ದೀಪಾವಳಿ ಎಂದರೆ ದೀಪಗಳ ಹಬ್ಬದ ಸಂಭ್ರಮ. ಬರಿಯ ಉಂಡುಟ್ಟು ಮೆರೆಯುವುದು ಮಾತ್ರವಲ್ಲ. ಅಜ್ಞಾನದ ತಮವನ್ನು ಹೋಗಲಾಡಿಸಿ ಬೆಳಕಿನ ಪ್ರಭೆಯನ್ನು ಹರಡುವುದು, ಪಸರಿಸುವುದು. ನಮ್ಮ ಶರೀರದ ಅರಿಷಡ್ವರ್ಗಗಳೆಂಬ ವೈರಿಗಳನ್ನು ಓಡಿಸಿ, ಅಲ್ಲಿ ಉತ್ತಮ ಗುಣಗಳನ್ನು ಅಳವಡಿಸಿಕೊಳ್ಳುವುದು ಎಂದರ್ಥ. ನರಕಾಸುರನೆಂಬ ರಕ್ಕಸನ ಉಪಟಳ, ಖಳನನ್ನು ಸದೆಬಡಿದು, ಮೋಕ್ಷ ಕರುಣಿಸಿ, ಲೋಕಕ್ಕೆ ಕ್ಷೇಮ ನೀಡಿದ ನೆನಪಿನ ಹಬ್ಬ. ರಾಕ್ಷಸನ ಕೇಳಿಕೆಯಂತೆ ಆತನ ಹಾಗೂ ಭಗವಂತನ ಸ್ಮರಣೆಗೊಂದು ದಿನ. ತಾಯಿ ಲಕ್ಷ್ಮೀ ದೇವಿ ಸಂಪತ್ತಿನೊಡತಿ, ಮಾತೆಯ ಆರಾಧನೆ.ಬಲಿ ಮಹಾರಾಜನ ಮಹತ್ವಾಕಾಂಕ್ಷೆಯನ್ನು ಅಡಗಿಸಲು ದೇವನು ಹೂಡಿದ ಕಪಟನಾಟಕ, ವಾಮನಾವತಾರದ ನೆನಹು. ನರಕ ಚತುರ್ದಶಿ, ಅಮಾವಾಸ್ಯೆ, ಬಲಿಪಾಡ್ಯ, ಅಂಗಡಿಪೂಜೆ(ಲಕ್ಷ್ಮೀಪೂಜೆ) ಇತ್ಯಾದಿಗಳ ಆಚರಣೆಯ ಸಡಗರ,ಸಂಭ್ರಮ. ಪಟಾಕಿಯನ್ನು ಸಿಡಿಸಿದರೆ ಪರಿಸರ ಹಾನಿಯೇನೋ ಹೌದು. ಆದರೆ ಹಿಂದಿನಿಂದಲೂ ಬಂದ ಪದ್ಧತಿಯನ್ನು ಬೇಡವೇ ಬೇಡವೆಂದು ತಳ್ಳಿ ಹಾಕುವುದು ಅಷ್ಟು ಸುಲಭದ ಮಾತಲ್ಲ. ಪುಟ್ಟ ಮಕ್ಕಳಿಂದ ಹಿಡಿದು ಮನೆಮಂದಿ, ಬೀದಿಯವರೆಲ್ಲ ಒಟ್ಟಾಗಿ ಪಟಾಕಿ ಸಿಡಿಸುವುದಿದೆ. ಇದರಲ್ಲಿ ಒಂದು ರೀತಿಯ ಆನಂದವನ್ನು ಹೊಂದುತ್ತಾರೆ. ಜಾಗ್ರತೆ ಮಾಡಿದರೆ ಅಪಾಯವಿಲ್ಲ. ಅಂಗಾಂಗಗಳಿಗೆ ಮುಖ್ಯವಾಗಿ ಕಣ್ಣುಗಳಿಗೆ ಹಾನಿಯಾಗದಂತೆ ಜಾಗ್ರತೆ ವಹಿಸಬೇಕು. ಪಟಾಕಿ ಸಿಡಿಸುವ ಮೊದಲೇ ಈ ಬಗ್ಗೆ ಜಾಗೃತಿ ಮೂಡಿಸಬೇಕು. ಪಟಾಕಿಯ ಸದ್ದಿನಲ್ಲಿ, ಮಿಂಚುವಿಕೆಯಲ್ಲಿ, ಬೆಳಕಿನ ಬಣ್ಣಗಳ ಚಿತ್ತಾರದಲ್ಲಿ ಮಜವೋ, ಆನಂದವೋ, ಸಂತೋಷವೋ ಸಿಗುತ್ತದೆ, ಆದರೆ ಅಷ್ಟೇ ಅಪಾಯವೂ ಇದೆಯೆಂಬುದು ತಿಳಿದಿರಬೇಕು. ಬೇಡವೇ ಬೇಡವೆಂದರೆ ಸಾವಿರಾರು ಕಾರ್ಮಿಕರು ಬೀದಿಗೆ ಬೀಳುವುದಿಲ್ಲವೇ? ಅದರಲ್ಲೇ ಜೀವನ ಕಟ್ಟಿಕೊಂಡವರಿದ್ದಾರೆ. ಪರಿಸರಕ್ಕೆ ಹಾನಿಯಾಗದಂತೆ ಸಾಕಷ್ಟು ಹಸಿರು ಗಿಡಗಳನ್ನು ನೆಡುವ, ಬೆಳೆಸುವ ಕೆಲಸವಾಗಬೇಕು. ವಾಯು ಮಾಲಿನ್ಯವನ್ನು ತಡೆಯಲು ಈ ಗಿಡಮರಗಳು ಸಹಕಾರಿ. ಬೆಳಕಿನ ಹಬ್ಬವೆಂದರೆ ಹಾಗೆಯೇ, ದೀಪದಿಂದ ದೀಪವನ್ನು ಉರಿಸುವುದು, ಹಚ್ಚುವುದು, ಬೆಳಗಿ ಬೆಳಗಿಸುವುದು. ಎಲ್ಲೆಡೆಯ ಅಂಧಕಾರ ಕಳೆಯಲಿ, ಬೆಳಕು ಪಸರಿಸಲಿ. ಮನೆ ಮನಗಳಲ್ಲಿ ಸಂತಸ ತುಂಬಿ ನಲಿದಾಡಲಿ, ಎಲ್ಲರಿಗೂ ಒಳ್ಳೆಯದಾಗಲಿ. -ರತ್ನಾ ಕೆ ಭಟ್ ತಲಂಜೇರಿ, ಪುತ್ತೂರು ಚಿತ್ರ ಕೃಪೆ: ಇಂಟರ್ನೆಟ್ ತಾಣ