ಗಾನ ವಿಜ್ಞಾನ ಚೇತನ (ಭಾಗ ೫) - ಎಂ. ಗೋಪಾಲಕೃಷ್ಣ ಅಡಿಗ
ಕೆ.ಪಿ.ಅಶ್ವಿನ್ ರಾವ್
ಡಿಸೆಂಬರ್ ೦೩, ೨೦೨೫
೧೭ ವೀಕ್ಷಣೆಗಳು
ಕನ್ನಡದಲ್ಲಿ ನವ್ಯಕಾವ್ಯಕ್ಕೆ ನಾಂದಿ ಹಾಡಿದ ಮೊಗೇರಿ ಗೋಪಾಲಕೃಷ್ಣ ಅಡಿಗ ಅವರನ್ನು ‘ಒಂದು ಜನಾಂಗದ ಕಣ್ಣು ತೆರೆಸಿದ ಕವಿ’ ಎಂದು ಗುರುತಿಸಲಾಗುತ್ತಿತ್ತು. ಅಡಿಗರು ೧೯೧೮ರ ಫೆಬ್ರುವರಿ ೧೮ರಂದು ಜನಿಸಿದರು. ತಂದೆ ರಾಮಪ್ಪ ಮತ್ತು ತಾಯಿ ಗೌರಮ್ಮ.
ಬೈಂದೂರಿನಲ್ಲಿ ಶಾಲಾ ಶಿಕ್ಷಣ, ಮೈಸೂರಿನಲ್ಲಿ ಕಾಲೇಜು ವಿದ್ಯಾಭ್ಯಾಸ ಆಯಿತು. ಬಿ.ಎ. ಆನರ್ಸ್ ಪದವಿ ಗಳಿಸಿದ ನಂತರ ಚಿತ್ರದುರ್ಗ, ದಾವಣಗೆರೆ, ಬೆಂಗಳೂರು ಪ್ರೌಢಶಾಲೆಗಳಲ್ಲಿ ಅಧ್ಯಾಪಕರಾಗಿ ಕೆಲಸಮಾಡಿದ್ದರು. ಆಮೇಲೆ ಮೈಸೂರು ಮಹಾರಾಜ ಕಾಲೇಜಿನಲ್ಲಿ ಓದಿ ಎಂ.ಎ. ಪದವಿ ಗಳಿಸಿದರು. ಮೈಸೂರಿನ ಶಾರದಾವಿಲಾಸ್ ಕಾಲೇಜಿನಲ್ಲಿ ಉಪನ್ಯಾಸಕ, ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ಸಾಗರದ ಎಲ್.ಬಿ. ಕಾಲೇಜಿನಲ್ಲಿ ಮತ್ತು ಉಡುಪಿಯ ಪೂರ್ಣಪ್ರಜ್ಞಾ ಕಾಲೇಜಿನಲ್ಲಿ ಪ್ರಿನ್ಸಿಪಾಲರಾಗಿ ಇವರು ಕಾರ್ಯನಿರ್ವಹಿಸಿದ್ದರು. ಅನಂತರ ೧೯೭೧ರಲ್ಲಿ ನ್ಯಾಷನಲ್ ಬುಕ್ ಟ್ರಸ್ಟಿನ ನಿರ್ದೇಶಕ ಆಗಿದ್ದರು. ಇದಾದ ನಂತರ ೧೯೭೧ರಲ್ಲಿ ಜನಸಂಘದ ಅಭ್ಯರ್ಥಿಯಾಗಿ ಸಂಸತ್ತಿನ ಚುನಾವಣೆಗೆ ಸ್ಪರ್ಧಿಸಿದ್ದರು. ಸಿಮ್ಲಾದ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ ಸ್ಟಡೀಸ್‍ನಲ್ಲಿ ರಿಸರ್ಚ್ ಫೆಲೋ ಆಗಿ ಕೆಲಸಮಾಡಿದರು.
‘ಸಾಕ್ಷಿ’ ಎಂಬ ತ್ರೈಮಾಸಿಕವನ್ನು ಕೆಲಕಾಲ ನಡೆಸಿದ ಇವರು ಕನ್ನಡದಲ್ಲಿ ಶ್ರೇಷ್ಠ ಕವನಗಳನ್ನೂ ವಿಮರ್ಶಾಕೃತಿಗಳನ್ನೂ ಬರೆದಿದ್ದಾರೆ. ಇವರ ಸೇವೆಗೆ ಮೆಚ್ಚಿ ಹಲವಾರು ಪ್ರಶಸ್ತಿಗಳು ಬಂದಿವೆ. ರಾಜ್ಯ ಸರಕಾರ ‘ವರ್ಧಮಾನ’ ಕವನ ಸಂಕಲನಕ್ಕೆ ಪ್ರಶಸ್ತಿ, ಕೇಂದ್ರ ಸರಕಾರದ ಪ್ರಶಸ್ತಿ, ೧೯೯೩ರಲ್ಲಿ ಕರ್ನಾಟಕ ಸರಕಾರ ಪಂಪ ಪ್ರಶಸ್ತಿ, ಮಧ್ಯಪ್ರದೇಶ ಸರಕಾರದ ಕಬೀರ್ ಸನ್ಮಾನ ಪ್ರಶಸ್ತಿ ಇವರಿಗೆ ಲಭಿಸಿತ್ತು. ೧೯೭೯ರಲ್ಲಿ ಧರ್ಮಸ್ಥಳದಲ್ಲಿ ನಡೆದ ೫೧ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಅಡಿಗರು ೧೯೯೨ರ ನವೆಂಬರ್ ೧೪ರಂದು ನಿಧನರಾದರು.
ಮುಖ್ಯ ಕೃತಿಗಳು: ಭಾವತರಂಗ, ಕಟ್ಟುವೆವು ನಾವು, ನಡೆದುಬಂದ ದಾರಿ, ಭೂಮಿಗೀತ, ಚಂಡಮದ್ದಲೆ, ವರ್ಧಮಾನ ಇತ್ಯಾದಿ ಕವನಸಂಕಲಗಳು. ಅನಾಥೆ, ಆಕಾಶದೀಪ (ಕಾದಂಬರಿಗಳು), ಮಣ್ಣಿನ ವಾಸನೆ, ವಿಚಾರಪಥ, ಕನ್ನಡದ ಅಭಿಮಾನ (ಗದ್ಯ ಲೇಖನಗಳು), ಹುಲ್ಲಿನ ದಳಗಳು, ಭೂಗರ್ಭಯಾತ್ರೆ, ಇತಿಹಾಸಚಿತ್ರ (ಅನುವಾದಗಳು).
***
ಬಾಂಧವ್ಯ
ಪ್ರತಿಯೊಂದು ಜೀವಕ್ಕು ಇನ್ನೊಂದು ಪೂರಕವಯ್ಯಾ,
ಜೀವ ಜೀವದ ನಂಟು ಬ್ರಹ್ಮಗಂಟು.
ಇಲ್ಲಿ ನೀ ನೆಲ, ನೀರು, ಗಾಳು, ಬಾಗಿದ ಬಾನು
ಎಲ್ಲರಿಗು ; ನಮಗೆ ನಿಮಗಷ್ಟೇ ಅಲ್ಲ ;
ಒಂದೆ ಜೀವದ ಅನಂತ ರೂಪಾಂತರದ ವಿಲಾಸ,
ವಿಕಾಸಕ್ಕೆ ಏಕತೆಯ ಅರಿವಗತ್ಯ.
ನಾಯಿಗಳು, ಬೆಕ್ಕುಗಳು, ಅಳಿಲು, ಹಸು, ಕುರಿ, ಕುದುರೆ ;
ಹುಲಿ, ಸಿಂಹ, ನರಿ, ತೋಳ, ಹಾವು, ಚೇಳು ;
ತೆಂಗು, ಹಲಸು, ಮಾವು ; ಬೇಳು, ತೊಣಚಿ, ಜಾಲಿ -
ನಮ್ಮೊಳಡಗಿರುವ ಬಾಂಧವರು.
ದ್ವೇಷಹಿಂಸೆಗಳಾಚೆ, ಭಯಸಹಾನುಭೂತಿಗಳಾಚೆ
ಬಾಂಧವ್ಯದರಿವು ಪಡಿ ಮೂಡಿದಾಗ ;
ಪರಿಪೂರ್ಣವಾಗಬಲ್ಲುದು ಇಲ್ಲಿನೀ ಬದುಕು
ಪ್ರೀತಿಸುವುದನ್ನು ತಿಳಿ, ಬದುಕಲು ಕಲಿ.
ಕೊಲ್ಲುವುದು ಮನುಷ್ಯ ಲಕ್ಷಣವಲ್ಲ, ಹೆಚ್ಚಳವಲ್ಲವೇ ಅಲ್ಲ,
ಬದುಕುವುದು, ಬದುಕ ಬಿಡುವುದು, ಬೆಳೆವುದು -
ಮಾನವತ್ವದ ಮಹತ್ವ ಇಲ್ಲಿ ಇದೆ ತಿಳಿಯೋಣ ;
ಒಂದು ಅಳಿದರೆ ಉಳಿದುದೆಲ್ಲ ಮುಕ್ಕು.
(‘ಗಾನ ವಿಜ್ಞಾನ ಚೇತನ’ ಸಂಕಲನದಿಂದ ಆಯ್ದ ಕವನ)
ಪ್ರಕಟಿಸಿದ: ಡಿಸೆಂಬರ್ ೦೩, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬