ಕಾಗೆ ತೀರಿಸಿದ ಋಣ
ಬರಹಗಾರರ ಬಳಗ
ಸೆಪ್ಟೆಂಬರ್ ೨೩, ೨೦೨೫
೧೪ ವೀಕ್ಷಣೆಗಳು
ಒಂದು ದಿನ ಮಧ್ಯಾಹ್ನ ಊಟದ ಸಮಯ ನಾನಿರುವ ಗಿಡದ ಬದಿಯಲ್ಲಿರುವ ಮಾನವರು ಊಟಕ್ಕೆ ಕುಳಿತುಕೊಳ್ಳುವ ಸಮಯ ಅವರ ಊಟ ಮುಗಿಯುವವರೆಗೂ ಕಾದಿದ್ದು ಕನಿಷ್ಠ ನಾಲ್ಕಾರು ಅಗುಳಾದರೂ ಅವರ ತಿಂದು ತೊಳೆಯಲು ತಟ್ಟೆ ಹೊರಗೆ ಹಾಕಿದಾಗ ಸಿಗಬಹುದೆಂಬ ಕಾತರ, ಆಶೆ.
ಆ ಮನೆಯಲ್ಲಿ ವಯಸ್ಸಾದ ವೃದ್ಧ, ಅವನ ಮಗ ಸೊಸೆ ಮತ್ತು ಮೊಮ್ಮಗ ಊಟಕ್ಕೆ ಕುಳಿತಿದ್ದರು ಆ ವೃದ್ಧನ ತಟ್ಟೆಯಲ್ಲಿ ಅನ್ನ, ಖಾರದ ಪುಡಿ ಸ್ವಲ್ಪ ಚಟ್ನಿ ಅಷ್ಟೇ ಇತ್ತು ಬಳಿಯಲ್ಲಿ ಕುಳಿತಿದ್ದ ಅವನ ಮೊಮ್ಮಗ ತಮ್ಮಮ್ಮನಿಗೆ ತಾತಂಗೂ ಸ್ವಲ್ಪ ಸಾಂಬಾರು ಹಪ್ಪಳ ಬಡಿಸಬಾರದೇ ಎಂದು ಕೇಳುವನು ಆಗ ಅವಳು ಸುಮ್ಮನೆ ನಿನ್ನ ಪಾಡಿಗೆ ನೀನು ತಿಂದು ಮುಗಿಸು, ಕೆಲವರನ್ನು ಆ ದೇವರು ಭೂಮಿಗೆ ಭಾರವಾಗಿರುವವರನ್ನು ಏಕೆ ತೆಗೆದುಕೊಂಡು ಹೋಗುವುದಿಲ್ಲವೋ ಎಂದು ವೃದ್ಧನ ಬಗ್ಗೆ ಸೂಚ್ಯವಾಗಿ ಗೊಣಗುತ್ತಾಳೆ ಪಕ್ಕದಲ್ಲಿ ಕುಳಿತಿದ್ದ ಅವಳ ಗಂಡ ತನಗೂ ಇದಕ್ಕೂ ಏನೂ ಸಂಬಂಧವಿಲ್ಲ ಎಂಬಂತೆ ಇನ್ನು ಸ್ವಲ್ಪ ಸಾಂಬಾರು ಹಾಕೆ ಎಂದು ಬಡಿಸಿಕೊಂಡು ತಿನ್ನುತ್ತಾನೆ ಆ ವೃದ್ಧ ಖಾರದ ಅನ್ನ ತಿನ್ನಲಾರದೆ ಒದ್ದಾಡುತ್ತಾನೆ ಎದುರಿಗಿದ್ದ ತುಪ್ಪದ ಗಿಂಡಿಯೆಡೆಗೆ ಆಸೆಯಿಂದ ನೋಡುತ್ತಾನೆ, ಕೂಡಲೇ ತನ್ನ ಸೊಸೆಯ ಕೆಂಗಣ್ಣಿಗೆ ಹೆದರಿ ತುಪ್ಪವನ್ನು ಕೇಳಲಾರದೇ, ಖಾರದ ಅನ್ನವನ್ನು ಉಣ್ಣಲಾರದೆ ಬರೀ ನೀರು ಕುಡಿದು ಹೊರಗೆ ಎದ್ದು ಬಂದು ಎದುರಿಗೆ ನನ್ನ ನೋಡಿ ನನ್ನ ಮುಂದೆ ಆ ಉಳಿದ ಅನ್ನವನ್ನು ಬಿಸಾಡಿ ಹೋಗುತ್ತಾನೆ ಒಂದು ಕ್ಷಣ ಆ ವೃದ್ಧನ ಸ್ಥಿತಿ ಕಂಡು ನನಗೆ ಮರುಗುವಂತಾಯಿತು. ಹೇ ವೃದ್ಧನೇ ನಿನ್ನ ಹೊಟ್ಟೆ ತುಂಬಲಿಲ್ಲವಾದರೂ ಈಗ ನನ್ನ ಹೊಟ್ಟೆ ತುಂಬಿಸುತ್ತಿರುವೆ ಖಂಡಿತ ನಿನ್ನ ಋಣ ತೀರಿಸುವೆ ಎಂದು ಯೋಚಿಸಿ ನಿರ್ಧರಿಸಿ ನಾನು ಸ್ವಲ್ಪ ಅಗುಳುಗಳನ್ನು ತಿಂದು ನನ್ನ ಮರಿಗಳಿಗಾಗಿ ಸ್ವಲ್ಪ ತೆಗೆದುಕೊಂಡು ಹಾರಿಹೋದೆ.
ಇದಾದ ಸುಮಾರು 15 ದಿನಗಳ ನಂತರ ಮತ್ತೆ ಅನ್ನವನ್ನು ಅರಸಿ ನದಿಯೊಂದರ ಮೇಲೆ ಹಾರುತ್ತಿದ್ದೆ ಅಲ್ಲಿ ನದಿ ತೀರದಲ್ಲಿ ಯಾರೋ ಯಾರಿಗೋ ಪಿಂಡ ಇಡುತ್ತಿದ್ದಾರೆ ಇಲ್ಲಿ ಅನ್ನ ಸಿಗಬಹುದು ಎಂದು ಅಲ್ಲಿ ಕೆಳಗೆ ಹಾರಿ ಕುಳಿತೆ ಎದುರಿಗೆ ಕಂಡ ಫೋಟೋ ನೋಡಿ ಆಶ್ಚರ್ಯವಾಯಿತು ನಾನು ನನ್ನ ಮಕ್ಕಳು ಹಸಿವಿದ್ದಾಗ ತನ್ನ ಅನ್ನವನ್ನು ನೀಡಿ ನನ್ನ ಹಸಿವು ನೀಗಿಸಿದ ಪುಣ್ಯ(ವೃದ್ಧ) ನದು ಆ ಫೋಟೋ, ಒಂದು ಕ್ಷಣ ಬಾಧೆಯಾಯಿತು.
ವೃದ್ಧನ ಮಗನಿಗೆ ಪುರೋಹಿತರು ಹೇಳುತ್ತಿದ್ದರು- ಪಿಂಡಗಳ ಇಟ್ಟು ಕಾಗೆಗಳನ್ನು ಕರೆಯಿರಿ ನಿಮ್ಮ ತಂದೆ ರೂಪದಲ್ಲಿ ಬಂದು ತಿಂದು ಹೋದರೆ ನಿಮ್ಮಪ್ಪನ ಆತ್ಮಕ್ಕೆ ಶಾಂತಿ ಸಿಗುವುದು ತನ್ಮೂಲಕ ನಿಮಗೂ ಒಳ್ಳೆಯದಾಗುವುದು ಹೀಗೆ ಹೇಳಿ ಪಕ್ವಾನ್ನಗಳಿಂದ ತುಂಬಿದ್ದ ದೊಡ್ಡ ತಟ್ಟೆಯನ್ನು ತಂದಿಟ್ಟು ನಾನು ತಿನ್ನುವ ನಿರೀಕ್ಷೆಯಲ್ಲಿ ಕುಳಿತನು.
ಆಗ ನನಗನಿಸಿದ್ದು-- ನೀವೇನು ಮನುಷ್ಯರಯ್ಯ? ಬದುಕಿರುವಷ್ಟು ದಿನ ಬದುಕಲು ಸರಿಯಾಗಿ ಅನ್ನ ನೀಡದ ನೀವು ಸತ್ತ ಮೇಲೆ ಇಷ್ಟೊಂದು ಉಪಚಾರವೇ ಬದುಕಿದ್ದಷ್ಟು ಕಾಲ ಆ ವೃದ್ಧನನ್ನು ಕಡೆಗಣಿಸಿ ಈಗ ಸತ್ತ ಮೇಲೆ ಏನೂ ತಿಳಿಯದ ಅಮಾಯಕನಂತೆ ಆ ಫೋಟೋಗೆ ಕೈ ಮುಗಿಯುತ್ತಿರುವ ಆ ಮಗನನ್ನು ಕಂಡು ಕೆಂಡದಂತ ಕೋಪ ಬಂತು ಮತ್ತು ಆ ಪಿಂಡವನ್ನು ಮುಟ್ಟುವ ಮನಸ್ಸಾಗಲಿಲ್ಲ ಮತ್ತು ನನ್ನ ಬಳಗದವರನ್ನು ಕರೆದು ಯಾರು ಆ ಪಿಂಡವನ್ನು ಮುಟ್ಟಬೇಡಿರಿ, ತಿನ್ನಬೇಡಿರಿ ಎಂದು ಅಲ್ಲಿಂದ ದೂರ ಹಾರಿ ಹೋದೆವು. ಹೀಗೆ ನನ್ನ ಹಸಿವನ್ನು ಒಂದು ದಿನದ ಮಟ್ಟಿಗಾದರೂ ತಣಿಸಿದ ಆ ವೃದ್ಧನ ಋಣವನ್ನು ತೀರಿಸಿದೆ ಎಂಬ ತೃಪ್ತಿ ನನಗುಂಟಾಯಿತು.
~ಸಂಪಿಗೆ ವಾಸು, ಬಳ್ಳಾರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಸೆಪ್ಟೆಂಬರ್ ೨೩, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬