ಆಧುನಿಕ ಭಾರತದ ಮಿಲಿಟರಿ ಘಟನಾವಳಿಗಳು ಮತ್ತು ರಾಜಕೀಯ ಬೆಳವಣಿಗೆಗಳನ್ನು ಗಮನಿಸುವವರಿಗೆ ನಿನ್ನೆ (೨೬-೦೯) ಮಾಮೂಲಿನಂತೆ ಒಂದು ದಿನ ಮಾತ್ರ ಆಗಿರಲಿಲ್ಲ, ಹಲವು ನೆನಪುಗಳು ಸಾಲಾಗಿ ಬಂದು, ಹಾಗೆ ಒಮ್ಮೆ ಹಾದು ಹೋದಂತೆನಿಸಿರುತ್ತದೆ. ರಕ್ಷಣಾ ಸಚಿವರ ಸಮಕ್ಷಮದಲ್ಲಿ ತನ್ನ ಆರು ದಶಕಗಳ ಸೇವೆಯಿಂದ ಮುಕ್ತನಾಗುವ ಮೂಲಕ ಮಿಗ್ 21 ನಿನ್ನೆ ದೇಶದ ಚರಿತ್ರೆಯ ಒಂದು ಭಾಗವಾಯಿತು. ಸ್ವತಃ ತಾನೇ ಒಂದು ಸ್ಮಾರಕವಾಯಿತು. ಕೆಲವರಿಗೆ ಕಣ್ಣು ತುಂಬಿ ಬಂದರೆ, ಇನ್ನು ಕೆಲವರಿಗೆ ಹಿರಿಯರೊಬ್ಬರ ಸ್ಥಾನಪಲ್ಲಟ ನೆನಪಾಯಿತು. ಒಟ್ಟಾರೆ ಹೇಳಬೇಕೆಂದರೆ ಮಿಗ್ 21ರ ನಿವೃತ್ತಿ ದೇಶದ ಪ್ರಮುಖ ಘಟನೆಯಾಗಿ ದಾಖಲಾಗಿದ್ದಷ್ಟೇ ಅಲ್ಲ, ಭಾವನಾತ್ಮಕ ಸಂಗತಿಯಾಗಿಯೂ ಚರಿತ್ರೆಯಲ್ಲಿ ದಾಖಲಾಯಿತು. ಬಹುಶ ವಾಯುಪಡೆ ಹಿಂದೆಂದೂ ಇಂಥ ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿರಲಿಲ್ಲವೇನೊ. ರಾಫೆಲ್ ಆಗಮಿಸಿದ ದಿನಕ್ಕಿಂತಲೂ ಹೆಚ್ಚಿನ ಮಹತ್ವವನ್ನು ವಾಯುಪಡೆ ಮಿಗ್ 21ರ ನಿವೃತ್ತಿಗೆ ಕೊಟ್ಟಿದ್ದು ವಿಶೇಷ. ಚಂಡಿಗಡ ವಾಯುನೆಲೆಯ ಕಾರ್ಯಕ್ರಮದಲ್ಲಿ ಮತಾನಾಡುತ್ತಾ ರಕ್ಷಣಾ ಸಚಿವರು, ಮಿಗ್ 21 ಭಾರತದ ಪಾಲಿಗೆ ಕೇವಲ ಒಂದು ಯಂತ್ರ ಮಾತ್ರ ಆಗಿರಲಿಲ್ಲ. ಅದು ಭಾರತ-ರಷ್ಯಾ ಸಂಬಂಧಕ್ಕೆ ಸಾಕ್ಷಿಯಾಗಿತ್ತು ಎಂದು ಬಣ್ಣಿಸಿದರು. ಆರು ದಶಕಗಳ ಹಿಂದೆ ಭಾರತದ ವಾಯುಗಡಿಯನ್ನು ನಿರಂತರವಾಗಿ ರಕ್ಷಿಸುತ್ತಾ ಬಂದ ಮಿಗ್ ರಷ್ಯಾವನ್ನು ಅಂದಿನಿಂದಲೂ ಆಪ್ತ ದೇಶವನ್ನಾಗಿ ಭಾರತಕ್ಕೆ ನೆನಪು ಮಾಡುತ್ತಲೇ ಇತ್ತು. ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ವಿಶ್ವದ ಅನೇಕ ದೇಶಗಳು ಭಾರತಕ್ಕೆ ಯುದ್ಧ ವಿಮಾನಗಳನ್ನು ಕೊಡಲು ಒಪ್ಪದೇ ಇಡಾಗ ರಷ್ಯಾ ನಂಬಿಗಸ್ವ ಭಾರತಕ್ಕೆ ಮಿಗ್ 21 ಅನ್ನು ನೀಡಿತ್ತು. ಅಂದಿನಿಂದ ಮಿಗ್ ಕೂಡ ಆ ಸಂಬಂಧವನ್ನು ಅರ್ಥ ಮಾಡಿಕೊಂಡಂತೆಯೋ ಅಥವಾ ಭಾರತದ ಸ್ಥಿತಿಯನ್ನು ತಿಳಿದುಕೊಂಡಂತೆಯೋ ಭಾರತವನ್ನು ರಕ್ಷಿಸುತ್ತಲೇ ಬಂತು. ಮಿಗ್ 21ಕ್ಕಿಂತ ಪ್ರಬಲವೂ, ವೇಗವೂ ಆಗಿರುತ್ತಿದ್ದ ಶತ್ರುದೇಶಗಳ ವಿಮಾನಗಳನ್ನು ಹೊಡೆದುರುಳಿಸಿದ ಶೂರತ್ವವನ್ನು ಅದು ಪ್ರತಿ ಯುದ್ಧದಲ್ಲೂ ಪ್ರದರ್ಶಿಸಿತು, ಅಮೆರಿಕಾದ ಎಫ್ ಸರಣಿಯ ವಿಮಾನಗಳು ಬೆಚ್ಚಿಬೀಳುವಂತೆ ಮಾಡಿದ ಶ್ರೇಯಸ್ಸನ್ನೂ ಮಿಗ್ 21 ಪಡೆದಿದ್ದವು. ಅಂಥ ಮಿಗ್ 21 ಕೊನೆಯ ದಿನಗಳಲ್ಲಿ ರಾಜಕೀಯ ಕಾರಣಗಳಿಂದ ಹಾರಾಡುವ ಶವಪೆಟ್ಟಿಗೆ' ಎಂದು ಕರೆಸಿಕೊಂಡಿದ್ದು ದೇಶದ ದೌರ್ಭಾಗ್ಯ, ಮುಂದಿನ ದಿನಗಳಲ್ಲಿ ಮತರ ವಿಮಾನಗಳೂ ಪತನಗೊಂಡವು. ಆದರೆ ಸಂವೇದನೆ ಇಲ್ಲದ ರಾಜಕಾರಣಿಗಳು ನಾಲಿಗೆ ಚಪಲಕ್ಕಾಗಿ ಮಿಗ್ 21 ಅನ್ನು ಕೀಳಾಗಿ ಬಿಂಬಿಸಿದರು. ಆದರೆ ಒಂದು ದಿನವೂ ಮಿಗ್ 21ರ ಕಾರಣದಿಂದ ದೇಶ ಉಳಿಯಿತು ಎಂದು ಭಾವಿಸಲಿಲ್ಲ. ಏನೇ ಇರಲಿ ಇನ್ನು ಇವೆಲ್ಲವೂ ನೆನವು ಮಾತ್ರ. ಮಿಗ್ 21ರ ನೆನಪು ಆಗಸಕ್ಕಂತೂ ಇದ್ದೇ ಇರುತ್ತದೆ. ಭಾರತದ ವೀರತೆಯ ಕತೆಯನ್ನು ಮಿಗ್ ಹೇಳುತ್ತಲೇ ಇರುತ್ತದೆ. ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೨೭-೦೯-೨೦೨೫ ಚಿತ್ರ ಕೃಪೆ: ಅಂತರ್ಜಾಲ ತಾಣ