ಸ್ಟೇಟಸ್ ಕತೆಗಳು (ಭಾಗ ೧೪೭೪) - ಬೇಕಿತ್ತಾ?
ಬರಹಗಾರರ ಬಳಗ
ಅಕ್ಟೋಬರ್ ೧೬, ೨೦೨೫
೧೦ ವೀಕ್ಷಣೆಗಳು
ಮನೆಯನ್ನು ನೆಲದಿಂದ ಮೇಲೆದ್ದು ನಿಲ್ಲಿಸಲೇಬೇಕಿತ್ತು. ಸಂಬಂಧಿಕರು ಊರವರು ತುಂಬಾ ಮಾತನಾಡಿಕೊಂಡಿದ್ದರು. ಇವನಿಂದ ಆಗೋದಿಲ್ಲ ಇವನು ಪ್ರಯೋಜನಕ್ಕಿಲ್ಲ ಹೀಗೆ ಮಾತುಗಳನ್ನ ಕೇಳಿ ಕೇಳಿ ಬದಲಾಗಬೇಕು ಅನ್ನಿಸಿತು. ಎಷ್ಟು ದಿನ ಅಂತ ಬಾಡಿಗೆ ಮನೆಯೊಳಗೆ ಗೋಡೆಗಳನ್ನು ನೋಡುತ್ತಾ ದಿನ ದೂಡುವುದು ನನ್ನದೇ ಸ್ವಂತವಾದ ನೆಲದ ಮೇಲೆ ಗೂಡೊಂದನ್ನ ಕಟ್ಟಿಕೊಳ್ಳುವ ಆಸೆ. ಆಸೆಯ ಪರಿಧಿ ಸಣ್ಣದಲ್ಲ ದೊಡ್ಡ ಆಸೆಗೋಸ್ಕರ ಒಂದು ಹಂತದ ಸಾಲ ಕೈ ಹಿಡಿಯಿತು. ಊರವರ ಮುಂದೆ ತೋರಿಸಿಕೊಳ್ಳುವ ಹಮ್ಮಿನಲ್ಲಿ ಮನೆ ನಿಂತಿದ್ದ ನೆಲದ ಕಾಗದಪತ್ರ ಬ್ಯಾಂಕಿನೊಳಗೆ ಭದ್ರವಾಯಿತು. ಹೆಚ್ಚು ದುಡ್ಡು ಮನೆ ಒಳಗೆ ಸುರಿದು ಎರಡು ಅಂತಸ್ತಿನ ದೊಡ್ಡ ಮನೆಯನ್ನ ಇರುವ ಇಬ್ಬರಿಗಾಗಿ ಕಟ್ಟಲಾಯಿತು. ಬಂದವರೆಲ್ಲರೂ ಆಶ್ಚರ್ಯಪಟ್ಟರು ಊರಲ್ಲೆಲ್ಲ ಅವನ ಮನೆಯದೇ ಮಾತು ಬಂದವರಿಗೆ ಹೊಟ್ಟೆ ತುಂಬ ಊಟ ಎಲ್ಲರೂ ಅವರವರ ಮನೆಗೆ ತೆರಳಿ ನೆಮ್ಮದಿಯ ನಿದ್ದೆ ಮಾಡಿದರು. ಆದರೆ ನಿಂತಿರುವ ಮನೆಯಲ್ಲಿ ಮುಂದಿನ ತಿಂಗಳು ಸಾಲದ ಕಂತು ಕಟ್ಟುವುದಕ್ಕೆ ಯೋಚಿಸುತ್ತಿದ್ದಾನೆ ಆತ. ಬಾಡಿಗೆ ಮನೆಯೊಳಗೆ ಬರುತ್ತಿದ್ದ ನಿದ್ದೆ ಮಾಯವಾಗಿ ತಲೆದಿಂಬನ್ನ ಹಾಗೆ ಒತ್ತಿಕೊಂಡು ಕಣ್ಣುಮುಚ್ಚಲು ಪ್ರಯತ್ನ ಪಡುತ್ತಿದ್ದಾನೆ. ಪ್ರಶ್ನೆ ಒಂದನ್ನ ಮನದೊಳಗೆ ಕೇಳುತ್ತಿದ್ದಾನೆ ಬೇಕಿತ್ತಾ...?
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಅಕ್ಟೋಬರ್ ೧೬, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬