ತುಳಸಿ ಪೂಜೆಗೆ ನೆಲ್ಲಿ ಗೆಲ್ಲು ಅಗತ್ಯವೇ?
ಬರಹಗಾರರ ಬಳಗ
ನವೆಂಬರ್ ೦೩, ೨೦೨೫
೬ ವೀಕ್ಷಣೆಗಳು
ತುಳಸಿ ಪೂಜೆಗೆ ನೆಲ್ಲಿ ಗೆಲ್ಲು, ಇದು ಹಿರಿಯರು ಮಾಡಿದ ಒಂದು ಸಂಪ್ರದಾಯ. ವಾಸ್ತವವಾಗಿ ನೆಲ್ಲಿ ಕಾಯಿಯ ಚೋಗರು ಗುಣ ಕಾರ್ತಿಕ ಮಾಸದ ಹುಣ್ಣಿಮೆ ಸಮಯಕ್ಕೆ ಕಡಿಮೆಯಾಗುತ್ತದೆ. ಆ ನಂತರ ಅದು ತಿನ್ನಲು ಯೋಗ್ಯ ಆಗಿರುತ್ತದೆ. ಇದನ್ನು ಮುಂದಿನ ತಲೆಮಾರಿಗೆ ತಿಳಿಸಲು ಮಾಡಿದ ಕ್ರಮ. ತುಳಸಿ ಗಿಡದ ಅಲಂಕಾರಕ್ಕೂ ಆಯಿತು. ಇತ್ತ ಆ ಸಂಪ್ರದಾಯದ ನೆನಪಿಗೂ ಆಯಿತು ಎಂದು. ಹಿಂದೆ ಅವರವರ ಹಿತ್ತಲಿನಲ್ಲಿ ನೆಲ್ಲಿ ಮರ ಇತ್ತು. ಆಗ ಅದು ಸರಿ. ಈಗಲೂ ಅವರವರ ಹಿತ್ತಲಿನಲ್ಲಿ ನೆಲ್ಲಿ ಮರ ಇದ್ದರೆ ಸಣ್ಣ ಗೆಲ್ಲು ತಂದು ನೆಡಬಹುದು. ಇಲ್ಲವಾದರೆ ನೆಲ್ಲಿಕಾಯಿ ಖರೀದಿಸಿ ತಂದರೂ ಸಾಕು. " ತುಳಸಿ ಪೂಜೆಗೆ ನೆಲ್ಲಿ ಗೆಲ್ಲು " ಕಡ್ಡಾಯವಲ್ಲ. ಇದು ಅನುಕರಣೆ.
ಅಷ್ಟಮಿಗೆ ಹುಣಸೆ ಹುಳಿಯ ಚಿಗುರು ಕಡಿಮೆಯಾಗುತ್ತದೆ. ಅದಕ್ಕಾಗಿ ಅಂದು ಒಂದೆರಡು ಹುಣಸೆ ಕಾಯಿ ತಂದು ದೇವರ ಮುಂದೆ ಇಡುತ್ತಾರೆ. ಹಾಗೆಯೇ ತುಳಸಿ ಪೂಜೆಗೆ ನೆಲ್ಲಿ. ಯಾವುದೇ ಒಂದು ಫಲ ಪಕ್ವತೆಗೆ ಬಂದ ನಂತರ ಅದರಲ್ಲಿ ಪೂರ್ಣ ಸತ್ವ ಕೂಡಿರುತ್ತದೆ. ಅದರ ನೆನಪಿಗೆ ಇದೆಲ್ಲಾ ಆಚರಣೆಗಳು ಅಷ್ಟೇ.
ನೆಲ್ಲಿ ಮರ ಇಲ್ಲದಿದ್ದರೆ ಗೆಲ್ಲು ತರಬೇಡಿ. ಇದು ನೆರೆ ಮನೆಯವರ ಬೆಕ್ಕು ತಂದು ಬುಟ್ಟಿ ಮುಚ್ಚಿ ಶ್ರಾದ್ಧ ಕಾರ್ಯ ಮಾಡಿದಂತೆ.
-ರಾಧಾಕೃಷ್ಣ ಹೊಳ್ಳ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ನವೆಂಬರ್ ೦೩, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬