ಅಕ್ಟೋಬರ್ 1 ಅಂತರಾಷ್ಟ್ರೀಯ ಕಾಫಿ ದಿನ. ಬೆಳಗಿನ ಘಮ ಘಮ ಪರಿಮಳದ ಬಿಸಿ ಬಿಸಿ ಟೀ ಅಥವಾ ಕಾಫಿಯೊಂದಿಗೆ ದಿನ ಪ್ರಾರಂಭಿಸುವುದು ಬಹಳಷ್ಟು ಜನರ ದಿನಚರಿ. ಅದರಲ್ಲೂ ದಕ್ಷಿಣ ಭಾರತದ ಕನ್ನಡ ನಾಡಿನ ಬಹುತೇಕರು ಕಾಫಿ ಪ್ರಿಯರು. ಕಾಫಿ ಇಲ್ಲದೆ ಹಾಸಿಗೆಯಿಂದ ಏಳದ ಎಷ್ಟೋ ಜನರಿದ್ದಾರೆ. " ಕಾಫಿ " ಎಂಬ ವಿಷಯವನ್ನು ಇಟ್ಟುಕೊಂಡು ಬರೆದ ಎಷ್ಟೋ ಲಲಿತ ಪ್ರಬಂಧಗಳು ನಗುವಿನ ಅಲೆಯನ್ನೇ ಉಕ್ಕಿಸುತ್ತದೆ. ಆತಿಥ್ಯದ ಆಪ್ತಮಿತ್ರ ಕಾಫಿ. ಬಾಂಧವ್ಯದ ಬೆಸುಗೆ ಕಾಫಿ, ಸ್ನೇಹ, ಪ್ರೀತಿ ಪ್ರೇಮದ ಕೊಂಡಿ ಕಾಫಿ, ವ್ಯವಹಾರದ ಸೇತುವೆ ಕಾಫಿ, ಮನೋಲ್ಲಾಸದ ಔಷಧಿ ಕಾಫಿ, ಬೇಸರ ಕಳೆಯುವ ಸಾಧನ ಕಾಫಿ, ಕಾಲ ಹರಟೆಯ ಖುಷಿ ಕಾಫಿ. ಹೀಗೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಜೊತೆಗಾರ ಕಾಫಿ. ಯಾರಾದರೂ ಪ್ರಬಂಧ ಬರೆಯುವ ಕಲೆಯನ್ನು ಮೈಗೂಡಿಸಿಕೊಳ್ಳುವ ಆಸಕ್ತಿ ಇದ್ದರೆ ಕಾಫಿ ಎಂಬುದು ಹೇಗೆ ನಮ್ಮೆಲ್ಲರ ಬದುಕಿನ ಭಾಗ ಎಂಬ ವಿಷಯದ ಬಗ್ಗೆ ಬರೆಯುತ್ತಾ ಸುಲಭವಾಗಿ ಅಭ್ಯಾಸ ಮಾಡಬಹುದು. ಕಾಫಿ ಎಂದಾಗ ಕರ್ನಾಟಕದ ಕಾಫಿಗೆ, ಇತ್ತೀಚಿನ ಜಾಗತೀಕರಣದ ಆಧುನಿಕ ದಿನಮಾನಗಳಲ್ಲಿ  ಅಂತರರಾಷ್ಟ್ರೀಯ ಪ್ರಚಾರ ಮತ್ತು ಪ್ರಖ್ಯಾತಿ ನೀಡಿದ್ದು ಕಾಫಿ ಡೇ ಸಿದ್ದಾರ್ಥ. ಕರ್ನಾಟಕದ ಕಾಫಿ ಹಿಂದಿನಿಂದಲೂ ದೇಶ ವಿದೇಶಗಳಲ್ಲಿ ರಫ್ತಾಗುತ್ತಿತ್ತು. ಅದನ್ನು ಇನ್ನೂ ಹೆಚ್ಚು ಮಾಡಿದ್ದಲ್ಲದೆ ಅಂತರರಾಷ್ಟ್ರೀಯ ಕಾಫಿಯನ್ನು ಅಂದರೆ ಬ್ರೆಜಿಲ್ ಕಾಫಿ, ಆಫ್ರಿಕಾದ ಕಾಫಿ ಇತ್ಯಾದಿಗಳನ್ನು ಕಾಫಿ ಡೇ ಮುಖಾಂತರ ಕರ್ನಾಟಕದ ಜನಸಾಮಾನ್ಯರಿಗೆ ಪರಿಚಯಿಸಿದ್ದು ಸಿದ್ದಾರ್ಥ. " A lot can happen over coffee " ಎಂಬ ಅಡಿ ಬರಹದೊಂದಿಗೆ ಅದನ್ನು ಪ್ರಖ್ಯಾತ ಮಾಡಿ ಕಾಫಿ ಪ್ರಿಯರ ಬದುಕಿನ ಸ್ಪೂರ್ತಿಯಾಗಿದ್ದ ಸಿದ್ದಾರ್ಥ ಬದುಕನ್ನು ಮಧ್ಯದಲ್ಲೇ ನಿಲ್ಲಿಸಿದ್ದು  ದುರಂತ.  *** ಎಷ್ಟೇ ಸಾಲ ಆಗಲಿ, ಎಷ್ಟೇ ಅವಮಾನ ಆಗಲಿ, ಯಾವೊನೇ ಕೈಕೊಡಲಿ, ಯಾವೊಳೇ ಕೈಬಿಡಲಿ, ಎಷ್ಟೇ ಸೋಲಾಗಲಿ ಯಾರು ಏನೇ ಅಂದುಕೊಳ್ಳಲಿ, ಹೊಟ್ಟೆ ತುಂಬ ಊಟ ಮಾಡಿ,  ಕಣ್ಣು ತುಂಬ ನಿದ್ದೆ ಮಾಡಿ,  ಒಂದು ಕಾಫಿ ಕುಡಿದು, ಸಿನಿಮಾಗೆ ಹೋಗಿ ಬಿಡಿ. ಆತ್ಮಹತ್ಯೆ ಗೀತ್ಮಹತ್ಯೆ ಎಲ್ಲಾ ಹೇಡಿಗಳ ಸರಕು. ಸಾವು ಅಂದರೆ ತುಂಬಾ ಹೆದರಿಕೆ.  ಅದಕ್ಕೆ ಅದನ್ನು ಹುಡುಕಿಕೊಂಡು ಹೋಗಬೇಡಿ ಬದುಕು ಮುಖ್ಯ. -ವಿವೇಕಾನಂದ. ಎಚ್. ಕೆ., ಬೆಂಗಳೂರು ಚಿತ್ರ ಕೃಪೆ: ಇಂಟರ್ನೆಟ್ ತಾಣ