ಬೇಕು - ಬೇಡ ಬೇಕು - ಬೇಡಗಳ ತುಮುಲದಲ್ಲಿ ಬಡವಾಗಿ ಹೋಯ್ತು ಬದುಕು ಸಾಕು - ಬೇಕುಗಳ ಚಿಂತೆಯಲ್ಲಿ ಕೃಶವಾಗಿ ಹೋಯ್ತು ಬದುಕು !   ತೃಪ್ತಿಯನ್ನು ಬಯಸುತ್ತ ವಸ್ತುಗಳ  ಪಡೆವ ಚಿಂತೆ ಹೆಚ್ಚಿ ಕ್ಷಿಪ್ರ ಬಯಕೆಗಳ ಹಿಂಡ ಹೊತ್ತ ಮನ- ದತ್ತ ಚಿತ್ತ ನೆಚ್ಚಿ !   ಬಯಕೆಗಳನು ಬೆಂಬತ್ತಿ ಸಾಗಿದರೆ ಪಡೆಯಲಹುದೆ ಅದರ? ಬಯಸಿದಷ್ಟು ಲಭಿಸಿದರು ಮತ್ತೆ  ತಲೆದೋರಿಕೊಳುವ ಹದರ !   ತೃಪ್ತಿಯೆಂಬ ವಸ್ತುವನು ಪಡೆವ ಬಗೆ- ಗೊತ್ತು ನೀಡಿ ಇತ್ತ ಕ್ಲಪ್ತ ಸಮಯದಲಿ ಲಿಪ್ತವಾಗಿಸುವ - ದತ್ತ ಇತ್ತ ಸುತ್ತ !   ಬೇಕು - ಬೇಡಗಳ ತುಮುಲದಲ್ಲಿ ಬಸ- ವಳಿದ ನಮಗೆ ಈಗ ಸಾಕು - ಸಾಕು ಎನುವಂಥ ಭಾವಗಳ ಹೊಳಹು ಸಿಗಲಿ ಬೇಗ ! *** ಸಖ್ಯ ಸಖ್ಯವನು ಗಳಿಸಿಕೊಳ್ಳುವ ಪ್ರಮುಖ ಗುರಿಯಿರಲು ಮುಖ್ಯವಾದುದು ತಾನೆ ಸತ್ಯನಿಷ್ಟೆ ಲಭ್ಯವನು ಯೋಚಿಸುತಲಭ್ಯವಾದುದ ಬಯಸೆ ಸಭ್ಯತನಕಿನ್ನಷ್ಟು ಮೆರಗು ಅಷ್ಟೆ!   ಸ್ನೇಹದೊಲುಮೆಯ ಕೊಡುಗೆಗಿನ್ನಷ್ಟು ಬಲ ಬರಲು ಶುದ್ಧ ಭಾವದ ನಿಖರ ನಿಲುವು ಸಾಕು ಸರಲತೆಯ ವಿರಲತೆಯ ಭವ್ಯ ಸಾಕಾರಕ್ಕೆ ಬದ್ಧವಾಗಿರುವಂಥ ಛಲವು ಬೇಕು !   ಅನ್ಯ ಗೊಡವೆಯ ತ್ಯಜಿಸಿ ತನ್ನತನದನುಭಾವ - ವನ್ನು ಮೆಚ್ಚುವ ಸ್ಪಷ್ಟ ಒಲವು ಇರಲಿ ತನ್ನ ನಿಲುವಿಗೆ ಆತು ಭಿನ್ನ ನಿಲುವಿಗೆ ಸೋತು ಹೋಗದಿಹ ಧೃಢವಾದಬಲವು ಬರಲಿ !   ಸಖ್ಯದಲಿ ಸುಖ ಕಂಡು ಸುಖದ ಸೌಖ್ಯವನುಂಡು ಮಿಕ್ಕುದನು ಗೌಣವಾಗಿಸುವ ಭಾವ ದಕ್ಕದುದನೆಲ್ಲವನು ಲೆಕ್ಕಕ್ಕೆ ತಾರದಲೆ ಸಿಕ್ಕುದುದರಲಿ ಸುಖವ ಕಾಂಬ ಜೀವ ! ***