ಕೆಲವೊಂದು ನಿರಾಕರಣೆಗೂ ಧೈರ್ಯ ಬೇಕು, ಅದರಲ್ಲೂ ಪ್ರಾಮಾಣಿಕರು ತೋರುವ ನಿರಾಕರಣೆಯ ಧೈರ್ಯ ಸುತ್ತಲಿನವರ ಹೃದಯ ಗೆಲ್ಲುತ್ತದೆ ಎಂಬುದಕ್ಕೆ ದುಬೈನಲ್ಲಿನ ಏಷ್ಯಾಕಪ್ ಫೈನಲ್‌ನ ಟ್ರೋಫಿ ಸ್ವೀಕಾರ ಸಮಾರಂಭವೇ ಸಾಕ್ಷಿ. ಪಾಕಿಸ್ತಾನದ ವಿರುದ್ಧ ಅದ್ಭುತ ಪ್ರದರ್ಶನ ನೀಡಿ ಟೀಂ ಇಂಡಿಯಾ ಚಾಂಪಿಯನ್ ಆದಾಗ್ಯೂ ಪಾಕ್ ಮುಖಂಡನ ಕೈಯಿಂದ ಟ್ರೋಫಿಯನ್ನು ಸ್ವೀಕರಿಸಲು ಭಾರತದ ಹುಡುಗರು ಸಿದ್ಧರಿರಲಿಲ್ಲ, ಟೀಂ ಇಂಡಿಯಾ ಈ ಪ್ರಶಸ್ತಿ ನಿರಾಕರಿಸಿದ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮತ್ತು ಏಷ್ಯನ್ ಕ್ರಿಕೆಟ್ ಸಮಿತಿ ಅಧ್ಯಕ್ಷ ಮೊಹ್ಸಿನ್ ನಕ್ವಿ ಕಾಯುವಷ್ಟು ಕಾದು ಅಂತಿಮವಾಗಿ ಕಡೆಗೆ ಹಸ್ತಾಂತರಿಸಬೇಕಾದ ಟ್ರೋಫಿಯನ್ನು ತಾವೇ ಹೊತ್ತೊಯ್ದರು. ಅವರಿಗೆ ಬೆಳ್ಳಿಲೇಪಿತ ಟ್ರೋಫಿಯನ್ನಷ್ಟೇ ಹೊತ್ತೊಯ್ಯಲು ಸಾಧ್ಯವಾಯಿತೇ ಹೊರತು, ಭಾರತ ಚಾಂಪಿಯನ್ ಆದ ಸಂಭ್ರಮದ ಬಂಗಾರದ ಕ್ಷಣವನ್ನಲ್ಲ. ಕಾರಣ, ಮೈದಾನದಲ್ಲಿನ ಈ ಗೆಲುವು ಕೇವಲ ಕ್ರೀಡಾಪಟುಗಳ ದಿಗ್ವಿಜಯವಲ್ಲ; ಅದು ನಮ್ಮ ಸೇನೆ ಹಾಗೂ ಶತಕೋಟಿ ಭಾರತೀಯರ ಸಡಗರವೂ ಹೌದು. ಭಾರತೀಯ ತಂಡ ಟ್ರೋಫಿ ಸ್ವೀಕರಿಸಲು ಮುಂದೆ ಬರಲಿಲ್ಲ ಎಂಬುದೇ ಪಾಕಿಸ್ತಾನದತ್ತ ರವಾನೆಯಾದ ಕಠಿಣ ರಾಜತಾಂತ್ರಿಕ ಸಂದೇಶ, ಗಲ್ಫ್ ರಾಷ್ಟ್ರಗಳ ಜತೆಗೆ ಮಿಲಿಟರಿ ಸ್ನೇಹದ ಹೊಸ ನಾಟಕ ಆರಂಭಿಸಿರುವ ಪಾಕಿಸ್ತಾನಕ್ಕೆ ಈ ಮುಖಭಂಗ ದುಬಾರಿಯಾಗಲೂಬಹುದು. ಹಾಗೆ ನೋಡಿದರೆ, ಕ್ರೀಡೆಯಲ್ಲಿ ರಾಜಕೀಯ ಬೆರೆಸಬಾರದು ಎಂಬ ಅರಿವು ಭಾರತಕ್ಕೆ ಇದ್ದೇ ಇದೆ. "ಆಟವನ್ನೂ ಗೆಲ್ಲಿ, ಆಟದೊಂದಿಗೆ ಹೃದಯವನ್ನೂ ಗೆದ್ದು ಬನ್ನಿ," ಎಂಬ ಅಟಲ್ ಬಿಹಾರಿ ವಾಜಪೇಯಿ ಅವರ ಮಾತನ್ನೂ ಚಾಚೂತಪ್ಪದೇ ಪಾಲಿಸಿದ ಕ್ರಿಕೆಟ್ ತಂಡ ನಮ್ಮದು. ಆದರೆ, ಪಾಕಿಸ್ತಾನದ ನಡವಳಿಕೆ ಇಂದಿಗೂ ಬದಲಾಗದೆ, ಹಿಂದೆಂದಿಗಿಂತ ನಿಕೃಷ್ಟ ಸ್ಥಿತಿಗೆ ತಲುಪಿರುವ ಕಾರಣಕ್ಕೆ ಭಾರತ ಅನಿವಾರ್ಯವಾಗಿ ನಾಗಿ ಶತ್ರುರಾಷ್ಟ್ರಕ್ಕೆ ತಕ್ಕ ಪಾಠ ಕಲಿಸಲೇಬೇಕಾಯಿತು. ಕ್ರೀಡೆ ಮೂಲಕವೂ ಶತ್ರುರಾಷ್ಟ್ರದ ಜತೆಗೆ ನಂಟು ಬೆಸೆಯಲು ಸಾಧ್ಯವಿಲ್ಲ ಎಂಬುದನ್ನು ಈ ಟ್ರೋಫಿರಹಿತ ಸಂಭ್ರಮಾಚರಣೆ ಮೂಲಕ ಭಾರತ ಜಗತ್ತಿಗೆ ಸಾರಿ ಹೇಳಿದೆ. ಇದು ಕೇವಲ ಕ್ರೀಡೆಯ ಸಡಗರವಲ್ಲ, ಸಮಸ್ತ ದೇಶದ್ದು ಕ್ರೀಡೆಯಲ್ಲಿ ಪಾಲ್ಗೊಳ್ಳುವುದಷ್ಟೇ ಅಲ್ಲ, ವಿಶ್ವಶಾಂತಿ ಸ್ಥಾಪನೆಗೆ ಸಹಕರಿಸುವುದು, ಮಾನವೀಯತೆಯನ್ನು ಅಳವಡಿಸಿಕೊಳ್ಳುವುದು ಮುಖ್ಯ. ಪಾಕಿಸ್ತಾನ ಇದನ್ನು ಕಲಿಯುವುದೆಂದು? ಇಂದಲ್ಲ, ನಾಳೆ ನ್ಯಾಯಯುತವಾಗಿ, ಗೌರವಯುತವಾಗಿಯೇ ಟ್ರೋಫಿ ಭಾರತದ ಕೈಸೇರಲಿದೆ ಎಂಬುದು ಬಿಸಿಸಿಐ ವಿಶ್ವಾಸ. ಅದು ನಿರ್ವಿವಾದವಾಗಿ ಕೈಗೂಡಲಿ. ಭಾರತ ಟ್ರೋಫಿ ಎತ್ತಿ ಹಿಡಿಯದಿದ್ದರೂ, ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ರಾಷ್ಟ್ರ ಎನ್ನುವ ಈ ಸಂದೇಶದಿಂದ ಪಾಕಿಸ್ತಾನದ ಡೊಂಕು ಬಾಲ ಸರಿಯಾಗುವುದೇ? ಎಂಬುದೇ ಯಕ್ಷಪ್ರಶ್ನೆ. ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೩೦-೦೯-೨೦೨೫ ಚಿತ್ರ ಕೃಪೆ: ಅಂತರ್ಜಾಲ ತಾಣ