ಮಿನಿ ಮಿನಿ ಕಥೆಗಳು
ಕೆ.ಪಿ.ಅಶ್ವಿನ್ ರಾವ್
ನವೆಂಬರ್ ೨೭, ೨೦೨೫
೧೮ ವೀಕ್ಷಣೆಗಳು
ವಿರಾಗಿಣಿ
ಅವಳೊಬ್ಬ ವಿದ್ಯಾವಂತೆ, ಆದರೂ ಅಮಾಯಕಿ. ಮದುವೆಯಾಯ್ತು ಅಷ್ಟೇ... ಮಿಲನವಿಲ್ಲ, ಮಕ್ಕಳಿಲ್ಲ. ಸಂಸಾರವಿಲ್ಲ ನಿಟ್ಟುಸಿರೂ ಇಲ್ಲ, ಗಂಡನಿಗೆ ತನ್ನ ಬಗ್ಗೆ ಆಸಕ್ತಿ ಇಲ್ಲ ಅಂತ ಗೊತ್ತಾದಾಗ ಆಕೆ ಒತ್ತಾಯಿಸಲಿಲ್ಲ. ಗಂಡನಿಗಿನ್ನೊಂದು ಸಂಬಂಧ ಇರುವುದು ಗೊತ್ತಾದಾಗಲೂ ಪ್ರತಿಭಟನೆ ಇಲ್ಲ, ಅಷ್ಟು ಸರಳೆ, ಸಹಜೆ. ಗಂಡನ ಆಸ್ತಿ ಬಂದಿದೆ. ತವರಿನಲ್ಲೇ ಸೋದರರ ಸಂಸಾರದಲ್ಲೇ ಯೋಗಿಣಿ ಆಕೆ. ಆಸೆ ಬೇಸರವಿಲ್ಲ. ಕನಸು ಕಾಣುತ್ತಾ ಕೊರಗುವುದಿಲ್ಲ. ಅವಳು ಮಾಯೆಯಾಗಲಿಲ್ಲ, ಮಾಯೆ ಅವಳ ಹತ್ತಿರವೂ ಸುಳಿಯಲಿಲ್ಲ. ಅವಳೊಬ್ಬ ನಿಶ್ಚಿಂತ ವಿರಾಗಿಣಿ....
***
ಪಶ್ಚಾತ್ತಾಪ
ಗಂಡ ಅಂದ್ರೆ ಹೀಗೇ ಇರಬೇಕು- ಅಡಿಗಡಿಗೆ ಸಿಡಿಯುತ್ತಾ, ನಿಂದಿಸುತ್ತಾ ಮೂದಲಿಸುತ್ತಾ, ಹಿಂಸಿಸುತ್ತಾ ಎಂಬುದು ಅವನ ಥಿಯರಿ. ಈ ಆಟಕ್ಕೆಲ್ಲಾ ಹೆದರಿ ಮನೆಬಿಟ್ಟು ತವರಿಗೆ ಹೋದರೆ ಅಪ್ಪ-ಅವ್ವನೊಂದುಕೊಂಡಾರೆಂದು ಸಹಿಸಿದಳಾಕೆ. ಅವರ ಇಬ್ಬರು ಹೆಣ್ಣು ಮಕ್ಕಳು ಎಂಜಿನಿಯರ್ಗಳು. ಅಪ್ಪನಿಗೆ ಈಗಲೂ ಅನುಮಾನ, ಅದು ಅವನಿಗೆ ವಯೋಸಹಜ ಕಾಯಿಲೆ. ಅವಳೀಗ ಎದ್ದಳು. ಗಂಡನ ಸೇವೆ ಮಾಡುತ್ತಲೇ ಮಕ್ಕಳಿಗೆ ಗಂಡು ನೋಡಿ ಮದುವೆ ಮಾಡಿ ಮೊಮ್ಮಕ್ಕಳೊಂದಿಗೆ ಆಡುವಾಗ, ಗಂಡ ಹಾಸಿಗೆಯ ಮೇಲೆ ಪಶ್ಚಾತ್ತಾಪದ ಬೆಂಕಿಯಲಿ ಬೇಯುವಾಗ ದಿಂಬು ತೊಯ್ದರೂ ಬೆಂಕಿ ಆರಲಿಲ್ಲ.
***
ದಿಟ್ಟೆ
ಅವಳು ಒಂದು ಕಾಲಕ್ಕೆ ಯಾರಾದರೂ ಒಮ್ಮೆ ತಿರುಗಿ ನೋಡುವಂಥ ಸುಂದರಿ. ಆದರೆ ಆಕೆಗೆ ಆಗಿದ್ದು ಮೋಸದ ಮದುವೆ. ಕುಡುಕ ಗಂಡ, ಎರಡು ಹೆಣ್ಣು ಮಕ್ಕಳ ಕೊಟ್ಟು ಓಡಿಹೋದ. ಆಕೆ ಜಾಣೆ, ಕೆಲಸಕ್ಕೆ ಸೇರಿ ಬದುಕಿದಳು. ಹೆಣ್ಣುಗಳಿಗೆ ಕಣ್ಣಾದಳು. ಅಪ್ಪನೂ ಆದಳು. ದುಡಿದಳು, ಸವೆದಳು. ಈಗ ಮತ್ತೆ ಬಂದ ಗಂಡ- "ಮಕ್ಕಳ ಅಪ್ಪನಾಗಿ ನಿನಗೂ ಆಸರೆಯಾಗಿರುವ ನನ್ನ ಕ್ಷಮಿಸು, ಸ್ವೀಕರಿಸು" ಎಂದ. ಆ ನಾಟಕಕ್ಕೆ ಸೋಲಲಿಲ್ಲ. ಆಕೆ. ''ನನಗೆ ನಿನ್ನಾಸರೆಯ ಅವಶ್ಯಕತೆ ಇರೋವಾಗ ನೀನು ಇರಲಿಲ್ಲ. ಈಗ ಬೇಕಿಲ್ಲ'' ಎಂದಳು. ಸಂಬಳದಾಸೆಗೆ ಬಂದಿದ್ದವನಿಗೆ ನಿರಾಸೆಯಾಯ್ತು. ಚಿಕ್ಕ ಮಕ್ಕಳನ್ನು ಬಿಟ್ಟು ಓಡಿಹೋದ ಆತನ ಬೇಜವಾಬ್ದಾರಿಗೆ ತಕ್ಕ ಪಾಠ ಕಲಿಸಿದಳಾ ದಿಟ್ಟೆ,
***
ಗುಣಮುಖ
ಆತನಿಗೆ ಅದೆಂಥ ಕಾಯಿಲೆಯೋ... ದಿನಕ್ಕೆಷ್ಟು ಉಲ್ಬಣಿಸುತ್ತಿದೆ. ಚಿಕ್ಕ ವಯಸ್ಸು, ದೊಡ್ಡ ಉದ್ಯೋಗ, ವಿದೇಶದ ಡಾಕ್ಟರೂ ಕೈ ಚೆಲ್ಲಿದಾಗ, ತಂದೆ-ತಾಯಿಯರಿಗೆ ಆತಂಕವಾಯಿತು. ಸಂತನೊಬ್ಬನ ಆಗಮನವಾಯಿತು. ಅವನಿಗೆ ಸೋತ ಮುಖಗಳ ಸ್ವಾಗತ ಸಿಕ್ಕಿತು. ''ಅದಾಯದ ಪ್ರತಿಶತ ಹತ್ತರಷ್ಟು ದಾನ ಮಾಡಿ'' ಎಂದಿತು ಸಂತವಾಣಿ. ಪ್ರತಿಶತ ಇಪ್ಪತ್ತರಷ್ಟು ದಾನ ಶುರುವಾಯ್ತು. ಆಶ್ಚರ್ಯ, ಆತ ದಿನ ದಿನಕ್ಕೆ ಗುಣಮುಖನಾದ. ಕೆಲ ಕಾಲದ ನಂತರ ಬಂದ ಸಂತ ಹೇಳಿದ-''ಗಳಿಸಿದ್ದೆಲ್ಲ ನಮ್ಮದೇ ಅಲ್ಲ, ಅತಿಯಾದ ಸಂಗ್ರಹ ಯೋಗ್ಯವಲ್ಲ".
***
ಸಂಜೆ ಹೂವು
ವಯಸ್ಸಿನ ವಸಂತದಲಿ ತನ್ನನ್ನು ನೋಡಲು ಬಂದ ಗಂಡುಗಳಿಗೆಲ್ಲಾ ಆಕೆ ಏನಾದರೊಂದು ಹೇಳಿ ಹೀಗಳೆದು ಬಿಡುತ್ತಿದ್ದಳು. ಈಗ ಮದುವೆಯಾಸೆಯ ಸಮಯಕ್ಕೆ ಬಂದ ಗಂಡುಗಳೆಲ್ಲಾ ಹಾಗೇ ಅನ್ನುತ್ತಾರೆ- 'ವಯಸಿಲ್ಲ ಸೊಗಸಿಲ್ಲ". ಹೀಗಾಗಿ ಆಕೆ, ಒಂಟಿತನದ ಕುಲುಮೆಯಲ್ಲಿ ಕುದ್ದು ಪಶ್ಚಾತ್ತಾಪದ ಬೆಂಕಿಯಲಿ ಬೆಂದು, ಹೇಮಂತ ದಾಟಿ ಶಿಶಿರದಲ್ಲಿ ಕೊನೆಯ ದಿನಗಳ ಎಣಿಸುತ್ತಿದ್ದಾಳೆ. 'ವಯಸ್ಸು, ಸೊಗಸು ಮುಂಜಾನೆಯ ಮಂಜಿನಂತೆ, ಅವು ಸಂಜೆಯವರೆಗೂ ಇರುವುದಿಲ್ಲ' ಎಂಬ ಅಪ್ರಿಯಸತ್ಯ 'ಈಗ ಅವಳಿಗೆ ಅರಿವಾಗತೊಡಗಿದೆ..!!
(ಸಂಗ್ರಹ)
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರಕಟಿಸಿದ: ನವೆಂಬರ್ ೨೭, ೨೦೨೫
|
ನವೀಕರಿಸಿದ: ಏಪ್ರಿಲ್ ೨೩, ೨೦೨೬