ಆತಂಕಗಳು ಅಂತ್ಯವಾಗಲಿ
ಕೆ.ಪಿ.ಅಶ್ವಿನ್ ರಾವ್
ನವೆಂಬರ್ ೨೯, ೨೦೨೫
೧೩ ವೀಕ್ಷಣೆಗಳು
ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಕಡೂರು ಗ್ರಾಮದ ಜಮೀನಿನಲ್ಲಿ ಮತ್ತೊಮ್ಮೆ ಚಿರತೆ ಕಾಣಿಸಿಕೊಂಡು ಜನರ ಆತಂಕವನ್ನು ತೀವ್ರಗೊಳಿಸಿದೆ. ಕೊಡಗು, ಹಾಸನ ಜಿಲ್ಲೆಗಳ ಸಾಕಷ್ಟು ಭಾಗಗಳಲ್ಲಿ, ಅರಣ್ಯ ಪ್ರದೇಶಗಳಿಗೆ ತಾಗಿಕೊಂಡಂತಿರುವ ಜನವಸತಿ ಪ್ರದೇಶಗಳಿಗೆ ಆನೆ ಮತ್ತಿತರ ಕಾಡುಮೃಗಗಳು ನುಗ್ಗಿ ರಾದ್ಧಾಂತ ಮಾಡುವ ಸುದ್ದಿಗಳನ್ನು ಆಗಾಗ ಕೇಳುತ್ತಲೇ ಇರುತ್ತೇವೆ. ಇಂಥ ಘಟನೆಗಳು ವರದಿಯಾದಾಗೆಲ್ಲಾ, ಸಂಬಂಧಿತ ಸ್ಥಳೀಯ ಆಳುಗ ವ್ಯವಸ್ಥೆ ಅಥವಾ ಆರಣ್ಯ ಇಲಾಖೆಯ ಸಿಬ್ಬಂದಿಗಳು ಕ್ರಮಗಳನ್ನು ಕೈಗೊಂಡಿರುವ ನಿದರ್ಶನಗಳೂ ಇವೆ. ಆದರೆ, ಇದನ್ನೊಂದು ತಾತ್ಪೂರ್ತಿಕ ಸಮಸ್ಯೆಯಾಗಿ ನೋಡದೆ, ದೂರಗಾಮಿ ನೆಲೆಯಲ್ಲಿ ನೋಡಬೇಕಾದ ಅಗತ್ಯವಿದೆ. ಅಷ್ಟಕ್ಕೂ, ಅರಣ್ಯಗಳಲ್ಲಿ ತಮ್ಮ ಪಾಡಿಗೆ ತಾವಿರುವ ವನ್ಯಜೀವಿಗಳು, ಜನವಸತಿ ಪ್ರದೇಶಗಳಿಗೆ ಹೀಗೆ ಸುಖಾಸುಮ್ಮನೆ ನುಗ್ಗಿ ದಾಂಧಲೆ ಮಾಡುವುದು, ಜನರಲ್ಲಿ ತಲ್ಲಣವನ್ನು ಹುಟ್ಟುಹಾಕುವುದು ಏಕೆ? ಎಂಬ ಪ್ರಶ್ನೆಯನ್ನು ಸಂಬಂಧಪಟ್ಟವರು ಸ್ವತಃ ಕೇಳಿಕೊಳ್ಳಬೇಕು. ರಸ್ತೆ ಅಗಲೀಕರಣ, ಎಸ್ ಇ ಜಡ್ ಗಳ ಸ್ಥಾಪನೆ, ಕೈಗಾರಿಕೀಕರಣ ಮುಂತಾದ ಹಣೆಪಟ್ಟಿಗಳ ಅಡಿಯಲ್ಲಿ ವನ್ಯಜೀವಿಗಳ ಆವಾಸ ಸ್ಥಾನವನ್ನು 'ನಾಗರಿಕರು' ಎನಿಸಿಕೊಂಡ ಮನುಷ್ಯರು ಅತಿಕ್ರಮಣ ಮಾಡುತ್ತಿರುವುದೇ ವನ್ಯಜೀವಿಗಳ ಇಂಥ ನಡೆಗೆ ಕಾರಣವಾಗಿದೆ ಎನ್ನಲಡ್ಡಿಯಿಲ್ಲ. ವನ್ಯಜೀವಿಗಳು ಆಹಾರವನ್ನೋ, ಸಂಗಾತಿಯನ್ನೋ ಅರಸಿಕೊಂಡು ಒಂದು ಪ್ರದೇಶದಿಂದ ಇನ್ನೊಂದಕ್ಕೆ ಹಾದುಹೋಗಲು ಬಳಸುವಂಥ ನೆಲೆಗಳಿಗೆ ಕೂಡ ಮನುಷ್ಯರ ಅತಿಕ್ರಮಣವಾದರೆ, ಅವು ಕೆರಳುವುದರಲ್ಲಿ ಸಂದೇಹವೇ ಇಲ್ಲ. ಯಾವುದೇ ಅಭಿವೃದ್ಧಿ ಯೋಜನೆಗಳ ಘೋಷಣೆ/ಅನುಷ್ಠಾನಕ್ಕೂ ಮುನ್ನ ಪರಿಸರ ಪ್ರೇಮಿಗಳ, ಪ್ರಾಣಿಗಳ ಹಿತರಕ್ಷಕರ ಅಭಿಪ್ರಾಯವನ್ನು ಪಡೆಯದಿರುವುದೂ ಇದಕ್ಕೊಂದು ಕಾರಣವಿರಬಹುದು. ಒಟ್ಟಿನಲ್ಲಿ, ಈ ಭೂಮಿ ಮೇಲಿನ ಪ್ರತಿಯೊಂದು ಜೀವಿಗೂ ತನ್ನ ಆಸ್ತಿತ್ವವನ್ನು ಕಾಪಾಡಿ ಕೊಳ್ಳುವ ಹಕ್ಕಿದೆ ಎಂಬುದನ್ನರಿತು, ಅದಕ್ಕೆ ಧಕ್ಕೆಯಾಗದಂತೆ ಅಭಿವೃದ್ಧಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕಿರುವುದು ವರ್ತಮಾನದ ಅಗತ್ಯವಾಗಿದೆ.
ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೨೯-೧೧-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರಕಟಿಸಿದ: ನವೆಂಬರ್ ೨೯, ೨೦೨೫
|
ನವೀಕರಿಸಿದ: ಏಪ್ರಿಲ್ ೨೩, ೨೦೨೬