ಪುಸ್ತಕಗಳನ್ನು ಓದುವ ಅಭ್ಯಾಸ ಕಡಿಮೆಯಾಗುತ್ತಿದೆ ಎಂಬುದು ಹಲವರ ಅನಿಸಿಕೆ. ಹಾಗಿರುವಾಗ ನಮ್ಮ ದೇಶದ ಕೆಲವು ನಗರಗಳಲ್ಲಿ ಓದುಗರ ಕ್ಲಬ್-ಗಳು ಸಕ್ರಿಯವಾಗಿವೆ ಹಾಗೂ ಅವುಗಳ ಸದಸ್ಯರ ಸಂಖ್ಯೆ ವರುಷದಿಂದ ವರುಷಕ್ಕೆ ಹೆಚ್ಚುತ್ತಿದೆ ಎಂಬುದು ಸಂತೋಷದ ಸಂಗತಿ. ಅಂತಹ ಕೆಲವು ಓದುಗರ ಕ್ಲಬ್-ಗಳ ಮಾಹಿತಿ ಈ ಬರಹದಲ್ಲಿದೆ.
ಕಬ್ಬನ್ ಬುಕ್ ಕ್ಲಬ್
ಬೆಂಗಳೂರಿನ 300 ಎಕರೆ ವಿಸ್ತಾರದ ಕಬ್ಬನ್ ಪಾರ್ಕ್ ಸುಪ್ರಸಿದ್ಧ. ಪ್ರತಿದಿನವೂ ಅಲ್ಲಿ ಸುತ್ತಾಡಲು, ನಡೆಯಲು, ವಿಶಾಲ ಮರಗಳ ನೆರಳಿನಲ್ಲಿ ವಿರಮಿಸಲು ನೂರಾರು ಜನರು ಬರುತ್ತಾರೆ. ಅಲ್ಲೀಗ ಕಬ್ಬನ್ ಬುಕ್ ಕ್ಲಬ್ ಸದಸ್ಯರೂ ಒಟ್ಟು ಸೇರುತ್ತಾರೆ. ಇದು ಡಿಸೆಂಬರ್ 2022ರಲ್ಲಿ ಶ್ರುತಿ ಷಾ ಮತ್ತು ಹರ್ಷ ಸ್ನೇಹಾಂಶು ಆರಂಭಿಸಿದ ಕ್ಲಬ್.
“ಬನ್ನಿ, ಕಬ್ಬನ್ ಪಾರ್ಕಿನ ಹಸುರು ಹುಲ್ಲು ಹಾಸಿನಲ್ಲಿ ಕುಳಿತು ಓದೋಣ” ಎಂದು ಅವರು ತಮ್ಮ ಆಪ್ತರಿಗೊಂದು ಸಂದೇಶ ಕಳುಹಿಸಿದರು. ಮುಂದಿನ ವಾರ ಆರು ಜನರು ಅಲ್ಲಿ ಸೇರಿದರು. ಈಗ ಪ್ರತಿ ಶನಿವಾರ ಬೆಳಗ್ಗೆ 9 ಗಂಟೆಯಿಂದ ಅಪರಾಹ್ನ 2 ಗಂಟೆಯ ವರೆಗೆ ನೂರಕ್ಕಿಂತ ಜಾಸ್ತಿ ಸದಸ್ಯರು ಒಟ್ಟು ಸೇರುತ್ತಿದ್ದಾರೆ. ಕೆಲವರು “ಕಿಂಡಲ್”ನಲ್ಲಿ ಓದಿದರೆ, ಇನ್ನು ಕೆಲವರು ಆಡಿಯೋ ಪುಸ್ತಕ ಅಥವಾ ಮುದ್ರಿತ ಪುಸ್ತಕ ಓದುತ್ತಾರೆ. ಹುಲ್ಲು ಹಾಸಿನಲ್ಲಿ ಕುಳಿತು ಕೆಲವರು ಓದಿದರೆ, ಬೆಡ್-ಷೀಟ್ ಹಾಸಿ, ಅದರಲ್ಲಿ ಕುಳಿತು ಓದುವವರು ಕೆಲವರು. ಒಟ್ಟಾಗಿ ಕುಳಿತು, ತಮ್ಮ ಆಸಕ್ತಿಯ ವಿಷಯದ ಬಗ್ಗೆ ಮೌನವಾಗಿ ಓದುವುದಷ್ಟೇ ಉದ್ದೇಶ. ಈ ಗುಂಪನ್ನು ಸೇರಲು ಯಾವುದೇ ಪ್ರವೇಶ ನಿಯಮ ಅನುಸರಿಸಬೇಕಾಗಿಲ್ಲ. ನಿಮಗೆ ಒಟ್ಟಾಗಿ ಓದುವ ಆಸಕ್ತಿ ಇದ್ದರೆ ಅಲ್ಲಿ ಹೋಗಿ ಇತರರೊಂದಿಗೆ ಕುಳಿತು ಓದಿದರಾಯಿತು. ಪದಗಳು ಆಸಕ್ತರನ್ನು ಒಟ್ಟು ಸೇರಿಸುವ ಹಸುರು ಪರಿಸರದಲ್ಲಿ ಅನಿರೀಕ್ಷಿತ ಸ್ನೇಹ ಅರಳುವುದೇ ಚಂದ.
ಢೆಲ್ಲಿ ಬುಕ್ ಲವರ್ಸ್
ಇದು ನಮ್ಮ ದೇಶದ ದೊಡ್ಡ ಪುಸ್ತಕ ಪ್ರೇಮಿಗಳ ಸಮುದಾಯ. ಇದರ ಸದಸ್ಯರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಈಗ 8,000 ದಾಟಿದೆ. ಇದನ್ನು 2012ರಲ್ಲಿ ಶುರು ಮಾಡಿದವರು ಕುನಾಲ್ ಗುಪ್ತಾ ಮತ್ತು ಮೀನಾಕ್ಷಿ ಗೋಯಲ್. ಇದರ ಚಟುವಟಿಕೆಗಳು ಓದುವುದಕ್ಕೆ ಸೀಮಿತವಾಗಿಲ್ಲ. ಲೇಖಕರೊಡನೆ ಸಂವಾದ, ಬರವಣಿಗೆ ಶಿಬಿರ ಮತ್ತು ಪುಸ್ತಕಗಳ ಲೋಕಾರ್ಪಣೆಗಳನ್ನೂ ಇದು ಸಂಘಟಿಸುತ್ತದೆ. ಓದುವುದನ್ನು ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಮುಕ್ತ ಚರ್ಚೆ ಪ್ರೋತ್ಸಾಹಿಸುವುದು ಇದರ ಮುಖ್ಯ ಉದ್ದೇಶ.
ಹೈದರಾಬಾದ್ ಬುಕ್ ಕ್ಲಬ್
ಸಾಗರ ಶರ್ಮಾ ಇದನ್ನು 2010ರಲ್ಲಿ ಸ್ಥಾಪಿಸಿದರು. ಈಗ ಇದರ ಸದಸ್ಯರ ಸಂಖ್ಯೆ 2,000ಕ್ಕಿಂತ ಅಧಿಕ. ಇದರ ಸದಸ್ಯರಲ್ಲಿ ಓದುವವರೂ ಬರಹಗಾರರೂ ಇದ್ದಾರೆ. ಇದನ್ನು ಸೇರಲು ವಯಸ್ಸಿನ ನಿರ್ಬಂಧವಿಲ್ಲ. ಲೇಖಕರೊಂದಿಗೆ ಸಂವಾದ ಮತ್ತು ಪುಸ್ತಕಗಳ ಲೋಕಾರ್ಪಣೆಗಳನ್ನು ಇದು ಆಯೋಜಿಸುತ್ತದೆ. ಇದು ಪ್ರತಿ ತಿಂಗಳು ನಡೆಸುವ ಕಾರ್ಯಕ್ರಮ: ಆಯ್ಕೆ ಮಾಡಿದ ಪುಸ್ತಕದ ಬಗ್ಗೆ ಮುಕ್ತ ಚರ್ಚೆ.
ಬೌಂಡ್ ಟುಗೆದರ್, ಮುಂಬಯಿ
ಇದು ಡೆಲ್-ನಾಜ್ ಜೋಷಿ ಮತ್ತು ಆರತಿ ಚಾಮ್ಡೋಕ್ ಕಪೂರ್ ಇವರಿಂದ ಆರಂಭಿಸಲ್ಪಟ್ಟ ಕ್ಲಬ್. ಮತದಾನದ ಮೂಲಕ ಪ್ರತಿ ತಿಂಗಳು ಒಂದು ಪುಸ್ತಕವನ್ನು ಚರ್ಚೆಗಾಗಿ ಆಯ್ಕೆ ಮಾಡಲಾಗುತ್ತದೆ. ಪರ್ಯಾಯವಾಗಿ ಬಾಂದ್ರಾ ಮತ್ತು ಕೊಲಾಬಾ ನಡುವಣ ಯಾವುದೇ ಹೋಟೆಲ್ ಅಥವಾ ಕೆಫೆಯಲ್ಲಿ ಇದರ ಸದಸ್ಯರು ತಿಂಗಳಿಗೊಮ್ಮೆ ಶನಿವಾರ ಅಪರಾಹ್ನ ಒಟ್ಟು ಸೇರುತ್ತಾರೆ. ಆಸಕ್ತ ಓದುಗರು ಆಯ್ಕೆಯಾದ ಪುಸ್ತಕದ ಬಗ್ಗೆ ಸಂವಾದ ನಡೆಸಲು ತಯಾರಾಗಿ ಬರುತ್ತಾರೆ.
ಸೈಲೆಂಟ್ ಬುಕ್ ಕ್ಲಬ್
ಢೆಲ್ಲಿ ಮತ್ತು ಗುರುಗ್ರಾಮದ ಈ ಬುಕ್ ಕ್ಲಬ್ ಶುರು ಮಾಡಿದವರು ರಚನಾ ಕಾಲ್-ರಾ, ಸಪ್ಟಂಬರ್ 2019ರಲ್ಲಿ. ಈಗ ಇದರ ಸದಸ್ಯರ ಸಂಖ್ಯೆ 700ಕ್ಕಿಂತ ಜಾಸ್ತಿ. ಹೆಸರೇ ಸೂಚಿಸುವಂತೆ, ಇದು ತನ್ನ ಸದಸ್ಯರಿಗೆ ಒಟ್ಟು ಸೇರಿ, ಮೌನವಾಗಿ ಒಂದು ಗಂಟೆ ಓದುವ ಅವಕಾಶ ಒದಗಿಸುತ್ತದೆ. ನಿಗದಿತ ಒಂದು ಗಂಟೆಯ ನಂತರ ಸದಸ್ಯರು ಓದು ಮುಂದುವರಿಸಬಹುದು, ತಮ್ಮತಮ್ಮಲ್ಲಿ ಮಾತನಾಡಬಹುದು ಅಥವಾ ಹೊರಟು ಹೋಗಬಹುದು. ಸದಸ್ಯರಲ್ಲಿ ಪುಸ್ತಕಗಳನ್ನು ಓದುವ ಮತ್ತು ಪುಸ್ತಕಗಳ ಬಗ್ಗೆ ಮಾತನಾಡುವುದನ್ನು ಪ್ರೋತ್ಸಾಹಿಸುವುದು ಇದರ ಮುಖ್ಯ ಉದ್ದೇಶ.
ಐ. ಐ. ಎಸ್. ಇ. ಆರ್. ಲಿಟರರಿ ಕ್ಲಬ್, ಕೋಲ್ಕತಾ
ಇದು ಭಾರತೀಯ ವಿಜ್ಞಾನ, ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ವಿದ್ಯಾರ್ಥಿಗಳು ಸಂಘಟಿಸಿದ ಓದುಗರ ಕ್ಲಬ್. ತಿಂಗಳಿಗೊಂದು ಪುಸ್ತಕವನ್ನು ಚರ್ಚೆಗಾಗಿ ಆಯ್ಕೆ ಮಾಡುತ್ತಾರೆ. ತಿಂಗಳ ಕೊನೆಯಲ್ಲಿ, ಸದಸ್ಯರು ಒಟ್ಟು ಸೇರಿ, ಆ ಪುಸ್ತಕದ ವಿವಿಧ ಸಂಗತಿಗಳ ಬಗ್ಗೆ ಮುಕ್ತವಾಗಿ ಚರ್ಚಿಸುತ್ತಾರೆ. ಇದಲ್ಲದೆ, ಕ್ವಿಜ್, ಚರ್ಚಾ ಕೂಟ, ವೇದಿಕೆಯಲ್ಲಿ ಸಂವಾದ ಮತ್ತು ಸಣ್ಣ ಕತೆ ಬರೆಯುವ ಸ್ಪರ್ಧೆಗಳನ್ನು ಇದು ಏರ್ಪಡಿಸುತ್ತದೆ.
ಕೊಚ್ಚಿ ರೀಡ್ಸ್
ಕೇರಳದ ಕೊಚ್ಚಿಯ ಪನಂಪಿಲ್ಲೈ ನಗರ ಉದ್ಯಾನದಲ್ಲಿ ಪ್ರತಿ ದಿನ ಸಂಜೆ 4ರಿಂದ 6 ಗಂಟೆಯ ವರೆಗೆ ನಡೆಯುವ ವಿದ್ಯಮಾನವನ್ನು ನೀವು ನೋಡಿಯೇ ನಂಬಬೇಕು. ಆಗ ಅಲ್ಲಿ ಹಲವಾರು ಜನರು ಪುಸ್ತಕ ಓದುತ್ತಾ ಇರುತ್ತಾರೆ. ಈ ಓದುಗರ ಕ್ಲಬ್ ಪ್ರಾರಂಭಿಸಿದವರು ಗೋಪಿಕಾ ಮಂಜೂಷಾ. ಅವರ ಆಹ್ವಾನದ ಅನುಸಾರ ಮೊದಲ ಬಾರಿ ಅಲ್ಲಿ ಓದಲಿಕ್ಕಾಗಿ ಒಟ್ಟು ಸೇರಿದವರು 15 ಜನರು. ಅಷ್ಟು ಸಂಖ್ಯೆಯ ಓದುಗರು ಬಂದದ್ದು ನಿಜಕ್ಕೂ ಅಚ್ಚರಿ ಎನ್ನುತ್ತಾರೆ ಅವರು. ಇದನ್ನು ಶುರು ಮಾಡಲು ಅವರಿಗೆ ಪ್ರೇರಣೆ ಬೆಂಗಳೂರಿನ ಕಬ್ಬನ್ ಬುಕ್ ಕ್ಲಬ್.
ನಮ್ಮ ದೇಶದಲ್ಲಿ ಇಂತಹ ಇನ್ನೂ ಹಲವು ಓದುಗರ ಕ್ಲಬ್-ಗಳು ಇರಬಹುದು. ಈ ಎಲ್ಲ ಸಮುದಾಯಗಳು ಓದುವ ಅಭ್ಯಾಸ ಬೆಳೆಸಲಿಕ್ಕಾಗಿ ಸದ್ದಿಲ್ಲದೆ ಮಾಡುತ್ತಿರುವ ಕೆಲಸಕಾರ್ಯಗಳಿಗೆ ಬೆಲೆ ಕಟ್ಟಲಾಗದು. ಯಾಕೆಂದರೆ, ಸಮಾನ ಮನಸ್ಕರೊಂದಿಗೆ ಓದುವ ಮತ್ತು ಪುಸ್ತಕಗಳ ಬಗ್ಗೆ ಮಾತನಾಡುವುದು ಸಂತೋಷದ ಸಂಗತಿ. ನೀವೂ ನಿಮ್ಮೂರಿನಲ್ಲಿ ಇಂತಹ ಒಂದು ಓದುಗರ ಕ್ಲಬ್ ಶುರು ಮಾಡಬಹುದಲ್ಲವೇ?
ಫೋಟೋ: ಬೆಂಗಳೂರಿನ ಕಬ್ಬನ್ ಪಾರ್ಕಿನಲ್ಲಿ ಓದಿನಲ್ಲಿ ತಲ್ಲೀನರಾಗಿರುವ ಕಬ್ಬನ್ ಬುಕ್ ಕ್ಲಬ್ ಸದಸ್ಯರು
ಓದುಗರ ಕ್ಲಬ್-ಗಳು: ಓದುವ ಹವ್ಯಾಸ ಬೆಳೆಸುವ ವೇದಿಕೆಗಳು
ಅಡ್ಡೂರು ಕೃಷ್ಣ ರಾವ್
ಡಿಸೆಂಬರ್ ೨೧, ೨೦೨೫
೧೦ ವೀಕ್ಷಣೆಗಳು
ಪ್ರಕಟಿಸಿದ: ಡಿಸೆಂಬರ್ ೨೧, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬