ಮಳೆ ಸುರಿಯುತ್ತಿರುವಾಗ ಪಕ್ಷಿಗಳನ್ನು ಕಂಡಿದ್ದೀರಾ? ಆಗ ಅವು ಕಣ್ಮರೆ! ಹಾಗೆಯೇ ಮಳೆ ಹೊಯ್ಯುತ್ತಿರುವಾಗ ಹಕ್ಕಿಗಳ ಚಿಲಿಪಿಲಿ ಸದ್ದು ಕೇಳಿಸುವುದಿಲ್ಲ. ಹಾಗಿದ್ದರೆ ಆಗ ಪಕ್ಷಿಗಳು ಎಲ್ಲಿರುತ್ತವೆ? ಮರಗಿಡಬಳ್ಳಿಗಳಿಗೆ, ಪ್ರಾಣಿಗಳಿಗೆ ಹಾಗೂ ಭೂಮಿಗೆ ನೀರು ತರುತ್ತದೆ ಮಳೆ. ಹನಿಹನಿ ಮಳೆ ಬೀಳುತ್ತಿರುವಾಗ ಹಲವಾರು ಹಕ್ಕಿಗಳು ಹಾರುತ್ತಾ ಇರುತ್ತವೆ ಮತ್ತು ಆಹಾರಕ್ಕಾಗಿ ಹುಡುಕಾಡುತ್ತಾ ಇರುತ್ತವೆ. ಜೋರಾಗಿ ಮಳೆ ಸುರಿಯುತ್ತಿರುವಾಗ ಮತ್ತು ಮಳೆಮಾರುತಗಳು ಬೀಸುತ್ತಿರುವಾಗ ಪಕ್ಷಿಗಳು ದಟ್ಟವಾದ ಎಲೆಚಾವಣಿ ಹೊಂದಿರುವ ಮರ ಹಾಗೂ ಪೊದೆಗಳ ಆಶ್ರಯ ಪಡೆಯುತ್ತವೆ. ಮಳೆಮಾರುತದ ಸುಳಿವು ಮೊದಲಾಗಿ ಸಿಗುವುದು ಸಮುದ್ರ ಪಕ್ಷಿಗಳಿಗೆ. ಆಗ ಅವು ಏನು ಮಾಡುತ್ತವೆ? ಪೆಲಿಕನ್-ಗಳು ಮತ್ತು ಸೀ-ಗಲ್ ಹಕ್ಕಿಗಳು ತಕ್ಷಣವೇ ಭೂಪ್ರದೇಶಕ್ಕೆ ಹಾರಿ, ಮರಗಳ ಕೊಂಬೆಗಳಲ್ಲಿ ಕುಳಿತು ಆಶ್ರಯ ಪಡೆಯುತ್ತವೆ.  ರೋಬಿನ್ ಮತ್ತು ವಾರ್-ಬ್ಲರ್ (Warbler) ಹಕ್ಕಿಗಳು ಮರಗಳಲ್ಲಿ ಆಶ್ರಯ ಪಡೆಯುತ್ತಾ ಕೆಳಗಿನ ಒದ್ದೆ ಮಣ್ಣಿನಲ್ಲಿರುವ ಕೀಟ ಹಾಗೂ ಹುಳಗಳನ್ನು ಬೇಟೆಯಾಡುತ್ತವೆ. ಇತರ ಪ್ರಾಣಿಪಕ್ಷಿಗಳನ್ನು ಬೇಟೆಯಾಡುವ ಗಿಡುಗ ಮತ್ತು ಹಾಕ್ (Hawk) ಪಕ್ಷಿಗಳು  ಜೋರಾಗಿ ಮಳೆ ಬೀಳುವಾಗ ಮಾತ್ರ ಹಾರಾಟ ನಿಲ್ಲಿಸಿ, ಆಶ್ರಯ ಪಡೆಯುತ್ತವೆ. ಹಾಡುಹಕ್ಕಿಗಳಾದ ಚಿಕಾಡೆಗಳು, ರೆನ್ ಗಳು ಮತ್ತು ಗೋಲ್ಡ್-ಫಿಂಚ್ ಗಳು (Chickadees, Wrens & Goldfinches) - ಇವು ಆಶ್ರಯ ಪಡೆಯುವುದು ಮರಗಳ ಎಲೆಗಳ ಕೆಳಗೆ (ಫೋಟೋ ನೋಡಿ). ತಮ್ಮ ಚೈತನ್ಯ ಉಳಿಸಿಕೊಂಡು ಬೆಚ್ಚಗೆ ಇರಲಿಕ್ಕಾಗಿ ಅವು ನಿಶ್ಚಲವಾಗಿ ಕುಳಿತಿರುತ್ತವೆ. ಮರಗಳ ಪೊಟರೆಗಳಲ್ಲಿ ವಾಸ ಮಾಡುವ ನಟ್-ಹ್ಯಾಚ್-ಗಳು ಮತ್ತು ಮ್ಯಾಕಾಗಳು (Nuthatches & Macaws) ತಮ್ಮ ಅಚ್ಚುಕಟ್ಟಾದ ಪೊಟರೆ-ಮನೆಗಳಲ್ಲಿ ಉಳಿಯುತ್ತವೆ. ಇಂತಹ ಹಕ್ಕಿಗಳು ತಮ್ಮನ್ನು ಬೆಚ್ಚಗೆ ಇರಿಸಿಕೊಳ್ಳಲಿಕ್ಕಾಗಿ ಒಂದಕ್ಕೊಂದು ತಗಲಿಕೊಂಡು ಕುಳಿತಿರುತ್ತವೆ.  ಬಾತುಕೋಳಿಗಳು ಮತ್ತು ಹಂಸಗಳು - ಇಂತಹ ನೀರುಹಕ್ಕಿಗಳಿಗೆ ಮಳೆಯೆಂದರೆ ಪಂಚಪ್ರಾಣ. ಅವು ನೀರಿನಲ್ಲಿ ಈಜಾಡುತ್ತಾ ಇರುವಾಗ ಅವನ್ನು ಬೆಚ್ಚಗೆ ಇರಿಸುವುದು ಅವುಗಳ ಗರಿಗಳು. ಈ ಹಕ್ಕಿಗಳ ಮರಿಗಳ ಮೈಯಲ್ಲಿ ಗರಿಗಳು ಕಡಿಮೆ. ಹಾಗಾಗಿ ಅವು ಜಲಸಸ್ಯಗಳು ಮತ್ತು ನೀರಿನಲ್ಲಿರುವ ಪೊದೆಗಳಲ್ಲಿ ಆಶ್ರಯ ಪಡೆಯುತ್ತವೆ.  ಮಳೆ ಸುರಿಯುತ್ತಿರುವಾಗ ಬೆಚ್ಚಗಿರಲು, ಆಹಾರ ಹುಡುಕಿಕೊಳ್ಳಲು ಮತ್ತು ಮಳೆಯಿಂದ ರಕ್ಷಣೆ ಪಡೆಯಲು ಎಲ್ಲ ಪಕ್ಷಿಗಳೂ ಕಲಿತುಕೊಳ್ಳುತ್ತವೆ ಯಾಕೆಂದರೆ ಅದು ಅವುಗಳ ಅಳಿವು-ಉಳಿವಿನ ಪ್ರಶ್ನೆ. ಮಳೆ ನಿಂತಾಗ, ಹಕ್ಕಿಗಳೆಲ್ಲ ರೆಕ್ಕೆಗಳನ್ನು ಬಿಡಿಸಿ, ಒಣಗಿಸಿಕೊಂಡು ಪುನಃ ನೀಲ ಆಕಾಶದಲ್ಲಿ ಸ್ವಚ್ಛಂದವಾಗಿ ಹಾರುತ್ತವೆ. ಫೋಟೋಗಳು: (1) ಮರದ ಎಲೆಗಳ “ಕೊಡೆ”ಯ ಆಶ್ರಯದಲ್ಲಿ ನೀಲಿ ಟಿಟ್ ಹಕ್ಕಿ 
(2) ನೇತಾಡುವ ಗೂಡಿನ ಆಶ್ರಯದಲ್ಲಿ ಬಾಯಾ ವೀವರ್ ಪಕ್ಷಿ 
(3) ಮರದ ಪೊಟರೆಯಲ್ಲಿ ಎರಡು ಮ್ಯಾಕಾ ಹಕ್ಕಿಗಳು
ಕೃಪೆ: ಆರ್. ಎಸ್. ಸ್ಪ್ರಿಂಗ್ ಪತ್ರಿಕೆ