ರಾಜ್ಯದ ಚಲನಚಿತ್ರ ಮಂದಿರಗಳ ಟಿಕೆಟ್‌ ಗಳಿಗೆ ೨೦೦ ರು. ಗರಿಷ್ಠದರ ಮಿತಿಯನ್ನು ನಿಗದಿಗೊಳಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸುವುದರೊಂದಿಗೆ ಕನ್ನಡ ಚಿತ್ರೋದ್ಯಮದ ಬಹುದೊಡ್ಡ ಬೇಡಿಕೆಯೊಂದು ಈಡೇರಿದಂತಾಗಿದೆ. ಕಳೆದ ಮಾರ್ಚ್ ನಲ್ಲಿ ಮಂಡನೆ ಮಾಡಲಾದ ಬಜೆಟ್‌ನಲ್ಲಿ ಸಿನಿಮಾ ಟಿಕೆಟ್‌ಗಳಿಗೆ ದರ ಮಿತಿ ನಿಗದಿ ಮಾಡುವುದಾಗಿ ಮುಖ್ಯಮಂತ್ರಿ ಘೋಷಣೆ ಮಾಡಿದ್ದರು. ಕಳೆದ ಜುಲೈನಲ್ಲಿ ಈ ಸಂಬಂಧ ಕರಡು ಅಧಿಸೂಚನೆಯನ್ನು ಪ್ರಕಟಿಸಿದ್ದರು. ಸಾರ್ವಜನಿಕರ ಆಕ್ಷೇಪಣೆ ಆಹ್ವಾನಿಸಿ ಇದೀಗ ಅಂತಿಮ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ೭೫ ಆಸನ ಹಾಗೂ ಅದಕ್ಕಿಂತ ಕಡಿಮೆ ಇರುವ ಪ್ರೀಮಿಯಂ ಚಿತ್ರಮಂದಿರಗಳಿಗೆ ದರ ಮಿತಿಯಿಂದ ವಿನಾಯಿತಿ ನೀಡಲಾಗಿದೆ. ಆದರೆ ಸಿಂಗಲ್ ಸ್ಟೀನ್‌ಗಳು ಹಾಗೂ ಬಹುಮುಖ್ಯವಾಗಿ ಮೆಲ್ಟಿಪ್ಲೆಕ್ಸ್‌ಗಳಲ್ಲಿ ದರ ಮಿತಿ ಜಾರಿಗೆ ಬರಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಚಿತ್ರರಂಗದ ಬೇಡಿಕೆಯನ್ನು ಸರ್ಕಾರ ಈಡೇರಿಸಿ, ಜನರನ್ನು ಚಿತ್ರಮಂದಿರಗಳತ್ತ ಕರೆತರಲು ಅರ್ಧದಾರಿಯನ್ನು ತೆರೆದಿಟ್ಟಿದೆ. ಗುಣಮಟ್ಟದ ಸಿನಿಮಾಗಳನ್ನು ಕೊಡುವ ಮೂಲಕ ಚಿತ್ರೋದ್ಯಮ ಅಂತಹ ಪ್ರೇಕ್ಷಕರನ್ನು ಆಕರ್ಷಿಸಬೇಕು. ೨೦೧೭ರಲ್ಲೂ ಕೂಡ ಸಿದ್ದರಾಮಯ್ಯ ಅವರು ದರ ಮಿತಿ ಹೇರಿದ್ದರು. ಆದರೆ ಕಾನೂನು ಹೋರಾಟದಲ್ಲಿ ಅದಕ್ಕೆ ಹಿನ್ನಡೆ ಯಾಗಿತ್ತು. ಇದೀಗಮಲ್ಟಿಪ್ಲೆಕ್ಸ್‌ ಗಳು ಸರ್ಕಾರದ ನಡೆಯನ್ನು ಯಾವ ರೀತಿ ನೋಡುತ್ತವೆ ಎಂಬುದರ ಆಧಾರದ ಮೇಲೆ ಈ ದರ ನಿಗದಿ ಆದೇಶ ಎಷ್ಟು ಪರಿಣಾಮಕಾರಿಯಾಗಿ ಜಾರಿಗೆ ಬರಲಿದೆ ಎಂಬುದು ಗೊತ್ತಾಗಲಿದೆ. ರಾಜ್ಯದಲ್ಲಿ ಮಲ್ಟಿಪ್ಲೆಕ್ಸ್‌ ಸಂಸ್ಕೃತಿ ಆರಂಭವಾದ ಬಳಿಕ ಸಿನಿಮಾ ಟಿಕೆಟ್‌ಗಳ ಬೆಲೆ ಗಗನಕ್ಕೇರಿದೆ ಎಂಬ ದೂರು ವ್ಯಾಪಕವಾಗಿ ಇದೆ. ಒಂದು ಸಿನಿಮಾ ನೋಡಲು ಒಬ್ಬರಿಗೆ ೬೦೦ರಿಂದ ೧೦೦೦, ೨೦೦೦ ರು.ವರೆಗೂ ಮಲ್ಟಿಪ್ಲೆಕ್ಸ್‌ ಗಳು ಹಣ ಕೇಳುತ್ತಿವೆ. ಇದರಿಂದ ಬಹುಪಾಲು ಜನರು ರೋಸಿ ಹೋಗಿ ಚಿತ್ರಮಂದಿರದಿಂದಲೇ ದೂರ ಉಳಿದಿದ್ದಾರೆ ಹಾಗೂ ಹಣವಿದ್ದವರು ಮಾತ್ರ ಚಿತ್ರ ನೋಡುತ್ತಿದ್ದಾರೆ ಎಂದು ಕನ್ನಡ ಚಿತ್ರರಂಗದ ಧುರೀಣರು ಟೀಕಿಸುತ್ತಿದ್ದರು. ತಮಿಳುನಾಡಿನಲ್ಲಿ ಈಗಾಗಲೇ ದರ ಮಿತಿ ಇದೆ. ಅದನ್ನು ಅವರು ಉದಾಹರಣೆಯಾಗಿ ನೀಡುತ್ತಿದ್ದರು. ಗಮನಿಸಬೇಕಾದ ಅಂಶವೆಂದರೆ, ದರ ಇಳಿಕೆ ಮಾಡಿ ಕಳಪೆ ಗುಣಮಟ್ಟದ ಚಿತ್ರಗಳನ್ನು ನೀಡಿದರೆ ಆಗಲೂ ಜನರು ಚಿತ್ರಮಂದಿರಗಳಿಗೆ ಬರುವುದಿಲ್ಲ. ಗುಣಮಟ್ಟ ಇದ್ದರೆ ಕನ್ನಡಿಗ ಪ್ರೇಕ್ಷಕ ಎಷ್ಟು ಬೆಲೆ ಬೇಕಾದರೂ ಕೊಡಲು ಸಿದ್ದ ಇದ್ದಾನೆ ಎಂಬುದು ಈಗಾಗಲೇ ಹಲವು ಬಾರಿ ನಿರೂಪಿತವಾಗಿದೆ. ಚಿತ್ರರಂಗದ ಬೇಡಿಕೆಯನ್ನು ಸರ್ಕಾರ ಈಡೇರಿಸಿ, ಜನರನ್ನು ಚಿತ್ರಮಂದಿರಗಳತ್ತ ಕರೆತರಲು ಅರ್ಧದಾರಿಯನ್ನು ತೆರೆದಿಟ್ಟಿದೆ. ಗುಣಮಟ್ಟದ ಸಿನಿಮಾಗಳನ್ನು ಕೊಡುವ ಮೂಲಕ ಚಿತ್ರೋದ್ಯಮ ಅಂತಹ ಪ್ರೇಕ್ಷಕರನ್ನು ಆಕರ್ಷಿಸಬೇಕು. ಇದರಲ್ಲಿ ವಿಫಲವಾದರೆ ಸರ್ಕಾರದ ನಿರ್ಧಾರದಿಂದ ಏನೂ ಆಗುವುದಿಲ್ಲ ಎಂಬುದು ನೆನಪಿರಲಿ. ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೧೩-೦೯-೨೦೨೫ ಚಿತ್ರ ಕೃಪೆ: ಅಂತರ್ಜಾಲ ತಾಣ