ಆಸಕ್ತಿ ಮೂಡಿಸಬೇಕು  ಸಾಮಾನ್ಯವಾಗಿ ಪುಸ್ತಕ ಓದಿನ ಹವ್ಯಾಸ, ಅಭಿರುಚಿ ಎಂಬ ವಿಷಯದತ್ತ ಗಮನಹರಿಸುವಾಗ ನಮಗೆ ಥಟ್ಟನೇ ನೆನಪಾಗುವುದು ಅಜ್ಜ-ಅಜ್ಜಿ, ಅಪ್ಪ-ಅಮ್ಮ ಹೇಳುತ್ತಿದ್ದ ಕಥೆಗಳು, ಅವು ಪಂಚತಂತ್ರ, ಹಿತೋಪದೇಶ, ಉಪನಿಷತ್ತು-ಪುರಾಣ, ತೆನಾಲಿರಾಮ, ಆಕ್ಟರ್-ಬೀರಬಲ್ ಮುಂತಾದವುಗಳಾಗಿದ್ದವು. ಆ ಕಾಲದ ಅಜ್ಜ-ಅಜ್ಜಿಯರು ಈಗ ಅಪರೂಪವಾಗುತ್ತಿದ್ದಾರೆ. ಅಪ್ಪ- ಅಮ್ಮಂದಿರೇ ಆ ಹೊಣೆಯನ್ನೂ ನಿಭಾಯಿಸಬೇಕಾಗಿದೆ. ಬಾಲ್ಯದಲ್ಲಿಯೇ ಕುತೂಹಲ, ಆಸಕ್ತಿಗಳನ್ನು ಬೆಳೆಸುವ ಜವಾಬ್ದಾರಿ ಈಗಿನ ತಂದೆ-ತಾಯಂದಿರೇ ಹೊರಬೇಕಿದೆ. ತಮ್ಮೆಲ್ಲ ಕೆಲಸಗಳ ಮಧ್ಯೆಯೂ ಅವರು ತಮ್ಮ ಮಕ್ಕಳ ಬಾಲ್ಯದ ಪೋಷಣೆಗಾಗಿ ಸಮಯವನ್ನು ಮೀಸಲಿಡಬೇಕು. ಹಾಗೆ ಮಾಡುತ್ತಿರುವವರ ಸಂಖ್ಯೆ ಕಡಿಮೆಯಿರಬಹುದು, ಆದರೆ ಗಣನೀಯವಾಗಿಯೇ ಇದೆ. ಅಂಥ ಮಕ್ಕಳೇ ಮುಂದೆ ಓದುಗನ್ನೊಂದು ಗೀಳಾಗಿಸಿಕೊಳ್ಳುತ್ತಾರೆ. ಈ ಬಗೆಯ ಪುಸ್ತಕಗಳ ಪ್ರಕಾಶಕರ ಸಂಖ್ಯೆ ಈಗಲೂ ಕನ್ನಡದಲ್ಲಿ ಗಣನೀಯ ಸಂಖ್ಯೆಯಲ್ಲೇ ಇರುವರೆಂಬುದು ವಿಶೇಷ. ಅಭಿರುಚಿ ಬದಲಾಗಿದೆ ಓದುಗನ ಅಥವಾ ಪುಸ್ತಕ ಉಪಯೋಗಿಸುವವನ ಅಭಿರುಚಿಗಳು ನಿರಂತರ ಬದಲಾವಣೆಗೊಳಪಟ್ಟಿದ್ದೇ. ಓದುಗ ಬೇರೆ, ಅಂತೆಯೇ ಪುಸ್ತಕ ಉಪಯೋಗಿಸುವವ ಬೇರೆ. ಓದುಗನಾದವನು ಮತ್ತೆ ಮತ್ತೆ ಓದಬೇಕೆನ್ನುವ ಹಸಿವೆಯುಳ್ಳವನು, ಪುಸ್ತಕ ಉಪಯೋಗಿಸುವವನ ಬಳಕೆ ತುಂಬ ಸೀಮಿತವಾದುದು. ಪುಸ್ತಕ ಪ್ರೀತಿ ಕಡಿಮೆಯಾಗುತ್ತಿದೆಯಾ ಎಂಬ ಪ್ರಶ್ನೆಗೆ ಯಾವ ರೀತಿಯ ಪುಸ್ತಕ ಪ್ರೀತಿ ಎಂಬುದೇ ಉತ್ತರವಾದೀತು. ಅಡುಗೆ ವಿಧಾನ, ರಂಗೋಲಿ, ಬ್ಯೂಟಿ ಕೇರ್, ಯೋಗ- ವ್ಯಾಯಾಮ, ಭವಿಷ್ಯ-ಜಾತಕ, ರೋಡ್ ಮ್ಯಾಪ್-ಡಿಸ್ಟನ್ಸ್ ಗೈಡ್-ಟೂರಿಸ್ಟ್ ಗೈಡ್ -ಡಿಕ್ಷನರಿ-ಮುಂತಾದವುಗಳಿಗೆ ಪರ್ಯಾಯವಾಗಿ ಸುಲಭದ 'ಗೂಗಲ್ ಗುರು' ಸಿಕ್ಕಿದ್ದಾನೆ. ಯಾಕೆ ಪುಸ್ತಕದಲ್ಲಿ ಹುಡುಕುತ್ತ ಸಮಯ ವ್ಯರ್ಥ ಮಾಡಬೇಕು? ನನ್ನ ಪ್ರಕಾಶಕ ಮಿತ್ರರೊಬ್ಬರು ಹೇಳುತ್ತಿದ್ದರು. ಪ್ರತಿ ವರ್ಷವೂ ನಾವು ಈ ಡಿಕ್ಷನರಿಯ ಒಂದು ಲಕ್ಷಕ್ಕಿಂತ ಹೆಚ್ಚು ಪ್ರತಿಗಳನ್ನು ಮುದ್ದಿಸುತ್ತಿದ್ದೆವು. ಈಗ ನಾವು ಹತ್ತು ಸಾವಿರ ಮಾರುವುದೂ ಕಷ್ಟವಾಗುತ್ತಿದೆ ಎಂದು. ಇನ್ನೊರ್ವ ಪ್ರಕಾಶಕ ಮಿತ್ರ ಹೇಳಿದ : ವರ್ಷಕ್ಕೆ ಐವತ್ತು ಸಾವಿರ ಪ್ರತಿಗಳಂತೆ ಸತ್ಯನಾರಾಯಣ ಪೂಜೆ, ಗಣಪತಿ ಪೂಜೆ, ಲಲಿತಾ ಸಹಸ್ರನಾಮ ಇತ್ಯಾದಿ ಪುಸ್ತಕಗಳನ್ನು ಪ್ರಕಟಿಸುತ್ತಿದ್ದೆವು. ಈಗವರ ಸಂಖ್ಯೆ ಎರಡು ಸಾವಿರ ದಾಟುತ್ತಿಲ್ಲ, ಎಂದು. ಹೌದು, ಇಂತಹ ಪುಸ್ತಕಗಳನ್ನು ಉಪಯೋಗಿಸುವವರಿಗೆ ಬೇಕಾಗಿದ್ದ ಗೈಡ್ ಅಂತರ್ಜಾಲದಲ್ಲಿ ಸುಲಭವಾಗಿ ಸಿಕ್ಕಿಬಿಟ್ಟಿದ್ದಾನೆ. ಸತ್ಯನಾರಾಯಣ-ಗಣಪತಿ ಪೂಜೆಗೆ ಪುರೋಹಿತರನ್ನೋ ಪುಸ್ತಕವನ್ನೋ ಅವಲಂಬಿಸುವುದಕ್ಕಿಂತ ಯೂಟ್ಯೂಬ್ ಸುಲಭವಲ್ಲವೇ? ಓದುವ ಹವ್ಯಾಸವುಳ್ಳವ ಬೇರೆ. ಪುಸ್ತಕವನ್ನು ಗೈಡ್ ರೀತಿ ಬಳಸಿಕೊಳ್ಳುವವನು ಬೇರೆ. ಈ ಗೈಡ್ ಅಥವಾ Do it yourself ರೀತಿಯ ಪುಸ್ತಕಗಳ ಮಾರಾಟ ದೊಡ್ಡ ಪ್ರಮಾಣದಲ್ಲಿ ಕ್ಷೀಣಿಸಿದೆ. ಅಂತಹ ಪುಸ್ತಕಗಳ ಪ್ರೇಮಿಗಳಿಗೆ ಇನ್ನೂ ಸುಲಭದ ಪ್ರೇಮಿ ಮೊಬೈಲ್ ಫೋನ್ ನಲ್ಲಿ ಸಿಕ್ಕಿದ್ದಾನೆ. ಹಾಗೆಂದು ತಂತ್ರಜ್ಞಾನ ಬೆಳೆಯಲೇ ಬಾರದೇ? ತಮಾಷೆಯೆಂದರೆ, ಈ ಬಗೆಯ ಪುಸ್ತಕ ಬಳಕೆದಾರರ ಕುರಿತು ಯಾರಿಗೂ ತಕರಾರಿಲ್ಲ. ಈ ಪ್ರಕಾಶಕರು ಕೂಡ ಸ್ವಾಭಿಮಾನಿಗಳೇ ಆದವರು. ಎಂದೂ ತಮಗೆ ತೊಂದರೆ ಆಗಿಬಿಟ್ಟಿದೆ ಎಂದಾಗಲೀ, ಸಹಾಯ ಬೇಕೆಂದಾಗಲೀ ಯಾರಲ್ಲೂ ಬೇಡಿಕೊಂಡವರಲ್ಲ. ಬದಲಾಗಿ, ತಮ್ಮ ವೃತ್ತಿಯಲ್ಲೇ ಅಲ್ಪಸ್ವಲ್ಪ ಬದಲಾವಣೆ ತಂದುಕೊಂಡು ಎಂದಿನಂತೆ ತಮ್ಮ ಜೀವನರಥ ಸಾಗಿಸತೊಡಗಿದ್ದಾರೆ. ಪುಸ್ತಕ ವ್ಯವಸಾಯದ ಸುತ್ತ ಕನ್ನಡ ಪುಸ್ತಕ ವ್ಯವಸಾಯದ ಇತಿಹಾಸವನ್ನೊಮ್ಮೆ ಅವಲೋಕಿಸಿದರೆ, ನಮಗೆ ಕಾಣಬರುವುದು ಅದು ಆರಂಭಗೊಂಡಿದ್ದೇ ಈ ಪುಸ್ತಕ ಗೀಳಿನ ಸುಸಂಸ್ಕೃತರಿಂದ. ನಮ್ಮ ಆರಂಭಕಾಲದ ಪ್ರಕಾಶಕ, ಲೇಖಕ ಗಳಗನಾಥರ ಅಭಿರುಚಿ ತುಂಬ ಶ್ರೇಷ್ಠಮಟ್ಟದ್ದೂ ರಾಷ್ಟ್ರಭಕ್ತಿಯನ್ನು ಉದ್ದೀಪಿಸುವಂತೆಯೂ ಆದುದಾಗಿತ್ತು. ಅವರೇ ಸ್ವತಃ ಬರೆದು, ಮುದ್ರಿಸಿ ತಲೆಮೇಲೆ ಹೊತ್ತೊಯ್ಯುವ ಮಾರಾಟಗಾರರೂ ಆಗಿದ್ದರು. ನಂತರದ ಪೀಳಿಗೆಯ ಕುವೆಂಪು, ಮಾಸ್ತಿ, ಕಾರಂತ, ರಾಜರತ್ನಂ ಮುಂತಾದವರು ತಮ್ಮ ಕೃತಿಗಳನ್ನು ತಾವೇ ಪ್ರಕಟಿಸಿ ವಿತರಿಸುತ್ತಿದ್ದರು. ಅವರಿಗೆ ಓದುಗರ ಅಭಿರುಚಿ ತಿದ್ದಿ ಬೆಳೆಸುವ ಶಕ್ತಿ ಅವರ ಪಾಂಡಿತ್ಯವೇ ಒದಗಿಸಿಕೊಟ್ಟಿತ್ತು. ಡಿವಿಜಿ, ಬೇಂದ್ರೆ, ದೇವುಡು, ಬಿಎಂಶ್ರೀ, ತೀನಂಶ್ರೀ ಮುಂತಾಗಿ ಆ ಕಾಲದ ಬಹುತೇಕ ಸಾಹಿತಿಗಳೆಲ್ಲರೂ ಬಹುಭಾಷಾ ವಿಶಾರದರೂ ಆಗಿದ್ದುದರಿಂದ ಅವರಿಗೆ ಕನ್ನಡದ ಓದುಗನಿಗೆ ಅದೆಂತಹ ಸಾಹಿತ್ಯ ಬೇಕು, ಅವರ ಅಭಿರುಚಿಯನ್ನು ಉದಾತ್ತಗೊಳಿಸಬೇಕು- ಎಂಬಂತಹ ಸ್ಪಷ್ಟ ಜ್ಞಾನವೂ ಇತ್ತು. ನಂತರದ ಸಾಹಿತ್ಯದ ಬೆಳವಣಿಗೆಗಳು ಸ್ವಾತಂತ್ರ್ಯ ಸಂದರ್ಭದ ಆದರ್ಶಗಳನ್ನಿಟ್ಟುಕೊಂಡು ರಚನೆಗೊಂಡ ಅನಕೃ, ತರಾಸು, ಪುರಾಣಿಕ, ಕಟ್ಟೀಮನಿ, ರಾವಬಹಾದ್ದೂರ್, ನಿರಂಜನ ಮುಂತಾದ ಬಹಳಷ್ಟು ಲೇಖಕರ ಸಮೃದ್ಧ ಸಾಹಿತ್ಯದ ಕಾಲವೇ. ಅಡಿಗ ಗೋಕಾಕರಂತಹ ನವ್ಯ ಪ್ರಭೃತಿಗಳಿಂದ ಆರಂಭಗೊಂಡ ಸಾಹಿತ್ಯದ ಗಾಳಿ ಜೋರಾಗಿಯೇ ಬೀಸಿ ಹೊಸ ತಲೆಮಾರನ್ನು ಪುಸ್ತಕ ಓದಿನತ್ತ ಚುಂಬಕದಂತೆ ಸೆಳೆದಿತ್ತು. ಅದಕ್ಕೆ ಸಮಾನಾಂತರವಾಗಿ ತ್ರಿವೇಣಿ, ವಾಣಿ, ಎಂ ಕೆ ಇಂದಿರಾ, ಆರ್ಯಾಂಬಾ ಪಟ್ಟಾಬಿ, ಉಷಾ ನವರತ್ನರಾಮ್, ಸಾಯಿಸುತೆ, ಕಾಕೋಳು ಸರೋಜ ಮುಂತಾದ ಕಾದಂಬರಿಗಾರ್ತಿಯರ ಮೃಷ್ಟಾನ್ನ ಆಹಾರ ಕನ್ನಡ ಕುಟುಂಬಗಳಿಗೆ ದಕ್ಕುತ್ತಿತ್ತು. ಬಂಡಾಯ ದಲಿತ ಚಳವಳಿಗಳ ಕಾಲದಲ್ಲಿ ಓದು-ಬರಹಗಳಿಗಿಂತ ಹೆಚ್ಚಾಗಿ ಬೇರೆಯೇ ಹಾದಿ ಹಿಡಿದಂತಿತ್ತು. ಸದ್ಯದ ಕನ್ನಡ ಸಾಹಿತ್ಯದಲ್ಲಿ ಯಾವ ಸಾಹಿತ್ಯ ಚಳವಳಿಯೂ ಕಂಡುಬರುತ್ತಿಲ್ಲವೆನಿಸುತ್ತಿರುವುದೂ ಒಳ್ಳೆಯದೇ ಎನಿಸುತ್ತಿದೆ. ಪ್ರಬಂಧ ಸಾಹಿತ್ಯದ ಓದಿನತ್ತ ಜನರ ಆಕರ್ಷಣೆ ಹೆಚ್ಚಿನಿಸುತ್ತಿದ್ದರೂ ವಸುಧೇಂದ್ರ, ಜೋಗಿ, ಗಣೇಶಯ್ಯ, ಗಜಾನನ ಶರ್ಮ ಮೊದಲಾದವರ ಓದುಗರು ಹೆಚ್ಚೇ ಇದ್ದಾರೆ.. (ಮುಗಿಯಿತು) ಕೃತಜ್ಞತೆಗಳು: ಎಂ ಎ ಸುಬ್ರಹ್ಮಣ್ಯ ಮತ್ತು ವಿಜಯವಾಣಿ ಪತ್ರಿಕೆ ಚಿತ್ರ ಕೃಪೆ: ಅಂತರ್ಜಾಲ ತಾಣ