ಸಪ್ಟಂಬರ್ 30, 2025ರಂದು ರಾಜಧಾನಿ ಎಕ್ಸ್-ಪ್ರೆಸ್ ಮುಂಬಯಿಯ ಕೊನೆಯ ರೈಲು ನಿಲ್ದಾಣಕ್ಕೆ ಬಂದು ನಿಂತಾಗ ಅಲ್ಲಿ ಭಾರೀ ಸಂಭ್ರಮ. ಹಲವಾರು ರೈಲ್ವೇ ಉದ್ಯೋಗಿಗಳೂ ಅಧಿಕಾರಿಗಳೂ ಅಲ್ಲಿ ನೆರೆದಿದ್ದರು. ಯಾಕೆಂದರೆ, ಆ ರೈಲನ್ನು ಅಲ್ಲಿಗೆ ಚಲಾಯಿಸಿಕೊಂಡು ಬಂದ ಸುರೇಖಾ ಯಾದವ್, 36 ವರುಷಗಳ ಸೇವೆಯ ನಂತರ ಆ ದಿನ ನಿವೃತ್ತರಾಗಲಿದ್ದರು.
ಇದರಲ್ಲೇನು ವಿಶೇಷ? ಪ್ರತಿ ದಿನವೂ ಸಾವಿರಾರು ಉದ್ಯೋಗಿಗಳು ತಮ್ಮ ಸೇವೆಯಿಂದ ನಿವೃತ್ತರಾಗುತ್ತಾರೆ ಎನ್ನುತ್ತೀರಾ? ಸುರೇಖಾ ಯಾದವ್ ಭಾರತದ ಮಾತ್ರವಲ್ಲ, ಏಷ್ಯಾ ಖಂಡದ ಪ್ರಪ್ರಥಮ ಮಹಿಳಾ ರೈಲು ಡ್ರೈವರ್ ಎಂಬುದೇ ವಿಶೇಷ.
ಸುರೇಖಾ ಸಹಾಯಕ ರೈಲು ಡ್ರೈವರ್ ಆಗಿ ಕೆಲಸಕ್ಕೆ ಸೇರಿದ್ದು 1989ರಲ್ಲಿ. ಲಕ್ಷಗಟ್ಟಲೆ ಉದ್ಯೋಗಿಗಳಿರುವ ಭಾರತೀಯ ರೈಲ್ವೇಯಲ್ಲಿ ಆಗ ಮಹಿಳಾ ರೈಲು ಡ್ರೈವರ್ ಒಬ್ಬರೂ ಇರಲಿಲ್ಲ ಎಂದರೆ ನಂಬುತ್ತೀರಾ? ಈಗ ಭಾರತೀಯ ರೈಲ್ವೇಯಲ್ಲಿ 2,000ಕ್ಕಿಂತ ಜಾಸ್ತಿ ಮಹಿಳಾ ರೈಲು ಚಾಲಕರು ಇದ್ದಾರೆ. ಆದರೆ, ಆಗಿನ ಪರಿಸ್ಥಿತಿಯನ್ನು ಈಗ ಕಲ್ಪಿಸಲಿಕ್ಕೂ ಸಾಧ್ಯವಿಲ್ಲ.
ತಾನು ಕೆಲಸದ ತರಬೇತಿಗಾಗಿ ಸೇರಿದ ಮೊದಲ ದಿನವನ್ನು ನೆನಪು ಮಾಡಿಕೊಳ್ಳುತ್ತಾ ಸುರೇಖಾ ಯಾದವ್ ಹೇಳುತ್ತಾರೆ, “(ಅಲ್ಲಿ ಬೇರೆ ಯಾರೊಬ್ಬರೂ ಮಹಿಳೆ ಇಲ್ಲದ್ದನ್ನು ಕಂಡು) ನನಗೆ ಏನು ಮಾಡುವುದೆಂದೇ ಗೊತ್ತಾಗಲಿಲ್ಲ. ಆಗ ನಾನು ಹೀಗೆ ಯೋಚಿಸಿದೆ: ನಾನು ಈ ಕೆಲಸಕ್ಕೆ ಸೇರಿಕೊಳ್ಳದಿದ್ದರೆ ಬೇರೆ ಯಾರಾದರೂ ಸೇರಿಕೊಳ್ಳುತ್ತಾರೆ. ಹೇಗೂ ನಾನು ಈ ಕೆಲಸಕ್ಕೆ ಆಯ್ಕೆ ಆಗಿದ್ದೇನೆ, ಈ ಕೆಲಸವನ್ನೇ ಮಾಡುತ್ತೇನೆ.”
ಆ ದಿನ ಬದುಕಿನ ದೊಡ್ಡ ನಿರ್ಧಾರ ಕೈಗೊಂಡ ಸುರೇಖಾ ಯಾದವ್ ಅನಂತರ ತನ್ನ ವೃತ್ತಿಯನ್ನು ಸವಾಲಾಗಿ ಸ್ವೀಕರಿಸಿ, ಸಾವಿರಾರು ಮಹಿಳೆಯರಿಗೆ ಇಂತಹ ಸವಾಲುಗಳನ್ನು ಎದುರಿಸಲು ಪ್ರೇರಣೆಯಾದರು.
1965ರಲ್ಲಿ ಪಶ್ಚಿಮ ಮಹಾರಾಷ್ಟ್ರದ ಸಣ್ಣ ಪಟ್ಟಣದ ರೈತ ಕುಟುಂಬದಲ್ಲಿ ಜನಿಸಿದ ಸುರೇಖಾ ಯಾದವ್ ತನ್ನ ಹೆತ್ತವರ ಐವರು ಮಕ್ಕಳಲ್ಲಿ ಹಿರಿಯಾಕೆ. ಬಾಲ್ಯದಿಂದಲೇ ಕಷ್ಟದ ಕೆಲಸಗಳನ್ನು ಮಾಡುತ್ತಾ ಬೆಳೆದಾಕೆ. ಹೊಲದ ಕೆಲಸಗಳಲ್ಲಿ ತಂದೆ, ತಾಯಿಗೆ ಸಹಾಯ ಮಾಡುತ್ತಾ ಶಾಲೆಗೂ ಹೋಗುತ್ತಾ ಶಿಕ್ಷಣ ಪಡೆದರು. ಅವರ ಹೆತ್ತವರು ಸಿರಿವಂತರಲ್ಲದಿದ್ದರೂ ಪ್ರಗತಿಪರ ಮನೋಭಾವದವರು. “ನನಗೆ ಶಿಕ್ಷಣ ನೀಡಿದರು ಮಾತ್ರವಲ್ಲ, ಕೆಲಸಕ್ಕೆ ಸೇರಲಿಕ್ಕೂ ಸೈ ಎಂದರು” ಎಂದು ನೆನೆಯುತ್ತಾರೆ ಸುರೇಖಾ ಯಾದವ್.
ಇಲೆಕ್ಟ್ರಿಕಲ್ ಇಂಜಿನಿಯರ್ ಪದವಿ ಗಳಿಸಿದ ಸುರೇಖಾ ಉದ್ಯೋಗದ ಹುಡುಕಾಟಕ್ಕೆ ಶುರುವಿಟ್ಟರು. ಆಗ ಪತ್ರಿಕೆಯಲ್ಲಿದ್ದ ಭಾರತೀಯ ರೈಲ್ವೇಯ ಒಂದು ಜಾಹೀರಾತು ಅವರ ಗಮನ ಸೆಳೆಯಿತು. ಅದು ಸಹಾಯಕ ರೈಲು ಡ್ರೈವರ್ ಉದ್ಯೋಗದ ಜಾಹೀರಾತು. ತಕ್ಷಣವೇ ಸುರೇಖಾ ಯಾದವ್ ಅದಕ್ಕೆ ಅರ್ಜಿ ಸಲ್ಲಿಸಿದರು.
ಆಗಿನ ದಿನಗಳಲ್ಲಿ ಸರಕಾರಿ ಕೆಲಸಗಳಿಗೆ ಬಹು ಬೇಡಿಕೆ: ಆ ಕೆಲಸಗಳ ಭದ್ರತೆ ಮತ್ತು ಅಲ್ಲಿ ಸಿಗುವ ಸವಲತ್ತುಗಳಿಂದಾಗಿ. ಆ ಕೆಲಸಕ್ಕೆ ಆಯ್ಕೆಯಾದ ಸುರೇಖಾ ಯಾದವ್, ತರಬೇತಿಯ ನಂತರ 1989ರಲ್ಲಿ ಮೊದಲ ಜವಾಬ್ದಾರಿ ನಿರ್ವಹಿಸಿದ್ದು ಗೂಡ್ಸ್ ರೈಲಿನ ಚಾಲಕಿಯಾಗಿ. ಆ ಉದ್ಯೋಗದ್ದು ಪುರುಷರೇ ತುಂಬಿದ ಪ್ರಪಂಚ ಎಂದು ಅವರಿಗೆ ಆಗಲೇ ಅರಿವಾಗಿತ್ತು. ಆದರೆ ಅವರು ಕಿಂಚಿತ್ತೂ ಅಳುಕದೆ ಎದೆಗಾರಿಕೆಯಿಂದ ತನ್ನ ಜವಾಬ್ದಾರಿಗಳನ್ನು ನಿರ್ವಹಿಸಿದರು.
ಕೆಲಸ ಮಾಡುತ್ತಲೇ ಬಹಳಷ್ಟು ಸಂಗತಿಗಳನ್ನು ಸುರೇಖಾ ಯಾದವ್ ಕಲಿತರು. ಯಾಕೆಂದರೆ ಒಳ್ಳೆಯ ರೈಲು ಡ್ರೈವರ್ ಆಗುವುದು ಹೇಗೆಂದು ಕಲಿಸುವ ಯಾವುದೇ ಪುಸ್ತಕವಿಲ್ಲ ಎನ್ನುತ್ತಾರೆ ಅವರು.
ರೈಲು ಡ್ರೈವರುಗಳು ಬಹು ವಿಧದ ಮೇಲುಸ್ತುವಾರಿ ವ್ಯವಸ್ಥೆಗಳನ್ನು ಉಪಯೋಗಿಸುತ್ತಾರೆ - ರೈಲು ಸಾಗಬೇಕಾದ ದಾರಿ (ರೂಟ್), ರೈಲಿನ ವೇಗ ಇತ್ಯಾದಿ ಪ್ರಯಾಣದ ವಿಭಿನ್ನ ಅಂಶಗಳ ನಿಯಂತ್ರಣಕ್ಕಾಗಿ.
ಭಾರತೀಯ ರೈಲ್ವೆ ಏಷ್ಯಾ ಖಂಡದ ಅತಿ ದೊಡ್ಡ ರೈಲ್ವೇ ಜಾಲ. ಇದಕ್ಕೆ ಜಗತ್ತಿನಲ್ಲಿ ಐದನೇ ಸ್ಥಾನ. ಇದರ ಉದ್ಯೋಗಿಗಳ ಸಂಖ್ಯೆಯೂ ಅಗಾಧ: 10 ಲಕ್ಷಗಳಿಗಿಂತ ಅಧಿಕ. (ಇದು ಜಗತ್ತಿನ ಎಂಟನೆಯ ಅತಿ ದೊಡ್ಡ ಉದ್ಯೋಗದಾತ). ಪ್ರತಿ ದಿನವೂ ಸುಮಾರು 25 ದಶಲಕ್ಷ ಪ್ರಯಾಣಿಕರನ್ನು 7,500 ವಿವಿಧ ರೈಲ್ವೇ ನಿಲ್ದಾಣಗಳಿಗೆ ತಲಪಿಸುವ ಮತ್ತು ದಿನದಿನವೂ ಸುಮಾರು 14,500 ರೈಲುಗಳನ್ನು ಓಡಿಸುವ ದೈತ್ಯ ವ್ಯವಸ್ಥೆ. ಈ ರೈಲುಗಳು ಕ್ರಮಿಸುವ ದೂರ ಭೂಮಿಯಿಂದ ಚಂದ್ರನಿಗಿರುವ ದೂರದ ಮೂರುವರೆ ಪಟ್ಟು ಜಾಸ್ತಿ! ಆದ್ದರಿಂದಲೇ ಇದನ್ನು ಭಾರತದ ಸಾರಿಗೆ ವ್ಯವಸ್ಥೆಯ “ಜೀವಜಾಲ” ಎನ್ನಲಾಗುತ್ತದೆ.
ಇಂತಹ ಬೃಹತ್ ಸಾರಿಗೆ ಜಾಲದಲ್ಲಿ ಸುಳಿವುಗಳನ್ನು ಅರ್ಥ ಮಾಡಿಕೊಳ್ಳುವುದನ್ನು, ಸಮಸ್ಯೆಗಳನ್ನು ನಿರೀಕ್ಷಿಸುವುದನ್ನು ಮತ್ತು ಅನಿರೀಕ್ಷಿತ ಬೆಳವಣಿಗೆಗಳಿಗೆ ತಕ್ಷಣವೇ ಪ್ರತಿಕ್ರಿಯಿಸುವುದನ್ನು ಕೆಲಸ ಮಾಡುತ್ತಲೇ ತಾನು ಕಲಿತೆ ಎನ್ನುತ್ತಾರೆ ಸುರೇಖಾ ಯಾದವ್.
1996ರಲ್ಲಿ ಸುರೇಖಾ ಯಾದವ್ ಅವರಿಗೆ ಲೋಕೋಮೋಟಿವ್ ಪೈಲೆಟ್ ಹುದ್ದೆಗೆ ಬಡ್ತಿ ನೀಡಲಾಯಿತು - ಅದು ರೈಲಿನ ಕಂಟ್ರೋಲ್ ರೂಮಿನ ಪ್ರಧಾನ ಆಪರೇಟರ್ ಹುದ್ದೆ. ಪ್ರಯಾಣದಲ್ಲಿ ನಿರೀಕ್ಷಿಸದಿದ್ದ ವಿಳಂಬ ಮತ್ತು ಅಪಘಾತಗಳಿಂದಾಗಿ ಅನಿಶ್ಚಿತವಾದ ಕೆಲಸದ ಅವಧಿ - ಇದು ತನ್ನ ಉದ್ಯೋಗದ ದೊಡ್ಡ ಸವಾಲುಗಳಲ್ಲಿ ಒಂದಾಗಿತ್ತು ಎನ್ನುತ್ತಾರೆ ಅವರು. ಬೆಟ್ಟಗಳಲ್ಲಿ, ನೆರೆ ನೀರು ನಿಂತಿದ್ದ ರೈಲ್ವೇ ಹಳಿಗಳಲ್ಲಿ ಹಾಗೂ ಹಲವಾರು ದಿನಗಳಲ್ಲಿ ನಿರಂತರವಾಗಿ ರೈಲು ಚಲಾಯಿಸಿದ್ದನ್ನು ಸುರೇಖಾ ಹೆಮ್ಮೆಯಿಂದ ನೆನೆಯುತ್ತಾರೆ.
ಎರಡು ಸಲ ಬಸುರಿ ಆದಾಗಲೂ ತನ್ನ ಕರ್ತವ್ಯ ನಿರ್ವಹಿಸಿದ್ದನ್ನು, ಕೆಲಸ ಮಾಡುತ್ತಲೇ ಎರಡು ಮಕ್ಕಳನ್ನು ಬೆಳೆಸಿದ್ದನ್ನು ನೆನಪು ಮಾಡಿಕೊಳ್ಳುತ್ತಾರೆ ಸುರೇಖಾ ಯಾದವ್. ಕರ್ತವ್ಯ ನಿರ್ವಹಿಸುವಾಗ ಕೆಲಸದ ಒತ್ತಡದಿಂದಾಗಿ ಮಕ್ಕಳ ನೆನಪು ಮಾಡಿಕೊಳ್ಳಲೂ ಸಾಧ್ಯವಾಗುತ್ತಿರಲಿಲ್ಲ ಎನ್ನುತ್ತಾರೆ ಅವರು. “ಯಾವಾಗಲೂ ಸಿಗ್ನಲುಗಳನ್ನು ರೈಲ್ವೇ ಟ್ರಾಕನ್ನು ನಿಯಂತ್ರಣದ ಉಪಕರಣಗಳನ್ನು ಕಣ್ಣಿಟ್ಟು ನೋಡಬೇಕು, ಸಹೋದ್ಯೋಗಿಯ ಮಾತುಗಳನ್ನು ಕೇಳಬೇಕು, ರೈಲಿನ ವೇಗದ ಮೇಲೆ ಕಣ್ಣಿಡಬೇಕು. 30 ಸೆಕೆಂಡುಗಳ ಹೊತ್ತು ಬಿಟ್ಟು ಬಿಡಿ, ಒಂದು ಮೈಕ್ರೋ ಸೆಕೆಂಡು ಹೊತ್ತು ನಿಮ್ಮ ಮನಸ್ಸು ಚಂಚಲವಾದರೆ, ಅದು ರೈಲಿನಲ್ಲಿರುವ ಪ್ರತಿಯೊಬ್ಬರಿಗೂ ಅಪಾಯಕಾರಿ ಆದೀತು. ಹಾಗಿರುವಾಗ ನನ್ನ ಮಕ್ಕಳನ್ನು ನೆನಪು ಮಾಡಿಕೊಳ್ಳಲು ಹೇಗೆ ಸಾಧ್ಯ?” ಎಂದು ಪ್ರಶ್ನಿಸುತ್ತಾರೆ ಸುರೇಖಾ. ತನ್ನ ಉದ್ಯೋಗದಿಂದಾಗಿ ಕುಟುಂಬದ ಹಲವು ಸಮಾರಂಭಗಳಿಗೆ ಹಾಜರಾಗಲು ಸಾಧ್ಯವಾಗಲಿಲ್ಲ ಎನ್ನುತ್ತಾರೆ.
ಭಾರತದ ಉದ್ದಗಲದಲ್ಲಿ ಹತ್ತುಹಲವು ರೈಲುಗಳನ್ನು ಚಲಾಯಿಸಿದ ಅನುಭವ ಸುರೇಖಾ ಯಾದವ್ ಅವರದು. ಭಾರತದ ಅತ್ಯಾಧುನಿಕ ವಂದೇ ಭಾರತ್ ಎಕ್ಸ್-ಪ್ರೆಸ್ ರೈಲನ್ನೂ ಚಲಾಯಿಸಿದ ಅಪರೂಪದ ಹಿರಿಯ ಲೋಕೋ-ಪೈಲೆಟ್ ಅವರು.
ನಿವೃತ್ತಿಯ ದಿನ ರಾಜಧಾನಿ ಎಕ್ಸ್-ಪ್ರೆಸ್ ರೈಲಿನಿಂದ ಇಳಿಯುತ್ತಿದ್ದಂತೆ, ತನ್ನ ಸಹೋದ್ಯೋಗಿಗಳು ಏರ್ಪಡಿಸಿದ್ದ ವಿದಾಯ ಸಮಾರಂಭದಲ್ಲಿ ಡ್ರಮ್ ಬಾರಿಸುವುದನ್ನು, ನರ್ತಿಸುವುದನ್ನು ಕಾಣುತ್ತಾ ಭಾವುಕರಾದರು ಸುರೇಖಾ ಯಾದವ್. ಅವರು ತನ್ನ 36 ವರುಷಗಳ ವೃತ್ತಿ ಜೀವನದಲ್ಲಿ, ಮಹಿಳೆಯರ ಸಹಿತ ಹಲವಾರು ರೈಲು ಡ್ರೈವರುಗಳಿಗೆ ದಾರಿ ತೋರಿದವರು. ತನ್ನ ಕೊನೆಯ ಕರ್ತವ್ಯದ ಯಾನವನ್ನು ಮುಗಿಸುತ್ತಾ ಪುರುಷ ಸಹೋದ್ಯೋಗಿಗಳಿಗೆ ಮನದುಂಬಿದ ಕೃತಜ್ಞತೆ ಹೇಳಿದರು ಸುರೇಖಾ ಯಾದವ್, “ನಾನು ಮಹಿಳೆ ಆದ್ದರಿಂದ ನಾನು ಭಿನ್ನ ಎಂಬ ಭಾವನೆ ನನ್ನಲ್ಲಿ ಮೂಡಲು ಅವರು ಯಾವತ್ತೂ ಅವಕಾಶ ನೀಡಲಿಲ್ಲ.”
ಪ್ರಪ್ರಥಮ ಮಹಿಳಾ ಲೋಕೋಪೈಲೆಟ್ ಸುರೇಖಾ ಯಾದವ್
ಅಡ್ಡೂರು ಕೃಷ್ಣ ರಾವ್
ಅಕ್ಟೋಬರ್ ೦೭, ೨೦೨೫
೯ ವೀಕ್ಷಣೆಗಳು
ಪ್ರಕಟಿಸಿದ: ಅಕ್ಟೋಬರ್ ೦೭, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬