ಕನ್ನಡ ನಾಡಿನ ಪಕ್ಷಪಾತಿ
ಶ್ರೀರಾಮ ದಿವಾಣ
ಅಕ್ಟೋಬರ್ ೩೦, ೨೦೨೫
೧೬ ವೀಕ್ಷಣೆಗಳು
ಕನ್ನಡ ಎನೆ ಕುಣಿದಾಡುವುದೆನ್ನೆದೆ, ಕನ್ನಡ ಎನೆ ಕಿವಿ ನಿಮಿರುವುದು… ಭಾರತದ ಎಲ್ಲಾ ರಾಜ್ಯಗಳಲ್ಲಿ ಕರ್ನಾಟಕದ ಹೆಚ್ಚುಗಾರಿಕೆ ಮತ್ತು ಕಳಪೆ ಸಾಧನೆ ಏನಿರಬಹುದು. ಒಂದು ನೋಟ. ಸ್ವಲ್ಪ ಕನ್ನಡ ನಾಡಿನ ಪಕ್ಷಪಾತಿ ಎನಿಸಬಹುದು. ಆದರೂ ಒಂದು ಅನಿಸಿಕೆ - ಅಭಿಪ್ರಾಯ.
೧) ನಡವಳಿಕೆ. ಬಹುತೇಕ ಎಲ್ಲಾ ರಾಜ್ಯಗಳನ್ನು ಒಂದಷ್ಟು ಸುತ್ತಿದ್ದೇನೆ. ಕರ್ನಾಟಕದ ಜನರ ನಡವಳಿಕೆ ವರ್ತನೆ ಇತರ ರಾಜ್ಯಗಳಿಗೆ ಹೋಲಿಸಿದರೆ ಸ್ವಲ್ಪ ಮೃದು ಮತ್ತು ಸೌಮ್ಯವಾಗಿದೆ. ಒರಟುತನ ಕಾಣುವುದಿಲ್ಲ. ಇರುವುದರಲ್ಲಿ ಉತ್ತಮ ಎಂದು ಹೇಳಬಹುದು. ಹಾಗೆಂದು ಸರ್ವಶ್ರೇಷ್ಠ ಎಂದು ಭಾವಿಸಬೇಕಿಲ್ಲ. ಈ ವಿಷಯದಲ್ಲಿ ಬೇರೆಯವರಿಗಿಂತ ಒಂದು ಅಂಕ ಹೆಚ್ಚು. ಕರ್ನಾಟಕದಲ್ಲಿ ಆರಾಮವಾಗಿ ವಾಸಿಸಬಹುದು.
೨) ಆಹಾರ. ಉತ್ತರ ಭಾರತದ ಮುಖ್ಯ ಆಹಾರ ಗೋಧಿ, ದಕ್ಷಿಣದ ಇತರ ರಾಜ್ಯಗಳ ಅಕ್ಕಿ, ಗೋದಿ ಮುಂತಾದ ಸಾಮಾನ್ಯ ಆಹಾರ ಪದಾರ್ಥಗಳನ್ನು ಗಮನಿಸಿದಾಗ ಕರ್ನಾಟಕದಲ್ಲಿ ಗೋಧಿ, ಅಕ್ಕಿ, ರಾಗಿ, ವಿವಿಧ ರೀತಿಯ ಜೋಳಗಳು, ತರಕಾರಿ, ಹಣ್ಣುಗಳು, ಬೇಳೆಕಾಳುಗಳು, ಅಡಿಕೆ, ತೆಂಗು, ಕಬ್ಬು ಎಲ್ಲವನ್ನೂ ಬೆಳೆಯಲಾಗುತ್ತದೆ ಮತ್ತು ಬಳಸಲಾಗುತ್ತದೆ. ದಕ್ಷಿಣ ಕರ್ನಾಟಕದ ರಾಗಿಯ ಮುದ್ದೆ ಊಟ, ಉತ್ತರ ಕರ್ನಾಟಕದ ಜೋಳ ಆಧಾರಿತ ರೊಟ್ಟಿ, ದಕ್ಷಿಣ ಕನ್ನಡ ಕರಾವಳಿ ಭಾಗದ ಮೀನು ಕಡುಬು ಕೇಂದ್ರಿತ ಪದಾರ್ಥಗಳು, ಕೊಡಗಿನ ವಿಶಿಷ್ಟ ಶೈಲಿಯ ಮಾಂಸಾಹಾರ ಎಲ್ಲವೂ ಸ್ವಲ್ಪ ಹೆಚ್ಚು ವಿಭಿನ್ನತೆ ಹೊಂದಿದೆ. ಗುಜರಾತ್, ಮಹಾರಾಷ್ಟ್ರ ಕೇರಳದ ಆಹಾರವೂ ವೈವಿಧ್ಯಮಯವಾಗಿದೆ. ಇಲ್ಲಿಯೂ ಕರ್ನಾಟಕಕ್ಕೆ ಒಂದು ಅಂಕ ಹೆಚ್ಚು ನೀಡಬಹುದು.
೩) ಉಡುಗೆ ತೊಡುಗೆ, ಇದರಲ್ಲಿ ಅಷ್ಟೊಂದು ಉತ್ತಮ ಅಂಕ ಇಲ್ಲ. ಕೇರಳ, ಪಂಜಾಬ್, ರಾಜಸ್ಥಾನ ಪೂರ್ವದ ರಾಜ್ಯಗಳು ಹೆಚ್ಚು ಸುಂದರ ಮತ್ತು ಆಕರ್ಷಕ ವೇಷಭೂಷಣಗಳನ್ನು ಹೊಂದಿವೆ. ಕರ್ನಾಟಕ ಸಾಧಾರಣ ಅಂಕಗಳಿಸುತ್ತದೆ.
೪) ರಾಜಕೀಯ, ಮೊದಲು ತುಂಬಾ ಸಭ್ಯ ಮತ್ತು ಒಳ್ಳೆಯ ಮೌಲ್ಯಯುತ ರಾಜಕೀಯಕ್ಕೆ ಹೆಸರಾಗಿದ್ದ ಕರ್ನಾಟಕ ಕಳೆದ ಎರಡು ಮೂರು ದಶಕಗಳಲ್ಲಿ ಆ ಸ್ಥಾನ ಹೊಂದಿಲ್ಲ. ಇತ್ತೀಚೆಗೆ ತೀರಾ ಅಧೋಗತಿಗೆ ಇಳಿದಿದೆ. ಇಲ್ಲಿ ತೃತೀಯ ದರ್ಜೆ ನೀಡಬಹುದು.
೫) ಸಾಹಿತ್ಯ, ಸಂಗೀತ, ಸಿನೆಮಾ, ನಾಟಕ ಕಲೆ, ಇದರಲ್ಲಿ ಖಂಡಿತವಾಗಿ ಕೇರಳ, ಆಂಧ್ರಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳಗಳ ಜೊತೆ ಮೊದಲ ಸ್ಥಾನಕ್ಕೆ ನಿಕಟ ಸ್ಪರ್ಧೆ ನೀಡುವ ಉತ್ತಮ ಗುಣಮಟ್ಟ ಕರ್ನಾಟಕ ಹೊಂದಿದೆ. ಸಾಹಿತ್ಯದಲ್ಲಿ ಒಂದು ಕೈ ಮೇಲಿದೆ.
೬) ಕ್ರೀಡೆ, ಇಲ್ಲ, ಉತ್ತರ ಭಾರತ, ಕೇರಳ, ತಮಿಳುನಾಡಿಗೆ ಹೋಲಿಸಿದರೆ ಕರ್ನಾಟಕದ ಸಾಧನೆ ದ್ವಿತೀಯ ದರ್ಜೆಗೆ ಮಾತ್ರ ಸೀಮಿತ.
೭) ಕಾನೂನು ಮತ್ತು ಸುವ್ಯವಸ್ಥೆ, ಹೌದು, ಇದರಲ್ಲಿ ಖಂಡಿತ ಉತ್ತಮ ಸ್ಥಾನದಲ್ಲಿ ನಾವು ನಿಲ್ಲುತ್ತೇವೆ. ಮಹಿಳಾ ಸ್ವಾತಂತ್ರ್ಯ, ಕೋಮು ಗಲಭೆಗಳು, ಗುಂಪು ಘರ್ಷಣೆಗಳು, ಭಯೋತ್ಪಾದನೆ, ನಕ್ಸಲಿಸಂ ಇವುಗಳಲ್ಲಿ ಇತರ ರಾಜ್ಯಗಳಿಗಿಂತ ಕರ್ನಾಟಕ ಪರವಾಗಿಲ್ಲ. ಜನ ತೀರಾ ಅತಿರೇಕದ ಹಿಂಸೆಗೆ ಇಳಿಯುವುದಿಲ್ಲ.
೮) ವ್ಯಾಪಾರ ವಾಣಿಜ್ಯ, ಇಲ್ಲ, ಮಹಾರಾಷ್ಟ್ರ, ಗುಜರಾತ್, ತಮಿಳುನಾಡು ಈ ವಿಷಯದಲ್ಲಿ ತುಂಬಾ ಮುಂದಿವೆ. ಇತ್ತೀಚೆಗೆ ತೆರಿಗೆ ಸಂಗ್ರಹದಲ್ಲಿ ಎರಡನೇ ಸ್ಥಾನದಲ್ಲಿದ್ದೇವೆ. ಆದರೆ ಒಟ್ಟಾರೆ ನಾವು ಇದರಲ್ಲಿ ಇನ್ನಷ್ಟು ಅಭಿವೃದ್ಧಿ ಹೊಂದುವ ಅವಶ್ಯಕತೆ ಇದೆ.
೯)ಮಾಹಿತಿ ತಂತ್ರಜ್ಞಾನ, ಭಾರತವಷ್ಟೇ ಏಕೆ ವಿಶ್ವದಲ್ಲೇ ಕರ್ನಾಟಕದ ಸ್ಥಾನ ಅತ್ಯುತ್ತಮ ಮಟ್ಟದಲ್ಲಿದೆ. ಹೊರ ದೇಶಗಳಲ್ಲಿ ಕರ್ನಾಟಕದ ರಾಜಧಾನಿ ಬೆಂಗಳೂರು ಮಾಹಿತಿ ತಂತ್ರಜ್ಞಾನದ ತವರು ಎಂದೇ ಗುರುತಿಸಲಾಗುತ್ತದೆ.
೧೦) ಶಿಕ್ಷಣ ಪ್ರವಾಸೋದ್ಯಮ., ಇಲ್ಲ, ಆಂದ್ರಪ್ರದೇಶ, ಕೇರಳ, ಕಾಶ್ಮೀರ ಹಿಮಾಚಲ ಪ್ರದೇಶ ಮುಂತಾದ ರಾಜ್ಯಗಳಿಗೆ ಹೋಲಿಸಿದರೆ ಸಾಕಷ್ಟು ಸುಧಾರಣೆಯ ಅವಶ್ಯಕತೆ ಇದೆ.
೧೧) ಭಾಷಾಭಿಮಾನ, ಬಹುಶಃ ದೇಶದಲ್ಲೇ ಅತ್ಯಂತ ಕಡಿಮೆ ಭಾಷಾಭಿಮಾನ ಹೊಂದಿದ ರಾಜ್ಯ ಕರ್ನಾಟಕವೇ ಇರಬಹುದು. ಅದಕ್ಕಾಗಿಯೇ ಇಲ್ಲಿ ಸದಾ ಭಾಷಾ ಹೋರಾಟದ ಚಳವಳಿಗಳು ಜೀವಂತವಿದೆ. ಹೀಗೆ ಕೆಲವು ಕ್ಷೇತ್ರಗಳಲ್ಲಿ ಕರುನಾಡಿನ ಸಾಧನೆಯ ಏರಿಳಿತಗಳಿವೆ. ಇದು ಅಂಕಿ ಅಂಶಗಳನ್ನು ಆಧಾರಿಸಿಲ್ಲ. ಅನುಭವ ಮತ್ತು ಗ್ರಹಿಕೆಯ ಆಧಾರದ ಮೇಲೆ ಒಂದು ಕಣ್ಣೋಟವಷ್ಟೆ. ತಪ್ಪುಗಳನ್ನು ಸರಿಪಡಿಸಿಕೊಂಡು ಕರ್ನಾಟಕ ದೇಶದಲ್ಲಿ ಅತ್ಯುತ್ತಮ ಆದರ್ಶ ರಾಜ್ಯ ಎಂದು ಹೆಸರಾಗಲಿ ಎಂಬ ಕನಸಿನ ಅರಮನೆಯಲ್ಲಿ...
-ವಿವೇಕಾನಂದ. ಎಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಅಕ್ಟೋಬರ್ ೩೦, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬