ಹೊಂದಾಣಿಕೆ
ಬರಹಗಾರರ ಬಳಗ
ನವೆಂಬರ್ ೨೮, ೨೦೨೫
೧೩ ವೀಕ್ಷಣೆಗಳು
ಬಾಗಿಲ ಕರೆಗಂಟೆ ಕೇಳಿದಾಗ ಜ್ವರದಿಂದ ಬಳಲಿ ವಿಶ್ರಾಂತಿಯಲ್ಲಿದ್ದವಳು ಎದ್ದು ಹೊರಗೆ ಬಂದೆ. ಕದ ತೆರೆದಾಗ ಬಂದ ನಾಲ್ವರಲ್ಲಿ ಇಬ್ಬರು ಪರಿಚಯದವರು. ವಯಸ್ಸಾದ ದಂಪತಿಗಳ ಪರಿಚಯವಿಲ್ಲ. ಅಕ್ಕಾ,"ಮನೆ ಬಾಡಿಗೆ ಕೊಡುತ್ತೀರಾ? ಇವರಿಗೆ ೫-೬ ತಿಂಗಳ ಮಟ್ಟಿಗೆ ಬಾಡಿಗೆಗೆ ಮನೆ ಬೇಕಿತ್ತು, ನಮ್ಮ ಬಂಧುಗಳಿವರು"ಎಂದರು. ದಂಪತಿಗಳ ಸಮಸ್ಯೆ ಏನು? ಮನೆಯಿಂದ ಹೊರಗೆ ಬರಲು ಕಾರಣವೇನು? ಧಾರಾಳ ತೋಟ ಮನೆ ಇದ್ದವರು, ಯಾಕೆ ಹೀಗೆ? ವಿಚಾರಿಸಿದೆ. ಮಾತನಾಡುತ್ತಾ ಹೋದಂತೆ ಬಂದ ದಂಪತಿಗಳು ನನಗೂ ದೂರದ ಸಂಬಂಧಿಗಳೆಂದು ತಿಳಿಯಿತು. ಒಬ್ಬ ಮಗ, ಎರಡು ಹೆಣ್ಣು ಮಕ್ಕಳು. ಮಗಳಂದಿರ ಮನೆಗೆ ಹೋಗಿ ನಿಲ್ಲಲು ಮನಸಿಲ್ಲ. ಮಗನದ್ದು ಸಮಸ್ಯೆ ಇಲ್ಲ. ಸೊಸೆಯೊಂದಿಗೆ ಐದು ವರ್ಷದಿಂದ ಸಂಬಂಧ ಸರಿಯಿಲ್ಲ, ದಿನನಿತ್ಯ ಕಾದಾಟ, ರಂಪಾಟ. ಮೊಮ್ಮಕ್ಕಳಾಗಿಲ್ಲ ಎನ್ನುವ ಚಿಂತೆಯೂ ಸೇರಿತ್ತು. ವಿಷಯ ಎಲ್ಲವನ್ನೂ ಕೇಳಿದಾಗ ಹಿರಿಯರ-ಕಿರಿಯರ ನಡುವಿನ ದೊಡ್ಡ ಬಿರುಕು ‘ಹೊಂದಾಣಿಕೆ’ ಇಲ್ಲದಿರುವುದೆಂದು ನನಗೆ ಮನದಟ್ಟಾಯಿತು. ವಯಸ್ಸಾದವರು ಸ್ವಲ್ಪವಾದರೂ ಹೊಂದಾಣಿಕೆಗೆ ಮನಸ್ಸು ಮಾಡಿದ್ದರೆ ಹೊರಗೆ ಬರುವ ಪ್ರಮೇಯ ಆಗುತ್ತಿರಲಿಲ್ಲ ಅನ್ನಿಸಿತು. ಕಿರಿಯರಂತೂ ಲವಲೇಶ ಹೇಳಿದ್ದನ್ನು ಕೇಳುವವರಲ್ಲ."ಮನೆಯಿಂದ ಹೊರಗೆ ಬಂದ ಮೇಲಾದರೂ ಮಗ ಸೊಸೆಗೆ ಬುದ್ಧಿ ಬರಲಿ" ಎಂದರು."ಆಳು- ಕಾಳು,ಹಸುಗಳು ಹಟ್ಟಿ, ತೋಟದ ಕೆಲಸ, ಹಳ್ಳಿಯ ದೊಡ್ಡ ಮನೆಯ ಕೆಲಸ, ಬಂಧು ಬಳಗ ಜವಾಬ್ದಾರಿ ಹೆಗಲಿಗೇರಲಿ, ಆಗ ಗೊತ್ತಾಗಬಹುದು" ಎಂದರು. ನಾನೇನು ಹೇಳಿದರೂ ಕೇಳುವ ಸ್ಥಿತಿಯಲ್ಲಿರಲಿಲ್ಲ ಅವರು. ಸ್ವಲ್ಪ ಹೊಂದಾಣಿಕೆ ಮಾಡಿಕೊಂಡಿದ್ದರೆ, ಈ ಇಳಿ ವಯಸ್ಸಿನಲ್ಲಿ ಹೀಗಾಗುತ್ತಿರಲಿಲ್ಲ ಎಂದುಕೊಂಡೆ.
-ರತ್ನಾ ಕೆ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ನವೆಂಬರ್ ೨೮, ೨೦೨೫
|
ನವೀಕರಿಸಿದ: ಏಪ್ರಿಲ್ ೨೩, ೨೦೨೬