ಸಹನೆಯ ಫಲ ಅತಿ ಮಧುರ
ಬರಹಗಾರರ ಬಳಗ
ಸೆಪ್ಟೆಂಬರ್ ೨೮, ೨೦೨೫
೧೬ ವೀಕ್ಷಣೆಗಳು
ಒಮ್ಮೆ ಶಾಲೆಯಲ್ಲಿ ತರಗತಿಯ ಶಿಕ್ಷಕರೊಬ್ಬರು ತಮ್ಮ ತರಗತಿಯ ಎಲ್ಲಾ ಮಕ್ಕಳಿಗೆ ರುಚಿಕರವಾದ ಸಿಹಿತಿಂಡಿಗಳನ್ನು ಹಂಚುತ್ತಾರೆ ಮತ್ತು ವಿಚಿತ್ರವಾದ ಷರತ್ತು ವಿಧಿಸುತ್ತಾರೆ. “ಕೇಳಿ ಮಕ್ಕಳೇ, ಇನ್ನು ಹತ್ತು ನಿಮಿಷ ನೀವೆಲ್ಲರೂ ನಿಮ್ಮ ಸಿಹಿತಿಂಡಿಗಳನ್ನು ತಿನ್ನಬಾರದು!" ಎಂದು ಹೇಳಿ ತರಗತಿಯಿಂದ ಹೊರಗೆ ಹೋದರು.
ತರಗತಿಯಲ್ಲಿ ಸ್ವಲ್ಪ ಹೊತ್ತು ಮೌನ ಆವರಿಸಿತು. ಎಲ್ಲ ಮಕ್ಕಳು ತಮ್ಮ ಮುಂದೆ ಇಟ್ಟಿದ್ದ ಸಿಹಿತಿಂಡಿಗಳನ್ನು ನೋಡುತ್ತಿದ್ದರು, ಕ್ಷಣಗಳು ಕಳೆಯುತ್ತಿದ್ದಂತೆ ತಮ್ಮ ಮುಂದಿರುವ ಸಿಹಿಯನ್ನು ತಿನ್ನದೇ ತಮ್ಮನ್ನು ನಿಯಂತ್ರಿಸಿ ಕೊಳ್ಳಲು ಕಷ್ಟವಾಗತೊಡಗಿತು. ಹತ್ತು ನಿಮಿಷಗಳ ನಂತರ ಶಿಕ್ಷಕರು ತರಗತಿಯ ಕೋಣೆಗೆ ಪ್ರವೇಶಿಸಿದರು.ಅವರು ಪರಿಸ್ಥಿತಿ ಅವಲೋಕಿಸಿದರು. ಇಡೀ ತರಗತಿಯಲ್ಲಿ ಏಳು ಮಕ್ಕಳು ಮಾತ್ರ ಸಿಹಿತಿಂಡಿಗಳನ್ನು ತಿನ್ನದೆ ಇರುವುದನ್ನು ಅವರು ಕಂಡುಕೊಂಡರು. ಉಳಿದ ಮಕ್ಕಳೆಲ್ಲ ಸಿಹಿ ತಿಂದು ಅದರ ಬಣ್ಣ, ರುಚಿಯ ಬಗ್ಗೆ ತಮ್ಮ ತಮ್ಮಲ್ಲಿ ಮಾತನಾಡಿಕೊಳ್ಳುತ್ತಿದ್ದರು. ಶಿಕ್ಷಕರು ಏನೂ ಮಾತನಾಡದೆ ತಮ್ಮ ಡೈರಿಯಲ್ಲಿ ಈ ಏಳು ಮಕ್ಕಳ ಹೆಸರನ್ನು ರಹಸ್ಯವಾಗಿ ದಾಖಲಿಸಿಕೊಂಡು ಪಾಠ ಮಾಡಲು ಆರಂಭಿಸಿದರು. ಈ ಶಿಕ್ಷಕನ ಹೆಸರು 'ವಾಲ್ಟರ್ ಮಿಷೆಲ್ '
ಹಲವು ವರ್ಷಗಳ ನಂತರ, ವಾಲ್ಟರ್ ತನ್ನ ಡೈರಿಯನ್ನು ತೆರೆಯುತ್ತಾನೆ ಮತ್ತು ಏಳು ಮಕ್ಕಳ ಹೆಸರುಗಳ ಮೇಲೆ ಕಣ್ಣಾಡಿಸಿ, ಅವರು ಈಗ ಏನು ಮಾಡುತ್ತಿದ್ದಾರೆಂದು ಅವರ ಬಗೆಗಿನ ವಿವರಗಳನ್ನು ಕಲೆಹಾಕುತ್ತಾನೆ. ಈ ಏಳು ಮಕ್ಕಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಅವರಿಗೆ ತಿಳಿದುಬಂತು.ಅದೇ ತರಗತಿಯ ಇತರ ವಿದ್ಯಾರ್ಥಿಗಳ ಬಗ್ಗೆಯೂ ವಿಚಾರಿಸಿದರು. ಅವರಲ್ಲಿ ಹೆಚ್ಚಿನವರು ಸರಳ ಜೀವನವನ್ನು ನಡೆಸುತ್ತಿದ್ದರೆ, ಕೆಲವರು ಕಷ್ಟಕರವಾದ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದಾರೆ ಎಂದು ಅವರಿಗೆ ತಿಳಿಯಿತು.
ವಾಲ್ಟರ್ ತನ್ನ ಸಂಶೋಧನೆಯನ್ನು ಈ ಒಂದೇ ವಾಕ್ಯದಲ್ಲಿ ಹೇಳಿ ಮುಗಿಸುತ್ತಾನೆ - "ಹತ್ತು ನಿಮಿಷ ಸಹ ತಾಳ್ಮೆಯಿಂದಿರಲು ಸಾಧ್ಯವಿಲ್ಲದವನು ಜೀವನದಲ್ಲಿ ಎಂದಿಗೂ ಪ್ರಗತಿ ಹೊಂದಲು ಸಾಧ್ಯವಿಲ್ಲ." ಈ ಸಂಶೋಧನೆಯು ವಿಶ್ವಾದ್ಯಂತ ಖ್ಯಾತಿಯನ್ನು ಗಳಿಸಿತು. ಶಿಕ್ಷಕ ವಾಲ್ಟರ್ ಮಕ್ಕಳಿಗೆ ನೀಡಿದ ಸಿಹಿತಿಂಡಿಗಳು "ಮಾರ್ಷ್ ಮೆಲ್ಲೋ" ಆಗಿರುವುದರಿಂದ, ಇದು "ಮಾರ್ಷ್ ಮೆಲ್ಲೋ ಸಿದ್ಧಾಂತ" ಎಂದು ಕರೆಯಲ್ಪಟ್ಟಿತು. ಈ ಸಿದ್ಧಾಂತದ ಪ್ರಕಾರ, ವಿಶ್ವದ ಅತ್ಯಂತ ಯಶಸ್ವಿ ಜನರು ಯಾವಾಗಲೂ ಅನೇಕ ಪ್ರಮುಖ ಗುಣಲಕ್ಷಣಗಳಲ್ಲಿ "ಸಹನೆ " ಹೊಂದಿರುತ್ತಾರೆ. ಸಹನೆಯು ವ್ಯಕ್ತಿಯ ಸಹಿಷ್ಣುತೆಯನ್ನು ಹೆಚ್ಚಿಸುವುದರಿಂದ, ಪ್ರತಿಕೂಲ ಸಂದರ್ಭಗಳಲ್ಲಿಯೂ ಅವನು ಎದೆಗುಂದುವುದಿಲ್ಲ. ಸ್ವಯಂ ಪ್ರೇರಿತಗೊಂಡು ಯಶಸ್ವಿ ವ್ಯಕ್ತಿಯಾಗುತ್ತಾನೆ. ಈ ಉನ್ನತ ಗುಣವನ್ನು (ಸಹನೆ) ಮತ್ತಷ್ಟು ಮಗದಷ್ಟು ನಮ್ಮಲ್ಲಿ ಹೆಚ್ಚಿಸಿಕೊಳ್ಳೋಣವೇ?
~ಸಂಪಿಗೆ ವಾಸು, ಬಳ್ಳಾರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಸೆಪ್ಟೆಂಬರ್ ೨೮, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬