ಸ್ಟೇಟಸ್ ಕತೆಗಳು (ಭಾಗ ೧೪೫೮) - ವಿದೇಶ
ಬರಹಗಾರರ ಬಳಗ
ಸೆಪ್ಟೆಂಬರ್ ೩೦, ೨೦೨೫
೧೨ ವೀಕ್ಷಣೆಗಳು
ಎರಡು ವರ್ಷಗಳವರೆಗೆ ಮನೆಯವರ ಮುಖ ನೋಡುವ ಹಾಗಿಲ್ಲ, ಊರಿನ ಕಾರ್ಯಕ್ರಮದಲ್ಲಿ ಸುತ್ತಾಡುವುದಕ್ಕೆ ಆಗುವುದಿಲ್ಲ, ಮನಸ್ಸಿಗೆ ಇಷ್ಟವಾದಾಗ ಮನೆಯ ಪಕ್ಕದ ಅಂಗಡಿಯಲ್ಲಿ ಕುಳಿತು ಹರಟುವುದಕ್ಕಾಗುವುದಿಲ್ಲ, ಇದೆಲ್ಲ ಗೊತ್ತಿದ್ದೇ ದಿನೇಶ ಹೊರಟಿದ್ದಾನೆ, ಹೋಗುವುದಕ್ಕೆ ಒಂದು ಚೂರು ಮನಸ್ಸಿಲ್ಲದಿದ್ದರೂ ಬದುಕಿನ ಪರಿಸ್ಥಿತಿ ಅವನನ್ನ ಊರು ಬಿಡಿಸಿದೆ. ಓದಿಗೆ ತಕ್ಕನಾದ ಕೆಲಸ ಒಂದು ಕೈಯಲ್ಲಿದ್ದರೂ ಕೂಡ ಕನಸುಗಳು ಮತ್ತು ಮನೆಯ ಭದ್ರ ಅಡಿಪಾಯಕ್ಕೆ ಊರು ಬಿಟ್ಟು ಎತ್ತರದಲ್ಲಿ ಹಾರಬೇಕಿತ್ತು. ವಿಮಾನ ನಿಲ್ದಾಣದಲ್ಲಿ ದೊಡ್ಡದಾದ ಬ್ಯಾಗನ್ನು ತಳ್ಳುತ್ತಾ ಹೊರಡುವಾಗ ಕಣ್ಣುಗಳು ನೀರು ಇಳಿಸುತ್ತಿವೆ. ಬಿಡುವುದಕ್ಕೆ ಬಂದವರೆಲ್ಲರಿಗೂ ಬೇಸರವಾದರೂ ಪರಿಸ್ಥಿತಿಯನ್ನು ಒಪ್ಪಿಕೊಂಡ ಅಪ್ಪಿಕೊಂಡಿದ್ದಾರೆ. ಅಪರಿಚಿತರಂತೆ ಗುರುತಿಲ್ಲದ ಊರಿನಲ್ಲಿ ಗುರುತಿಸಿಕೊಳ್ಳಬೇಕಾಗಿದೆ. ನಂಬಿಕೆ ಇದೆ ತನ್ನ ಹಾಗೆ ಊರು ಬಿಟ್ಟವರ ಜೊತೆ ಅಲ್ಲಿ ಬದುಕು ಕಟ್ಟಿಕೊಳ್ಳುತ್ತೇನೆ. ಎರಡು ವರ್ಷ ಊರು ಬಿಟ್ಟರೆ 10 ವರ್ಷ ಮನೆಯವರು ನೀಡಿದಾದ ಉಸಿರನ್ನು ನೆಮ್ಮದಿಯಲ್ಲಿ ಬಿಡಬಹುದು. ವಿಮಾನದ ಸೀಟಿಗೆ ತಲೆಯೊರಗಿಸಿಕೊಂಡವನಿಗೆ ಬದುಕಿನಲ್ಲಿ ಎಲ್ಲ ಕ್ಷಣಗಳು ಹಾದು ಹೋದವು. ತಾನು ಓದಿದ್ದಕ್ಕೂ ಮಾಡುತ್ತಿರುವ ಕೆಲಸಕ್ಕೂ ಸಂಬಂಧವೇ ಇಲ್ಲ ಅನ್ನೋದು ಅರ್ಥವಾದರೂ ಸುಮ್ಮನೆ ಮುಖದಲ್ಲಿ ನಗುವನ್ನು ತಂದುಕೊಂಡು ವಿದೇಶಕ್ಕೆ ಹೊರಟ ಉಳಿದವರೆಲ್ಲರ ಮುಖವನ್ನು ಗಮನಿಸಿದ ತನ್ನದೇ ಭಾವ ಅಲ್ಲೂ ಕಾಣುವಂತೆ ಅನಿಸುತ್ತಿತ್ತು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಸೆಪ್ಟೆಂಬರ್ ೩೦, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬