ಚಿಟ್ಟೆಗಳ ಹೋಗಿ-ಬರುವ ವಲಸೆಗೆ ಪ್ರಕೃತಿಯಲ್ಲಿ ಒಂದೇ ಒಂದು ಉದಾಹರಣೆ ಮೊನಾರ್ಚ್ (Monarch) ಚಿಟ್ಟೆಗಳ ಖಂಡಾಂತರ ವಲಸೆ. ಚಳಿಗಾಲದ ತಿಂಗಳುಗಳಲ್ಲಿ, ಚಳಿಯಿಂದ ಪಾರಾಗಲಿಕ್ಕಾಗಿ ಉತ್ತರ ಅಮೇರಿಕಾದಿಂದ ದಕ್ಷಿಣ ದಿಕ್ಕಿಗೆ ಲಕ್ಷಗಟ್ಟಲೆ ಮೊನಾರ್ಚ್ ಚಿಟ್ಟೆಗಳು ವಲಸೆ ಹೋಗುತ್ತವೆ. ತಮ್ಮ ಚಳಿಗಾಲದ “ವಸತಿ” ಸೇರಲು ಅವು ಎರಡು ತಿಂಗಳುಗಳ ಅವಧಿ ಹಾರುತ್ತವೆ. ಈ ಮಹಾನ್ ಪಯಣ ಒಂದು ಪ್ರಾಕೃತಿಕ ಅದ್ಭುತ!
ಉತ್ತರ ಅಮೇರಿಕಾದ ಪೂರ್ವ ಪ್ರದೇಶದಿಂದ ಮೊನಾರ್ಚ್ ಚಿಟ್ಟೆಗಳು ದಕ್ಷಿಣದ ಮೆಕ್ಸಿಕೋದ ಸಿಯೆರಾ ಮಾದ್ರೆ ಬೆಟ್ಟಗಳಿಗೆ ಹಾರುತ್ತಾ ಹೋಗುತ್ತವೆ. ಹಾಗೆಯೇ ಉತ್ತರ ಅಮೆರಿಕಾದ ಪಶ್ಚಿಮ ಪ್ರದೇಶದಿಂದ ಅವುಗಳ ಪ್ರಯಾಣ ದಕ್ಷಿಣದ ಕ್ಯಾಲಿಫೋರ್ನಿಯಾಕ್ಕೆ.
ಗಾಳಿಯ ಅಲೆಗಳ ಮೇಲೆ ಪಯಣಿಸುವ ಮೊನಾರ್ಚ್ ಚಿಟ್ಟೆಗಳು ಭೂಮಿಯ ಗುರುತ್ವಾಕರ್ಷಣ ಬಲದ ಸೆಳೆತ ಮತ್ತು ಸೂರ್ಯನ ಸ್ಥಾನದಿಂದ ದಿಕ್ಕಿನ ಮಾಹಿತಿ ಪಡೆಯುತ್ತವೆ ಎಂದು ತಿಳಿಯಲಾಗಿದೆ. ಅವು ಹಗಲಿನಲ್ಲಿ ಮಾತ್ರ ಹಾರುತ್ತಾ, ರಾತ್ರಿಯ ಹೊತ್ತಿನಲ್ಲಿ ಪೈನ್, ಸಿಡಾರ್ ಮತ್ತು ಫರ್ (Fir) ಮರಗಳಲ್ಲಿ ವಿರಮಿಸುತ್ತವೆ. ವಿರಮಿಸುವಾಗ ತಮ್ಮನ್ನು ಬೆಚ್ಚಗೆ ಇರಿಸಿಕೊಳ್ಳಲಿಕ್ಕಾಗಿ ಅವು ಒಂದಕ್ಕೊಂದು ತಗಲಿಕೊಂಡು ಮರಗಳ ಕೊಂಬೆಗಳಿಂದ ನೇತಾಡುತ್ತವೆ (ಫೋಟೋ 2 ನೋಡಿ).
ಮೊನಾರ್ಚ್ ಚಿಟ್ಟೆಗಳು ಕ್ರಮಿಸುವ ಅಂತರ ನಮ್ಮನ್ನು ದಂಗು ಬಡಿಸುತ್ತದೆ. ಒಂದೇ ದಿನದಲ್ಲಿ ಅವು 160 ಕಿಮೀ (100 ಮೈಲು) ದೂರ ಹಾರುತ್ತವೆ. ಕೆಲವು ಚಿಟ್ಟೆಗಳಂತೂ ತಮ್ಮ ಗಮ್ಯ ತಲಪಲಿಕ್ಕಾಗಿ ಒಟ್ಟು 4,800 ಕಿಮೀ (3,000 ಮೈಲು) ಹಾರುತ್ತವೆ!
ಮೆಕ್ಸಿಕೋದ ಬೆಟ್ಟಗಳನ್ನು ತಲಪಿದಾಗ ಸಾವಿರಾರು ಮೊನಾರ್ಚ್ ಚಿಟ್ಟೆಗಳು ಒಯಾಮೆಲ್ ಫರ್ (Oyamel fir) ಮರಗಳ ಕೊಂಬೆಗಳಲ್ಲಿ ಗುಂಪುಗುಂಪಾಗಿ ನೆಲೆಸುತ್ತವೆ. ಈ ಮರಗಳು ಚಿಟ್ಟೆಗಳನ್ನು ರಕ್ಷಿಸುತ್ತವೆ ಮತ್ತು ಮರಗಳ ಎಲೆಗಳ ಛಾವಣಿ ಅವನ್ನು ಬೆಚ್ಚಗಾಗಿ ಇರಿಸುತ್ತದೆ.
ಮೊನಾರ್ಚ್ ಚಿಟ್ಟೆಗಳು ಮಕರಂದದ ಆಹಾರ ಪಡೆಯುವುದು ಮಿಲ್ಕ್-ವೀಡ್ (ಹಾಲುಕಳೆ) ಸಸ್ಯಗಳಿಂದ. ಇವು ಮೊಟ್ಟೆ ಇಡುವುದು ಅದೇ ಮಿಲ್ಕ್-ವೀಡ್ ಸಸ್ಯಗಳಲ್ಲಿ ಮಾತ್ರ ಎಂಬುದೂ ವಿಶೇಷ. ಈ ಚಿಟ್ಟೆಗಳ ಕಂಬಳಿಹುಳಗಳ ಮುಖ್ಯ ಆಹಾರವೂ ಮಿಲ್ಕ್-ವೀಡ್ ಸಸ್ಯಗಳ ಎಲೆಗಳು.
ಫೋಟೋ 1: ಮೊನಾರ್ಚ್ ಚಿಟ್ಟೆ
ಫೋಟೋ 2: ಕ್ಯಾಲಿಫೋರ್ನಿಯಾದ ಸಾಂತಾಕ್ರೂಜ್ ನಲ್ಲಿ ಮರದ ಕೊಂಬೆಗಳಲ್ಲಿ ವಿರಮಿಸುತ್ತಿರುವ ನೂರಾರು
ಮೊನಾರ್ಚ್ ಚಿಟ್ಟೆಗಳ ಗುಂಪು
ಫೋಟೋ 3: ಮಿಲ್ಕ್-ವೀಡ್ ಸಸ್ಯದ ಹೂಗಳ ಮೇಲೆ ಕುಳಿತಿರುವ ಮೊನಾರ್ಚ್ ಚಿಟ್ಟೆ
ಫೋಟೋ ಕೃಪೆ: ರೆಡ್ ಸೋಯಿಲ್ ಸ್ಪ್ರಿಂಗ್ ಮ್ಯಾಗಝಿನ್
ಮೊನಾರ್ಚ್ ಚಿಟ್ಟೆಗಳ ಖಂಡಾಂತರ ವಲಸೆ
ಅಡ್ಡೂರು ಕೃಷ್ಣ ರಾವ್
ಸೆಪ್ಟೆಂಬರ್ ೨೧, ೨೦೨೫
೨೦ ವೀಕ್ಷಣೆಗಳು
ಪ್ರಕಟಿಸಿದ: ಸೆಪ್ಟೆಂಬರ್ ೨೧, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬