ನಮ್ಮ ರಾಜ್ಯದ ರಾಜ ಪರಂಪರೆಯಲ್ಲಿ ಹಸುಗಳಿಗೆ ಮೆಂದು ಕೈಕಾಲು ಅಡಿಸಲು ಸ್ವಾತಂತ್ರ್ಯ ಇತ್ತು. ನಮ್ಮನ್ನು ಆಳಿ ಹೋದ ಬ್ರಿಟೀಷರೂ ಸಹ ಅದಕ್ಕೆ ಯಾವ ತೊಂದರೆಯನ್ನೂ ಮಾಡಲಿಲ್ಲ. ಆದರೆ ನಮ್ಮನ್ನೇ  ನಾವು ಆಳಿ ಕೊಳ್ಳುವಾಗ (ಪ್ರಜಾಪ್ರಭುತ್ವ ದೇಶ) ನಮಗೆ ಪ್ರಾಣಿ ದಯೆ ಇಲ್ಲದಾಯಿತು. ಕೆಲವು ವರ್ಷಗಳ ಹಿಂದೆ ನಮ್ಮ ರಾಜ್ಯ ಸರಕಾರ ಗೋಮಾಳಗಳಲ್ಲಿ ಅತಿಕ್ರಮ ಮಾಡಿ ಕುಳಿತವರಿಗೆ ಅದನ್ನು ಮಂಜೂರು ಮಾಡಿ ಹಕ್ಕು ಕೊಡುವುದೆಂದು ನಿರ್ಧರಿಸಿತು. ನಮ್ಮ ಜನ ಅನುಕೂಲ ಸಿಕ್ಕರೆ ಭಾರತದ ಸರ್ವೋನ್ನತ ಹುದ್ದೆಯನ್ನೂ ಅಕ್ರಮ ಮಾರ್ಗದಲ್ಲಿ ಹೊಂದಲು ಇಚ್ಚೆ ಪಡುವವರೇ. ಹೀಗಿರುವಾಗ ಗೋಮಾಳಗಳೇನು ದೊಡ್ಡ ವಿಚಾರವೇ? ಸ್ವಾತಂತ್ರ್ಯಾ ನಂತರ ಬಂದ ನಮ್ಮ ರಾಜ್ಯ ಸರಕಾರಗಳು ಹಲವಾರು ಉತ್ತಮ ಕಾರ್ಯಕ್ರಮಗಳನ್ನು ಹಾಕಿಕೊಂಡು ಸಮಾಜದ ಎಲ್ಲಾ ವರ್ಗಗಳಿಗೂ  ಅನುಕೂಲಮಾಡಿಕೊಟ್ಟಿವೆ. ಬಡತನ ನಿರ್ಮೂಲನೆಗೆ ಸಾಕಷ್ಟು ಯೋಜನೆಗಳನ್ನು ತಂದಿದೆ. ಆದರೆ ರೈತಾಪಿ ವರ್ಗಕ್ಕೆ ಪರೋಕ್ಷವಾಗಿ ಅಗತ್ಯವಾಗಿದ್ದ, ನೂರಾರು ವರ್ಷಗಳಿಂದ ಇದು ಅಗತ್ಯ ಎಂದು ಪರಿಗಣಿಸಿದ್ದ ಗೋವುಗಳು ಮೇಯುವ ಸ್ಥಳವನ್ನು  ಮಾತ್ರ  ಯಾವ ಕಾರಣಕ್ಕೆ ಮನೆ ನಿವೇಶನ ಮಾಡಲು ಬಿಟ್ಟುಕೊಡುವ ನಿರ್ಧಾರಕ್ಕೆ  ಬಂದಿತೋ ತಿಳಿಯದು. ಈ ನಿರ್ಧಾರದಿಂದ ಮುಂದೆ ಹೈನುಗಾರಿಕೆಯ ಮೇಲೆ ದೊಡ್ಡ ಹೊಡೆತ ಬೀಳುತ್ತಿರುವುದಂತೂ ಖಂಡಿತಾ.     ಗೋವು ಮತ್ತು ಮಾನವನ ಸಂಬಂಧ ಯುಗ ಯುಗಾಂತರದಷ್ಟು ಹಳೆಯದು. ನಾವು ಚರಿತ್ರೆ ಪಾಠದಲ್ಲಿ ಓದಿದಂತೆ  ಹಿಂದೆ ಗೋವುಗಳ ವಿನಿಮಯದ ಮೂಲಕ  ವ್ಯವಹಾರ ನಡೆಯುತ್ತಿತ್ತಂತೆ. ಪ್ರತೀ ಮನೆಯಲ್ಲೂ ಗೋವುಗಳಿದ್ದವು. ಕೆಲವು ಮನೆಗಳಲ್ಲಿ ಅವುಗಳ ಸಾಮ್ರಾಜ್ಯವೇ ಇತ್ತು. ಆ ಎಲ್ಲಾ ವೈಭವ ೯೦ ರ ದಶಕದ ತರುವಾಯ ಕಡಿಮೆಯಾಗುತ್ತಾ ಬರಲಾರಂಭಿಸಿತು. ಹಾಲಿಗಾಗಿ ಹೆಚ್ಚು ಹಾಲೂಡುವ ಹಸುಗಳನ್ನು ಆಮದು ಮಾಡಿ, ನಮ್ಮ ದೇಶೀ ಹಸುಗಳನ್ನು ತಳಿ ಮಿಶ್ರಮಾಡಿ ದೇಶೀ ತಳಿಗಳನ್ನು ಮೂಲೆ ಗುಂಪು ಮಾಡಲಾಯಿತು. ನಮ್ಮ ಮನೋಸ್ಥಿತಿ ದಯೆಯಿಂದ ವ್ಯಾವಹಾರಿಕತೆಯತ್ತ ಬದಲಾಗತೊಡಗಿತು. ಲಾಭವಿಲ್ಲದೆ ಯಾವುದನ್ನೂ  ಮಾಡುವುದು ವ್ಯರ್ಥ ಎಂಬ ಮನೋಸ್ಥಿತಿಗೆ ತಲುಪಿದೆವು. ವಾಣಿಜ್ಯಿಕ  ದೃಷ್ಟಿಯಿಂದ ನೋಡಿದರೆ ಇದು ತಪ್ಪಲ್ಲ. ನಷ್ಟ ಮಾಡಿಕೊಂಡು ಯಾವುದನ್ನೂ ಮಾಡುವುದು ಈಗಿನ ಕಾಲಕ್ಕೆ ಸೂಕ್ತವಲ್ಲ. ಆದರೆ ಪ್ರಾಣಿಗಳಿಗೂ ಬದುಕುವ ಹಕ್ಕು ಇದೆ. ಅದನ್ನು ನಾವು ಕಸಿಯಬಾರದು ಅಷ್ಟೇ. ಇಂದು ಅದು ಆಗಿದೆ. ದೇಶೀ ತಳಿಗಳೊಂದೇ ಅಲ್ಲ ನಾವು ವೃತ್ತಿಯಾಗಿ ಸ್ವೀಕರಿಸಿದ, ಅಧಿಕ ಹಾಲೂಡುವ ಹಸುಗಳ ಹೈನುಗಾರಿಕೆಗೂ ಇದು ದೊಡ್ದ ಪೆಟ್ಟು. ಈಗ ನಾವು ಹಾಲು ಉತ್ಪಾದನೆಗಾಗಿ ಸಾಕುತ್ತಿರುವ ಹಸು ಎಮ್ಮೆಗಳನ್ನು ಕೊಟ್ಟಿಗೆ ಪದ್ದತಿಯಲ್ಲಿ ಸಾಕುತ್ತಿದ್ದೇವೆ. ಕೊಟ್ಟಿಗೆ ಪದ್ದತಿ ಎಂದರೆ ಅದು ಒಂದು ಜೈಲು ಇದ್ದಂತೆ. ಅಲ್ಲಿ ಅವು ಸುಮಾರು ೪೦-೫೦ ಚದರ ಅಡಿ ವಿಸ್ತೀರ್ಣದಲ್ಲಿ ಹಸುವೊಂದನ್ನು ವರ್ಷಗಟ್ಟಲೆ ಕೂಡಿ ಹಾಕಿ ಹಾಲು ಹಿಂಡುತ್ತೇವೆ. ಅದರ ಮೈಗೆ ಬಿಸಿಲು ತಾಗುವುದೇ ಇಲ್ಲ. ಸ್ವಚ್ಚ ಗಾಳಿಯೂ ಇಲ್ಲ. ನಿರಂತರ ಅಮೋನಿಯಾ ಗಾಳಿ ಸೇವನೆ ಮಾಡುತ್ತಾ ಬದುಕುವ ಈ ಹಸುಗಳ ಆರೋಗ್ಯ ಸ್ಥಿತಿಗತಿ ಇತ್ತೀಚಿನ ದಿನಗಳಲ್ಲಿ ಬದಲಾಗಲಾರಂಭಿಸಿದೆ. ೬-೮ ಕರು ಹಾಕಬೇಕಾದ ಹಸುಗಳು ೩-೪ ರ ನಂತರ ಕೃಷವಾಗುತ್ತಿವೆ. ಒಂದು- ಎರಡು ಕೃತಕ ಗರ್ಭದಾರಣೆಯಿಂದ ಗಬ್ಬ ಕಟ್ಟಿತ್ತಿಲ್ಲ. ಗಬ್ಬಕ್ಕೆ  ಬಂದುದು ಗೊತ್ತಾಗುವುದಿಲ್ಲ. ಹಸು ಗಬ್ಬಕ್ಕೆ ಬಂದಾಗ ತೋರಿಸುವ ಯಾವ ಚಿನ್ಹೆಯನ್ನೂ ಅವು ತೋರಿಸದ ಸ್ಥಿತಿ ಬಂದಿದೆ. ಹಸುಗಳ ಆರೋಗ್ಯದ ಸ್ಥಿತಿಯಂತೂ ಗಂಭೀರವಾಗಿದ್ದು, ಸ್ವಲ್ಪ ಜಾರಿದರೂ ಕೀಲು ಮುರಿಯುವ, ಸ್ವಲ್ಪ ಆಹಾರ ಹೆಚ್ಚುಕಡಿಮೆಯಾದರೂ ರೋಗಕ್ಕೆ ತುತ್ತಾಗುವ ಸ್ಥಿತಿ ಬಂದಿದೆ. ಇದೆಲ್ಲಾ ಯಾಕೆ ಅಗಿದೆ ಎಂದರೆ ಹಸು/ ಎಮ್ಮೆಗಳು ಇಂದು ನೈಸರ್ಗಿಕವಾಗಿ ಬದುಕಬೇಕಾದ ಸ್ಥಿತಿಯಲ್ಲಿ ಇಲ್ಲ. ಅವುಗಳ ಮೈ ಮೇಲೆ ಸೂರ್ಯನ ಬೆಳಕು ಬೀಳುವುದಿಲ್ಲ. ಸೂರ್ಯನ ಬೆಳಕು ಬೀಳದ ಕಾರಣದಿಂದ ಅವುಗಳ ದೈಹಿಕ ಬೆಳವಣಿಗೆ ಸಮರ್ಪಕವಾಗಿ ನಡೆಯುವುದಿಲ್ಲ. ಕೈಕಾಲುಗಳ ಗಟ್ಟಿತನ ಇಲ್ಲದಿರುವಿಕೆ, ಗಬ್ಬದ ಸೂಚನೆಗಳು, ಗಬ್ಬ ಕಟ್ಟಿಕೊಳ್ಳುವಿಕೆ ಎಲ್ಲದರ ಮೇಲೂ ಸೂರ್ಯನ ಬೆಳಕಿನ ಪರಿಣಾಮ ಇದೆ. ಇದನ್ನು ಬೇರೆ ಯಾವ ಮೂಲದಲ್ಲೂ ಒದಗಿಸಲು ಸಾಧ್ಯವಿಲ್ಲ. ಸೂರ್ಯನ ಬಿಸಿಲಿಗೆ ಸರಿಸಾಟಿ ಅದೊಂದೇ. ನೈಸರ್ಗಿಕವಾಗಿ ಮೆಂದುಂಡ ಹಸುಗಳ ಹಾಲಿನಲ್ಲಿನಲ್ಲಿರುವ ಸತ್ವ ನಾವು ಕೊಡುವ ಆಹಾರದಿಂದ ಬರಲು ಸಾಧ್ಯವಿಲ್ಲ. ನಾವು ಸಾಧ್ಯವಾದಷ್ಟು ವಿಟಮಿನ್ , ಖನಿಜ ಮಿಶ್ರಣಗಳನ್ನು ಕೃತಕ ಮೂಲದಲ್ಲಿ ಕೊಡುತ್ತೇವೆಯಾದರೂ ಅದು ಎಷ್ಟಾದರೂ ಕೃತಕವೇ. ಆದ ಕಾರಣ  ನಾವು ಸೇವಿಸುವ ಹಾಲಿನಲ್ಲಿ ನಾವು ತಿಳಿದಷ್ಟು ಪೋಷಕಾಂಶಗಳು ಇರುವುದು ಸಂಶಯ.    ಹಸು ಸಾಕಣೆ ಮಾಡುವವರು ತಮ್ಮಲ್ಲೇ ಹಸುಗಳಿಗೆ ಕೈಕಾಲು ಆಡಿಸಲು ಅನುಕೂಲವಾಗುವಂತೆ ಸ್ಥಳಾವಕಾಶವನ್ನು  ಮೀಸಲಿಡಬಹುದಲ್ಲವೇ? ಹುಲ್ಲುಗಾವಲಿನಲ್ಲಿ ಮೇಯಲು ಬಿಡಬಹುದಲ್ಲವೇ? ಎಂಬುದಾಗಿ ತರ್ಕ ಮಾಡಬಹುದು. ಅದು ಸಾಧ್ಯ. ಆದರೆ ನಮ್ಮಲ್ಲಿ ದೊಡ್ದ ಪ್ರಮಾಣದಲ್ಲಿ ಹೊಲ ಹೊಂದಿ ಹಸು ಸಾಕಣೆ ಮಾಡುವವರ ಸಂಖ್ಯೆಗಿಂತ ಕಡಿಮೆ ಹೊಲ ಹೊಂದಿದ ಸಣ್ಣ, ಅತೀ ಸಣ್ಣ ರೈತರಿಂದ ಹಾಲು ಉತ್ಪಾದನೆ ಜಾಸ್ತಿ. ಇವರಿಗೆ ಇರುವ ಭೂಮಿಯಲ್ಲಿ  ಹಸು ಮೇಯಿಸುವುದಕ್ಕೆ  ಬೇಕಾದಷ್ಟು ಸ್ಥಳಾವಕಾಶ ಇರುವುದಿಲ್ಲ. ಇದಕ್ಕಾಗಿಯೇ ಮೀಸಲಿಟ್ಟ ಗೋವು ಮೇಯುವ ಸ್ಥಳ ಇದ್ದಾಗ ಅಲ್ಲಿಗೆ  ಮೇಯಲು ಅಥವಾ ಸುತ್ತಾಡಲು ಬಿಡುವ ಅವಕಾಶ ಇತ್ತು. ಆದರೆ ಅದು ಈಗ ಇಲ್ಲದಾಗಿದೆ. ಎಲ್ಲರಿಗೂ  ಮನೆ / ಎಲ್ಲರಿಗೂ ಭೂಮಿಯನ್ನು ಹೊಂದುವ ಮೂಲಭೂತ ಹಕ್ಕು ಇದೆಯೇನೋ ನಿಜ. ಅದನ್ನು ಸರಕಾರ  ಪೂರೈಸಬೇಕಾದ್ದು ಸಹ ನ್ಯಾಯ. ಆದರೆ ಮೂಕ ಪ್ರಾಣಿಗಳ ಅದೂ ಮನುಷ್ಯರು ಸಾಕುವ ಪ್ರಾಣಿಗಳ ಸ್ವತಂತ್ರ ಬದುಕುವ ಹಕ್ಕನ್ನು ಮಾತ್ರ ಕಸಿಯುವ ಹಕ್ಕು  ಯಾರಿಗೂ ಇಲ್ಲ. ಎಲ್ಲದಕ್ಕೂ ದಯೆ ಇದೆ. ಆದರೆ  ಪಶುಗಳಿಗೆ ಮಾತ್ರ ದಯೆ ಇಲ್ಲ.  ಸರಕಾರ ಗೋಮಾಳಗಳ ಹಂಚುವಿಕೆಯ ವಿಚಾರದಲ್ಲಿ ತೆಗೆದುಕೊಂಡ ನಿರ್ಧಾರ ಸಮಂಜಸವೆಂದು ಕಾಣುವುದಿಲ್ಲ. ಎಲ್ಲರಿಗೂ ಭೂಮಿ ಒಡೆತನದ ಹಕ್ಕು  ಕೊಡುವುದಿದ್ದಲ್ಲಿ ಇತರ ಸರಕಾರೀ ಭೂಮಿಯನ್ನು ಮೀಸಲಿಡಬಹುದಿತ್ತು. ಅಥವಾ ಗೋ ಮಾಳಗಳನ್ನೇ ಕೊಡುವುದಾದಲ್ಲಿ ಸ್ಥಳೀಯರಿಗೆ ಅದರ ಅವಷ್ಯಕತೆ ಇದೆಯೇ ಇಲ್ಲವೇ ಎಂದು  ಜನಾಭಿಪ್ರಾಯ  ಕೇಳಿ ಅಲ್ಲಿ ಅದರ ಅವಶ್ಯಕತೆ ಇಲ್ಲವೆಂದಾದಲ್ಲಿ ಮಾತ್ರ ಅದನ್ನು ನೋಟಿಫೈ ಮಾಡಬಹುದಿತ್ತು. ಈಗ ತೆಗೆದುಕೊಂಡ ನಿರ್ಧಾರದಂತೆ ರಾಜ್ಯದಾದ್ಯಂತ ಎಲ್ಲಿ ಗೋಮಾಳಗಳಿದ್ದರೂ ಅದರಲ್ಲಿ  ಅಕ್ರಮವೆಸಗಿದವರಿಗೆ ಅದರ ಹಕ್ಕು ಕೊಡುವುದೇ ಆಗಿದೆ. ಇದು ಮುಂದಿನ ದಿನದಲ್ಲಿ ಪಶು ಸಂಗೋಪನೆ ಮೇಲೆ ಕೃಷಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಮಾಹಿತಿ : ರಾಧಾಕೃಷ್ಣ ಹೊಳ್ಳ ಚಿತ್ರ ಕೃಪೆ: ಅಂತರ್ಜಾಲ ತಾಣ