ಆಗಾಗ ನೆನಪಾದಾಗ ಮನೆಗಿಂತ 500 ಮೀಟರ್ ದೂರದಲ್ಲಿರುವ ಗದ್ದೆಯ ಬದುವಿನ ಪಕ್ಕದಲ್ಲಿ ಕಟ್ಟಿರುವ ಪುಟ್ಟ ಗೋರಿಯ ಬಳಿ ಕುಳಿತು ಅವರಿಬ್ರು ಅಳುತ್ತಾರೆ. ಕೈಮುಗಿದು ಬೇಡಿಕೊಳ್ಳುತ್ತಾರೆ, ಒಳಿತಾಗಲಿ ನಮಗೆ ನಿಮ್ಮ ಆಶೀರ್ವಾದ ಬೇಕು ಅಂತ ಬಯಸುತ್ತಾರೆ. ಅವರಿಬ್ಬರೂ ಅಪ್ಪ-ಅಮ್ಮನ ಜೊತೆಯಾಗಿ ಕಳೆದುಕೊಂಡವರು. ಬೆಳೆದು ದೊಡ್ಡವರಾಗುವವರೆಗೂ ಅವರ ಆಶ್ರಯದಲ್ಲೇ ಬೆಳೆದವರಿಗೆ ಬೆಳೆಯುತ್ತಾ ಹೋದ ಹಾಗೆ ತಂದೆ ತಾಯಿಗಳ ಬದುಕಿನ ಪ್ರತಿ ಕ್ಷಣದ ಸ್ಥಿತಿ ಅರ್ಥವಾಗಲಿಲ್ಲ .ಅವರ ಗದರಿವಿಕೆಯ ಹಿಂದಿನ ಪ್ರೀತಿ ಕಾಣಲಿಲ್ಲ ಬೇಡ ಎನ್ನುವುದರ ಹಿಂದಿನ ಭಯ ತೋರಲಿಲ್ಲ ಅವರ ಕಣ್ಣೆದುರಿಗೆ ಇದ್ದು ತಮ್ಮ ಒಳಿತನ್ನು ತಮ್ಮ ತಂದೆ ತಾಯಿ ಬಯಸ್ತಾ ಇಲ್ಲ ಅನ್ನುವ ಕಾರಣಕ್ಕೆ ದೂರ ಸರಿಸಿ ಬಿಟ್ಟರು. ಒಂದಿನಿತೂ ಪ್ರೀತಿ ಅಕ್ಕರೆ ಮಮತೆಯನ್ನು ಕೊಡದೆ ಪ್ರಾಣಿಗಿಂತ ಕಡೆಯಾಗಿ ನಡೆಸಿಕೊಂಡ ನೋವಿನಿಂದಲೇ ಎರಡು ಜೀವಗಳು ಒಂದೇ ದಿನ ತಮ್ಮ ಪ್ರಾಣವನ್ನು ಕಳೆದುಕೊಂಡವು. ಈಗ ಕಾಲ ಉರುಳಿದೆ ತಂದೆ ತಾಯಿ ಮಾಡಿದ ಎಲ್ಲ ಕೆಲಸಗಳು ಇವರಿಗೆ ಅರ್ಥವಾಗುತ್ತಿದೆ. ಹಾಗಾಗಿ ತಾವು ಮಾಡಿದ ತಪ್ಪಿಗೆ ಆ ಗೋರಿಯ ಬಳಿ ನಿಂತು ಕ್ಷಮೆ ಕೇಳುತ್ತಿದ್ದಾರೆ, ಒಳಗಿದ್ದ ಜೀವಗಳು ಹೊರಗೆ ಬರುವುದಕ್ಕೆ ಸಾಧ್ಯವಿಲ್ಲ ಹೊರಗಿದ್ದವರು ಒಳ ಹೋಗಲು ಸಾಧ್ಯವಿಲ್ಲ ಇದ್ದಾಗ ಕಣ್ಣೀರು ಒರೆಸದವರು ಇಲ್ಲವಾದ ಮೇಲೆ ಕಣ್ಣೀರು ಹರಿಸಿ ಪ್ರಯೋಜನವೇನು? - ಧೀರಜ್ ಬೆಳ್ಳಾರೆ                                   ಚಿತ್ರ ಕೃಪೆ: ಇಂಟರ್ನೆಟ್ ತಾಣ