ಕನ್ನಡ ಪತ್ರಿಕಾ ಲೋಕ (ಭಾಗ ೨೨೭) - ವೇದ ತರಂಗ
ಶ್ರೀರಾಮ ದಿವಾಣ
ಸೆಪ್ಟೆಂಬರ್ ೨೭, ೨೦೨೫
೮ ವೀಕ್ಷಣೆಗಳು
"ವೇದ ತರಂಗ" ಮಾಸಪತ್ರಿಕೆ
ಬೆಂಗಳೂರಿನ "ಆರ್ಯ ಸಮಾಜ"ವು ಆರಂಭಿಸಿದ, ಪ್ರಸ್ತುತ "ಸನಾತನ ಭಾರತಿ ಟ್ರಸ್ಟ್" ಮುನ್ನಡೆಸುತ್ತಿರುವ ಮಾಸ ಪತ್ರಿಕೆಯಾಗಿದೆ "ವೇದ ತರಂಗ". ಬೆಂಗಳೂರು ವಿಶ್ವೇಶ್ವರಪುರಂನಲ್ಲಿ ಕಚೇರಿ ಹೊಂದಿರುವ ಆರ್ಯ ಸಮಾಜವು ೧೯೯೪ರಲ್ಲಿ ವೇದ ತರಂಗವನ್ನು ಆರಂಭಿತ್ತು. ೧೯೯೪ರಿಂದ ೨೦ ವರ್ಷಗಳ ಕಾಲ ಪ್ರಕಟಿಸಿಕೊಂಡುಬಂತು. ಈ ಅವಧಿಯಲ್ಲಿ ಸಂಪಾದಕರಾಗಿದ್ದವರು ಡಾ. ಪಂಡಿತ ಸುಧಾಕರ ಚತುರ್ವೇದಿ. ಸಂಸ್ಥೆಯು ೨೦೧೪ - ೧೫ರ ಅವಧಿಯಲ್ಲಿ ಪತ್ರಿಕೆಯ ಪ್ರಕಟಣೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿತು.
ಆರ್ಯ ಸಮಾಜವು ವೇದ ತರಂಗ ಮಾಸಪತ್ರಿಕೆಯ ಪ್ರಕಟಣೆ ಸ್ಥಗಿತಗೊಳಿಸಲು ನಿರ್ಧರಿಸಿದಾಗ , ಕೆಲ ಮಂದಿ ಸಮಾನ ಮನಸ್ಕರು ಪತ್ರಿಕೆಯ ಪ್ರಕಟಣೆಯನ್ನು ಮುಂದುವರಿಸುವ ಸಲುವಾಗಿ ಹೊಸದಾಗಿ ರಚಿಸಿದ ಸಂಸ್ಥೆಯಾಗಿದೆ ಸನಾತನ ಭಾರತಿ ಟ್ರಸ್ಟ್. ಈ ಸಂಸ್ಥೆಯು ೨೦೧೫ರಿಂದ ಪತ್ರಿಕೆಯನ್ನು ಪ್ರಕಟಿಸಿಕೊಂಡುಬರುತ್ತಿದೆ.
ಉದ್ಯಮಿ, ತತ್ತ್ವಚಿಂತಕ, ಅಕ್ಷರ ವಿಜ್ಞಾನಿ ಡಾ. ಕೈಪ ಶೇಷಾದ್ರಿ ವ್ಯವಸ್ಥಾಪಕ ನಿರ್ದೇಶಕರು. ಡಿ. ವಿ. ವಾಸುದೇವ ರಾವ್ ಪ್ರಕಾಶಕರು. ಶ್ರುತಿಪ್ರಿಯ ಸಂಪಾದಕರು. ರೇವತಿ ಎಂ. ಈ. ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿದ್ದಾರೆ. ಬೆಂಗಳೂರು ಬಸವನಗುಡಿಯ ಗಾಂಧಿ ಬಜಾರ್ ನ ಪಶ್ಚಿಮ ಆಂಜನೇಯ ಗುಡಿ ಬಳಿ ಪತ್ರಿಕಾ ಕಾರ್ಯಾಲಯ ಕಾರ್ಯವೆಸಗುತ್ತಿದೆ. ಸನಾತನ ಭಾರತಿ ಪ್ರಿಂಟರ್ಸ್ & ಪಬ್ಲಿಷರ್ಸ್ ನಲ್ಲಿ ಪತ್ರಿಕೆ ಮುದ್ರಣವಾಗುತ್ತಿದೆ.
ಪುಸ್ತಕ ರೂಪದಲ್ಲಿ, ೪೪ ಪುಟಗಳನ್ನು ಹೊಂದಿರುವ ಪತ್ರಿಕೆಯ ಬಿಡಿ ಸಂಚಿಕೆಯ ಬೆಲೆ ೨೫/- ರೂಪಾಯಿಗಳು. ವೇದಗಳ ಸಂದೇಶ ಮತ್ತು ಪುರಾಣ ಚಿಂತನೆಗಳಿಗೆ ಸಂಬಂಧಿಸಿ ವಿವಿಧ ಲೇಖಕರು ಬರೆದ ಲೇಖನಗಳು, ವಿವಿಧ ಸಂಸ್ಕೃತ ಮತ್ತು ಹಿಂದಿ ಲೇಖನಗಳ ಕನ್ನಡ ಅನುವಾದಿತ ಬರೆಹಗಳು ಪತ್ರಿಕೆಯಲ್ಲಿ ಆದ್ಯತೆಯಲ್ಲಿ ಪ್ರಕಟವಾಗುತ್ತವೆ.
~ ಶ್ರೀರಾಮ ದಿವಾಣ
ಪ್ರಕಟಿಸಿದ: ಸೆಪ್ಟೆಂಬರ್ ೨೭, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬