ಮರವಾಗುವ ಆಸೆ.‌ ತುಂಬಾ ಎತ್ತರವಾಗಿ ಬೆಳೆಯಬೇಕು. ಕಾಲ ಕಾಲಕ್ಕೆ ಹೂ ಹಣ್ಣು ಬಿಟ್ಟು ಹಲವರಿಗೆ ಆಶ್ರಯದಾತನಾಗಬೇಕು. ನನ್ನ ಬೇರುಗಳು ನೆಲದಾಳಕ್ಕೆ ಇಳಿಯಬೇಕು.‌ ನೆಲವನ್ನ ಗಟ್ಟಿ ಹಿಡಿದಿಟ್ಟುಕೊಳ್ಳಬೇಕು, ಎಲ್ಲೂ ಕೂಡ ನನ್ನ ಅಪ್ಪಿರುವ ಮಣ್ಣು ನನ್ನಿಂದ ಜಾರಿ ಹೋಗದಂತೆ ಯಾವತ್ತೂ ಕೂಡ ಎಷ್ಟೇ ಎತ್ತರಕ್ಕೆ ಏರಿದರೂ ಈ ನೆಲವನ್ನ ಬಿಡದಂತೆ, ಇಂಗಾಲವನ್ನು ಪಡೆದು ಒಳಿತಿನ ಆಮ್ಲಜನಕವನ್ನು ಜನರ ದೇಹದೊಳಗೆ ಹರಿಸುವಂತೆ ಇನ್ನು ಹೆಚ್ಚು ಗಿಡಗಳಿಗೆ ಬೀಜವನ್ನು ಕೊಡುವಂತೆ ಹೀಗೆ ಆಸೆಗಳ ಪಟ್ಟಿ ತುಂಬಾ ದೊಡ್ಡದಿದೆ. ಹಲವು ಸಣ್ಣಪುಟ್ಟ ಹಕ್ಕಿಗಳು ಪ್ರಾಣಿಗಳು ನನ್ನನ್ನ ಆಶ್ರಯ ತಾಣವಾಗಿ ಬಳಸಿಕೊಳ್ಳುವಂತೆ ಒಂದಷ್ಟು ಕಟ್ಟಿಗೆಗೆ ಮುರಿದು ಬಿದ್ದಾಗ ಕೆಲವರ ಮನೆಗೆ ಹೀಗೆ ಪ್ರತಿ ಕ್ಷಣವು ಬಳಕೆಯಾಗುವ ಆಸೆ ನನ್ನದು. ಆದರೆ ಇಷ್ಟೆಲ್ಲ ಕನಸುಗಳನ್ನು ಹೊತ್ತಿರುವ ನನಗೆ ಬೀಜವನ್ನು ಹಾಕುವವರು ಯಾರು ಇಲ್ಲ. ಸರಿಯಾದ ಬೀಜವನ್ನು ಗಟ್ಟಿ ನೆಲದೊಳಗೆ ಇಳಿಸಿ ಹೋಗುವವರಿಗೆ ಕಾಯುತ್ತಿದ್ದೇನೆ ಮರವಾಗುವ ಆಸೆ ಖಂಡಿತ ಇದೆ ಬೀಜವನ್ನು ನೆಲದೊಳಗೆ ಇಳಿಸುವವರಿಗೆ ಕಾಯುತ್ತಿದ್ದೇನೆ. ನಿಮ್ಮಿಂದ ಸಾಧ್ಯವಾದರೆ ಬೀಜವನ್ನು ನೆಳದೊಳಗೆ ಇಳಿಸಿಬಿಡಿ.. ನಾನು ಮರವಾಗುತ್ತೆನೆ ಹೀಗೆ ರಾಜೀವನ ಮಾತಿನ ಬೇಡಿಕೆಗಳು ಸಣ್ಣದಿತ್ತು ಈಡೇರಿಸುವ ಶಕ್ತಿ ಸಾಮರ್ಥ್ಯವಿದ್ದರೂ ಯಾರು ಹತ್ತಿರ ಬರಲೇ ಇಲ್ಲ. -ಧೀರಜ್ ಬೆಳ್ಳಾರೆ ಚಿತ್ರ ಕೃಪೆ: ಇಂಟರ್ನೆಟ್ ತಾಣ