗಾಗಿ, ಅವರೊಬ್ಬರು ಹೋರಾಟದ ಮಾರ್ಗದಲ್ಲಿ ಅರಳಿದ ಪ್ರೇಮದ ಹೂವು!! ಕ್ರೈಸ್ತ ಲೇಖಕರು, ಕರೆನ್ ಆರ್ಮ್ಸ್ಟ್ರಾಂಗ್, ಪಶ್ಚಿಮವು ಇಸ್ಲಾಂ ಅನ್ನು ಹೇಗೆ ಅರ್ಥಮಾಡಿಕೊಳ್ಳಬಹುದು ಎಂಬುದನ್ನು ಸೂಚಿಸುವಾಗ, ಬರೆಯುತ್ತಾರೆ: “Perhaps one place to start is with the figure of Muhammad: a complex, passionate man who sometimes did things that are difficult for us to accept, but who had the genius of a profound order and founded a religion and a cultural tradition that was not based on the sword – despite the Western myth – and whose name ‘Islam’ signifies ‘peace and reconciliation'. " (Muhammad, A Western Attempt To Understand Islam, pp. 265/266) -ಶಿಕ್ರಾನ್ ಶರ್ಫುದ್ದೀನ್ ಎಂ, ಮಂಗಳೂರು ಚಿತ್ರ ಕೃಪೆ: ಇಂಟರ್ನೆಟ್ ತಾಣ