ಕನ್ನಡ ಪತ್ರಿಕಾ ಲೋಕ (ಭಾಗ ೨೩೪) - ಅವನಿ
ಶ್ರೀರಾಮ ದಿವಾಣ
ನವೆಂಬರ್ ೧೫, ೨೦೨೫
೧೪ ವೀಕ್ಷಣೆಗಳು
ಧಾರವಾಡದ ಅವನಿ ರಸಿಕರ ರಂಗ ವೇದಿಕೆಯ "ಅವನಿ".
ಧಾರವಾಡ ನಾರಾಯಣಪುರದ 'ಅವನಿ ರಸಿಕರ ರಂಗ ವೇದಿಕೆ'ಯು ಹದಿನಾಲ್ಕು ವರ್ಷಗಳ ಕಾಲ ನಿರಂತರವಾಗಿ ಪ್ರಕಟಿಸಿದ ಮಾಸಪತ್ರಿಕೆಯಾಗಿದೆ "ಅವನಿ". ಮೂಲತಹ ಉತ್ತರ ಕನ್ನಡ ಜಿಲ್ಲೆಯ ಶಿರಾಲಿಯವರಾಗಿದ್ದು, ನಂತರ ಧಾರವಾಡದಲ್ಲಿ ವಾಸವಾಗಿದ್ದ ನಿವೃತ್ತ ಐ ಆರ್ ಎಸ್ ಅಧಿಕಾರಿ, ಪ್ರಸಿದ್ಧ ಕನ್ನಡ - ಇಂಗ್ಲೀಷ್ ದ್ವಿಭಾಷಾ ಸಾಹಿತಿ ದಿ | ಎನ್. ಪಿ. ಭಟ್ಟ ("ರಂಜನ್ ಭಟ್ಟ" / "ನಾರಂಗಿ ಭಟ್ಟ") ಅವರು ೨೦೦೦ನೇ ಇಸವಿಯಲ್ಲಿ ಧಾರವಾಡದಲ್ಲಿ ಸ್ಥಾಪಿಸಿ ಮುನ್ನಡೆಸಿದ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯಾದ 'ಅವನಿ ರಸಿಕರ ರಂಗ ವೇದಿಕೆ'ಯ ಮುಖವಾಣಿಯಾಗಿ " ಅವನಿ" ೨೦೦೨ರಲ್ಲಿ ಆರಂಭವಾಯಿತು.
೨೦೦೨ರ ಜುಲೈ ತಿಂಗಳ ಸಂಚಿಕೆಯಿಂದ ೨೦೦೩ರ ಜನವರಿ ತಿಂಗಳ ಸಂಚಿಕೆಯವರೆಗೆ "ಶಾಲ್ಮಲಾ" ಎಂಬ ಹೆಸರಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿರ್ಸಿಯಿಂದ ಪ್ರಕಟವಾಗುತ್ತಿದ್ದ ಮಾಸಪತ್ರಿಕೆಯ ಹೆಸರನ್ನು, ೨೦೦೩ರ ಫೆಬ್ರವರಿ ತಿಂಗಳ ಸಂಚಿಕೆಯಿಂದ "ಅವನಿ" ಎಂದು ಬದಲಾಯಿಸಿ ಮುಂದುವರಿಸಲಾಗಿತ್ತು. ಪತ್ರಿಕೆಯು ೨೦೧೬ರವರೆಗೆ ಪ್ರಕಟಗೊಂಡು ನಂತರ ಸ್ಥಗಿತಗೊಂಡಿತು.
"ಅವನಿ"ಯ ಪ್ರಕಾಶಕರಾದ ಎನ್. ಪಿ. ಭಟ್ಟ (ನಾರಾಯಣ ಪರಮೇಶ್ವರ ಭಟ್ಟ) ಅವರು ವೃತ್ತಿಯಲ್ಲಿ ಆದಾಯ ತೆರಿಗೆ ಇಲಾಖೆಯಲ್ಲಿ ಮುಖ್ಯ ಆಯುಕ್ತರಾಗಿದ್ದು ನಿವೃತ್ತರಾದವರು. ಪ್ರವೃತ್ತಿಯಲ್ಲಿ ಕವಿಯಾಗಿ, ಕಥೆಗಾರರಾಗಿ, ಲೇಖಕರಾಗಿ ಪ್ರಸಿದ್ಧರಾದವರು. ಕನ್ನಡ ಮತ್ತು ಇಂಗ್ಲೀಷ್ ನಲ್ಲಿ ಇವರು ಬರೆದ ಎಂಟಕ್ಕೂ ಅಧಿಕ ಕೃತಿಗಳು ಪ್ರಕಟಗೊಂಡಿವೆ.
"ಅವನಿ"ಯ ಆರಂಭದಿಂದ ಕೊನೆಯ ಸಂಚಿಕೆಯವರೆಗೂ ಸಂಪಾದಕರಾಗಿದ್ದು ಸಮರ್ಥವಾಗಿ ಮುನ್ನಡೆಸಿದವರು ಡಾ. ಯಶೋದಾ ಭಟ್ಟ ಅವರು. ಪ್ರಕಾಶಕರಾದ ಎನ್. ಪಿ. ಭಟ್ಟ ಅವರ ಸಹಧರ್ಮಿಣಿಯಾಗಿರುವ ಇವರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ವಿ. ಕೃ. ಗೋಕಾಕ ಅವರ ಹಿರಿಯ ಪುತ್ರಿ. ಸುಧೀರ್ಘ ಕಾಲ ದೆಹಲಿಯ ಕಾಲೇಜಿನಲ್ಲಿ ಇಂಗ್ಲೀಷ್ ಸಾಹಿತ್ಯದ ಪ್ರಾಧ್ಯಾಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದವರು. ಸಾಹಿತಿಗಳು. ಇವರ ಕೆಲವು ಕೃತಿಗಳು ಪ್ರಕಟವಾಗಿವೆ.
ಒಂದೇ ಒಂದು ಜಾಹೀರಾತನ್ನೂ ಪಡೆದುಕೊಳ್ಳದೆ, ಸ್ವಂತ ಹಣದಲ್ಲಿ ಕನ್ನಡ ಸೇವೆ ಎಂಬ ಧ್ಯೇಯದೊಂದಿಗೆ ದಂಪತಿಗಳು ಅವನಿಯನ್ನು ನಡೆಸಿದ್ದಾರೆ. ನಾಲ್ಕು ಪುಟಗಳ ಅವನಿಯಲ್ಲಿ ಯಶೋದಾ ಭಟ್ಟ ಅವರು ಬರೆಯುತ್ತಿದ್ದ ಸಂಪಾದಕರ ಮಾತು, ಎನ್. ಪಿ. ಭಟ್ಟರು ಬರೆಯುತ್ತಿದ್ದ ವ್ಯಕ್ತಿ ಚಿತ್ರ, ವಿವಿಧ ಬರೆಹಗಾರರು ಬರೆಯುತ್ತಿದ್ದ ಪುಸ್ತಕ ಪರಿಚಯ, ಸಾಹಿತ್ಯಿಕ, ಸಾಂಸ್ಕೃತಿಕ ಲೇಖನಗಳು, ಗ್ರಾಹಕ ಜಾಗೃತಿ - ಮಾಹಿತಿ ಬರಹಗಳು ಪ್ರಕಟವಾಗುತ್ತಿದ್ದುವು. ಪ್ರೊ. ದಮಯಂತಿ ನರೇಗಲ್, ಡಾ. ಕುಮುದಾ ಜಿ. ಹಾಗೂ ಎಂ. ಸುದರ್ಶನ ರಾಜ ಸಂಪಾದಕ ಮಂಡಳಿ ಸದಸ್ಯರಾಗಿದ್ದರು.
ಧಾರವಾಡದ ಮನೋಹರ ಮುದ್ರಣಾಲಯದಲ್ಲಿ "ಅವನಿ" ಯ ೫೦೦ ಪ್ರತಿಗಳನ್ನು ಮುದ್ರಣಗೊಳ್ಳುತ್ತಿತ್ತು. ಬಿಡಿ ಸಂಚಿಕೆಗೆ ಒಂದು ರೂಪಾಯಿ ಬೆಲೆ ನಿಗದಿಪಡಿಸಿ ಮುದ್ರಿಸಲಾಗುತ್ತಿತ್ತಾದರೂ, ೪೦೦ ಪ್ರತಿಗಳನ್ನು ಉಚಿತವಾಗಿಯೇ ಅಂಚೆ ಮೂಲಕ ಕಳುಹಿಸಲಾಗುತ್ತಿತ್ತು. ಉಳಿದವುಗಳನ್ನು ಅವನಿ ರಸಿಕರ ರಂಗ ವೇದಿಕೆಯು ಆಯೋಜಿಸುವ ಕಾರ್ಯಕ್ರಮಗಳಲ್ಲಿ ವಿತರಿಸಲಾಗುತ್ತಿತ್ತು. "ಅವನಿ" ಮಾಸಪತ್ರಿಕೆಯಲ್ಲಿ ಪ್ರಕಟವಾದ ಡಾ. ಯಶೋದಾ ಭಟ್ಟ ಅವರ ಸಂಪಾದಕರ ಮಾತುಗಳು ಮತ್ತು ಎನ್. ಪಿ. ಭಟ್ಟ ಅವರ ಲೇಖನಗಳು ಸಂಕಲನಗಳಾಗಿ ಮುದ್ರಣಗೊಂಡಿರುವುದೊಂದು ವಿಶೇಷ.
~ ಶ್ರೀರಾಮ ದಿವಾಣ
ಪ್ರಕಟಿಸಿದ: ನವೆಂಬರ್ ೧೫, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬