ಗುರಿ ಮಾಮರದ ತುದಿಯಲ್ಲಿ ಮಾಗಿರುವ ಹಣ್ಣು ಪರಿಮಳವ ಸೂಸುತ್ತ ಸೆಳೆಯುತಿದೆ ಕಣ್ಣು !   ವಾಸನೆಯ ಆಧರಿಸಿ ಇರುವೆಗಳ ಸಾಲು ಏರುತಿದೆ ಮರವನ್ನು  ಪಡೆಯಲಿಕೆ ಪಾಲು !   ಮರವನೇರಲು ಹೆಚ್ಚು  ಸಮಯ ಬೇಕದಕೆ ಗುರಿಯ ಮುಟ್ಟುವ ಮೊದಲೆ ಹಣ್ಣುದುರೆ ಕೆಳಕೆ !   ವಿಫಲವಾಗುವುದಲ್ಲಿ ಇರುವೆಗಳ ಹಿಂಡು ಸಫಲತೆಯ ಸಾಧಿಸಲು ಸೋಲುಂಡ ದಂಡು !   ಶುಕವೊಂದು ಹಣ್ಣುಗಳ ಕಡೆ ಹರಿಸಿ ದೃಷ್ಟಿ ಗುರಿಯೆಡೆಗೆ ದಾಳಿಯನು ಮಾದುವುದು ಕುಟ್ಟಿ !   ಇರುವೆ - ಶುಕಗಳ ಬಯಕೆ ಗುರಿ ಕೂಡ ಒಂದೆ ದಾರಿ ಮಾತ್ರವೆ ಬೇರೆ ಸಫಲತೆಯ ಹಿಂದೆ !   ಬಳಸುದಾರಿಗೆ ಇರುವೆ ಗಳ ಶ್ರಮವು ವ್ಯರ್ಥ ಗೊಳಿಸಿದರೆ ಶುಕ ಶೀಘ್ರ ಸಾಧನೆಗೆ ಕರ್ತ:   ಸಂಕಲ್ಪ ಸಾಧನೆಗೆ  ಇಹುದೆರಡು ದಾರಿ ಒಂದು ಶುಕ, ಒಂದಿರುವೆ ತುಳಿದಂಥ ದಾರಿ ! ** (ಈ ಕವನದೊಂದಿಗೆ ಕೆ ಪಿ ಭಟ್ಟರ ‘ಈ ಮರದ ನೆರಳಿನಲಿ’ ಕವನ ಸಂಕಲನದ ಕವಿತೆಗಳು ಮುಗಿದವು.)