ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್‌ಐಆರ್) ಎರಡನೇ ಹಂತವನ್ನು ಘೋಷಿಸಿರುವುದು ಮಹತ್ವದ ಬೆಳವಣಿಗೆ. ನಿಷ್ಪಕ್ಷಪಾತ, ನ್ಯಾಯಯುತ ಹಾಗೂ ಪಾರದರ್ಶಕ ಚುನಾವಣೆ ನಡೆಸಲು ಕಾಲಕಾಲಕ್ಕೆ ಎಸ್‌ಐಆರ್ ಕೈಗೊಳ್ಳಲೇಬೇಕು. ಈಗಾಗಲೇ ಆಯೋಗವು ಬಿಹಾರದಲ್ಲಿ ಎಸ್‌ಐಆರ್ ಪ್ರಕ್ರಿಯೆಗೆ ಮುನ್ನುಡಿ ಬರೆದಿದ್ದು, ಮುಂದುವರಿದ ಭಾಗವಾಗಿ ಈ ಬಾರಿ ೧೨ ರಾಜ್ಯಗಳು (೯ ರಾಜ್ಯ, ೩ ಕೇಂದ್ರಾಡಳಿತ ಪ್ರದೇಶ) ಎಸ್‌ಐಆರ್‌ಗೆ ಒಳಪಡಲಿವೆ. ಬಿಹಾರದಲ್ಲಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಎದುರಾದ ತೊಡಕುಗಳು ಬಹುಶಃ ಆಯೋಗಕ್ಕೆ ಇಲ್ಲಿ ಪಾಠಗಳಾಗಬಹುದು. ಎರಡನೇ ಹಂತಕ್ಕೆ ಆಯ್ಕೆಯಾದ ರಾಜ್ಯಗಳಲ್ಲಿ ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ಸೇರಿವೆ. ಅಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ. ಬಿಹಾರದಲ್ಲಿ ಆಯೋಗದ ವಿರುದ್ಧ ಎದುರಾದ ಬಹುಮುಖ್ಯ ಆಪಾದನೆ ಎಂದರೆ, ಬಹಳ ಆತುರದಲ್ಲಿ ಎಸ್‌ಐಆರ್ ಆರಂಭಿಸಿದ್ದು, ಅಕ್ಟೋಬರ್- ನವೆಂಬರ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಂಭವನೀಯತೆಯ ಅರಿವಿದ್ದರೂ, ಜೂನ್ ಅಂತ್ಯದಲ್ಲಿ ಪರಿಷ್ಕರಣಾ ಅಭಿಯಾನ ಘೋಷಿಸಲಾಯಿತು. ಈ ಸಂದರ್ಭದಲ್ಲಿ ಕೇವಲ ಮತದಾರರಲ್ಲದೆ, ಚುನಾವಣಾ ಅಧಿಕಾರಿಗಳೂ ಸಹಜವಾಗಿ ಗೊಂದಲಕ್ಕೆ ಗುರಿಯಾದರು. ದಾಖಲೆಗಳಿಗೆ ಸಂಬಂಧಿಸಿದಂತೆ ಪ್ರಶ್ನೆಗಳು ಉದ್ಭವಿಸಿದಾಗ, ಪ್ರತಿಪಕ್ಷಗಳು ಕೂಡ ಆಯೋಗದ ವಿರುದ್ಧ ತಿರುಗಿ ಬೀಳಬೇಕಾಯಿತು. ಅಕ್ರಮ ವಲಸಿಗರು ಎಂಬುದು ಸೇರಿದಂತೆ ನಾನಾ ಕಾರಣಗಳನ್ನು ಮುಂದಿಟ್ಟುಕೊಂಡು ೬೫ ಲಕ್ಷ ಮತದಾರರನ್ನು ಕೈಬಿಡುವ ಆಯೋಗದ ವಿಚಾರವು ವಿವಾದ ಸ್ವರೂಪಕ್ಕೆ ತಿರುಗಿ, ಸುಪ್ರೀಂ ಕೋರ್ಟ್ ಅಂಗಳವನ್ನೂ ತಲುಪಿತು. ಮತದಾರ ಎಂಬ ಮಾನ್ಯತೆಗೆ ಆಧಾ‌ರ್ ಮತ್ತು ಬಿಪಿಎಲ್ ಕಾರ್ಡನ್ನು ಪರಿಗಣಿಸಬೇಕೆಂದು ಸುಪ್ರೀಂ ಕೋರ್ಟ್ ಸೂಚಿಸಿದ ಬಳಿಕ ಎಸ್‌ಐಆ‌ರ್ ಸರಳೀಕರಣಕ್ಕೆ ಮುಂದಾದ ಆಯೋಗ ಅಂತಿಮವಾಗಿ ೬೫ ಲಕ್ಷದಲ್ಲಿ ಒಂದಿಷ್ಟು ಪರಿಷ್ಕರಣೆ ಮಾಡಿ, ಈ ಪೈಕಿ ಸುಮಾರು ೨೦ ಲಕ್ಷಕ್ಕೂ ಅಧಿಕ ಹೆಸರನ್ನು ಮರುಸೇರಿಸಿತು. ಪ್ರಸ್ತುತ, ೨೧ ವರ್ಷಗಳ ಬಳಿಕ ದೇಶದಲ್ಲಿ ಎಸ್‌ಐಆ‌ರ್ ಅಧಿಕೃತವಾಗಿ ಆರಂಭಗೊಳ್ಳುತ್ತಿದೆ. ಮತಪಟ್ಟಿಯಲ್ಲಿ ಪಾರದರ್ಶಕತೆ ಕಾಪಾಡುವ ಆಯೋಗದ ಆಶಯ ಪ್ರಶ್ನಾತೀತ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಇದನ್ನು ಕಾರ್ಯಗತಗೊಳಿಸುವ ವಿಧಾನವನ್ನು ಬಹಳ ಎಚ್ಚರಿಕೆಯಿಂದ, ನಿಷ್ಪಕ್ಷಪಾತದಿಂದ ಪಾಲಿಸುವುದು ಮುಖ್ಯ.ಎಸ್‌ಐಆರ್‌ನ ಉದ್ದೇಶ ಮತಪಟ್ಟಿಯ ಶುದ್ದೀಕರಣವೇ ಹೊರತು, ನಿರ್ದಿಷ್ಟ ಸಮುದಾಯದವರ ಪೌರತ್ವವನ್ನು ನಿರ್ಧರಿಸುವುದು ಅಥವಾ ಮತದಾರರ ಪಟ್ಟಿಯಿಂದ ಸಾಧ್ಯವಾದಷ್ಟು ಜನರನ್ನು ಹೊರಗಿಡುವುದಲ್ಲ ಪ್ರಜಾಪ್ರಭುತ್ವದ ಹಬ್ಬದಲ್ಲಿ ಮತಪ್ರಮಾಣವನ್ನು ಹೆಚ್ಚಿಸಲು ಪ್ರೇರಣದಾಯಕ ಕ್ರಮಗಳನ್ನು ಕೈಗೊಳ್ಳುವುದು ಬಹಳ ಮುಖ್ಯ. ಸ್ಪಷ್ಟ ದಾಖಲೆ ಸಹಿತ ಎಸ್‌ಐಆರ್ ಪ್ರಕ್ರಿಯೆ ಸರಳವಾದಷ್ಟು ಜನರ ಸ್ಪಂದನೆಯೂ ಹೆಚ್ಚುತ್ತದೆ ಎಂಬುದನ್ನು ಮರೆಯಬಾರದು. ಪ್ರತಿಪಕ್ಷಗಳು ಈ ವಿಷಯದಲ್ಲಿ ಅಡಗಿರುವ ಸಮಸ್ಯೆಗಳನ್ನೂ ದೊಡ್ಡದಾಗಿಸಿ, ಎಸ್‌ಐಆರ್‌ನ ಆಶಯವನ್ನೇ ಸಣ್ಣದಾಗಿಸುವ ಅಪಾಯವಿರುವ ಹೊತ್ತಿನಲ್ಲಿ ಸಾಧ್ಯವಾದಷ್ಟು ದೋಷಮುಕ್ತ ಎಸ್‌ಐಆ‌ರ್ ಆಯೋಗಕ್ಕೆ ಆದ್ಯತೆಯಾಗಬೇಕು. ಎಸ್‌ ಐಆರ್ ಅನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿರುವುದರಿಂದ ಪರಿಶುದ್ದ ಮತಪಟ್ಟಿ ರಚನೆಗೆ ಎಲ್ಲರ ಸಹಕಾರವೂ ಮುಖ್ಯ ಎನ್ನಿಸಿಕೊಳ್ಳಲಿದೆ. ಬಿಹಾರದ ಪರಿಷ್ಕರಣೆಯು ಆಯೋಗಕ್ಕೆ ಪಾಠವಾಗಲಿ. ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೩೦-೧೦-೨೦೨೫ ಚಿತ್ರ ಕೃಪೆ: ಅಂತರ್ಜಾಲ ತಾಣ