ಸ್ಟೇಟಸ್ ಕತೆಗಳು (ಭಾಗ ೧೪೫೨) - ಹೊಸ ದಾರಿ
ಬರಹಗಾರರ ಬಳಗ
ಸೆಪ್ಟೆಂಬರ್ ೨೪, ೨೦೨೫
೨೦ ವೀಕ್ಷಣೆಗಳು
ತುಂಬ ಬೇಸರವಾಗಿ ಗೋಡೆಗೆ ತಲೆಯ ಒರಗಿಸಿ ಹಾಗೆ ಮೇಲೆ ನೋಡುತ್ತಾ ಆತ ಕುಳಿತಿದ್ದಾನೆ. ಆತ ತನ್ನ ಜೀವನದಲ್ಲಿ ಎಲ್ಲವನ್ನ ಕಳೆದುಕೊಂಡವ, ಮನೆಯವರನ್ನ ಮಡದಿಯನ್ನ ಮಕ್ಕಳನ್ನು ಕನಸುಗಳನ್ನು ಆಸೆಗಳನ್ನ, ನಂಬಿದ ಕೆಲಸವನ್ನು ಹೀಗೆ ಎಲ್ಲವನ್ನ ಕಳೆದುಕೊಂಡು ಏಕಾಂಗಿಯಾಗಿ ಕುಳಿತುಬಿಟ್ಟಿದ್ದಾನೆ. ಪ್ರತಿದಿನವೂ ಕುಳಿತು ತನ್ನ ಜೀವನದಲ್ಲಿ ನಡೆದು ಹೋದ ಘಟನೆಗಳನ್ನ ಯೋಚಿಸುತ್ತಾ ಯೋಚಿಸುತ್ತಾ ಭವಿಷ್ಯವನ್ನು ಮುರಿದುಬಿಟ್ಟಿದ್ದಾನೆ. ಆತನಿಗೆ ಯಾರೆಷ್ಟೇ ಹೇಳಿದರೂ ಆತ ಒಂದು ಕ್ಷಣ ಕೇಳಿ ಮತ್ತೆ ಅದೇ ಯೋಚನೆಯಲ್ಲಿ ದಿನದೊಡುತ್ತಿದ್ದಾನೆ . ಆತನ ಕೈಗೆ ಆತನ ಗೆಳೆಯ ಪುಸ್ತಕ ಒಂದನ್ನು ನೀಡಿ ಹೊರಟುಹೋದ. ಈತನಿಗೆ ಸಮಯ ದಾಟಬೇಕಿತ್ತು. ಪುಸ್ತಕದೊಳಗೆ ಓದುವಿಕೆಯನ್ನು ಆರಂಭಿಸಿದ ಹಾಗೆ ಪ್ರತಿಪುಟಗಳನ್ನ ತಿರುವುತ್ತಾ ಹೋದ ಹಾಗೆ ಉತ್ಸಾಹ ಹೆಚ್ಚಾಗುತ್ತಾ ಹೋಯಿತು. ಆಸಕ್ತಿ ಹುಟ್ಟಿತು. ಪುಟ 108ಕ್ಕೆ ತಲುಪುವಾಗ ಕಥೆ ಕೌತುಕದ ಹಂತಕ್ಕೆ ತಲುಪಿತ್ತು. ಅಲ್ಲಿ ಬಂದ ಪಾತ್ರ ಒಂದರ ಸನ್ನಿವೇಶದ ತಿರುವಿಕೆಗೆ ಹಿಂದಿನೆರಡು ಪುಟಗಳ ವಿವರಣೆ ಅಗತ್ಯವಿತ್ತು. ತಕ್ಷಣದಲ್ಲಿ ಹಿಂದಿನ ಪುಟಕ್ಕೆ ತಿರುಗಿದಾಗ ಎಲ್ಲ ಪುಟಗಳು ಖಾಲಿಯಾಗಿ ಬಿಟ್ಟಿದ್ದವು. ಯಾವ ಪುಟದಲ್ಲೂ ಅಕ್ಷರಗಳ ಕುರುಹೇ ಇರಲಿಲ್ಲ. ಈಗ ಕಥೆಯನ್ನು ಮುಂದುವರಿಸಲೇಬೇಕಿತ್ತು ಏನು ಮಾಡದೆ ಕಥೆಯನ್ನು ಮುಂದುವರಿಸುತ್ತಾ ಮುಂದುವರಿಸುತ್ತಾ ಹೋದ ಹಾಗೆ ಕೌತುಕತೆಯ ಸನ್ನಿವೇಶಗಳು ಸೃಷ್ಟಿಯಾಗುತ್ತಾ? ಓದಿಗೆ ಸಾರ್ಥಕ್ಯ ಸಿಕ್ಕಿತು ಇಡೀ ಪುಸ್ತಕವನ್ನು ಮುಗಿಸಿ ಹೊಸ ಪುಸ್ತಕದ ಕಡೆಗೆ ಹೊರಟ. ಆಗ ಅವನಿಗೆ ಬದುಕು ಅರ್ಥವಾಗಿತ್ತು.ಹಿಂದಿನದ್ದನ್ನೇ ಯೋಚಿಸುತ್ತಾ ಕುಳಿತರೆ ಅದರಿಂದ ಏನೂ ಪ್ರಯೋಜನವಿಲ್ಲ ಹೊಸ ದಾರಿಯ ಹುಡುಕುತ್ತಾ ಹೋದರೆ ಖಂಡಿತ ಬದುಕಿಗೆ ಇನ್ನೊಂದು ಹೊಸ ಅವಕಾಶಗಳು ಸಿಕ್ಕೇ ಸಿಗುತ್ತದೆ ಅಂತ..
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಸೆಪ್ಟೆಂಬರ್ ೨೪, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬