ಕರ್ನಾಟಕದ ಉತ್ತರಕನ್ನಡ ಜಿಲ್ಲೆಯ “ಸಿದ್ಧಿ” ಜನಾಂಗದವರ ಮೂಲ ಆಫ್ರಿಕಾ. ಬ್ರಿಟಿಷ್ ಆಡಳಿತದ ಕಾಲದಲ್ಲಿ ಅವರ ಪೂರ್ವಜರನ್ನು ಆಫ್ರಿಕಾದಿಂದ ಗೋವಾಕ್ಕೆ ಗುಲಾಮರನ್ನಾಗಿ ನೌಕೆಗಳಲ್ಲಿ  ಕರೆ ತರಲಾಗಿತ್ತು. ಕ್ರಮೇಣ ಅವರು ಗೋವಾದಿಂದ ಉತ್ತರ ಕನ್ನಡದಲ್ಲಿರುವ ಪಶ್ಚಿಮ ಘಟ್ಟಕ್ಕೆ ವಲಸೆ ಬಂದು ಕಾಡಿನೊಳಗೆ ನೆಲೆಸಿದರು. ಅಲ್ಲಿ ಸಿಗುವ ಹಣ್ಣುಗಳು, ಗೆಡ್ಡೆಗಳು ಮತ್ತು ಅಣಬೆಗಳು ಅವರ ಪ್ರಧಾನ ಆಹಾರವಾದವು. ಕಾಡು ಉತ್ಪನ್ನಗಳನ್ನು ಸಂಗ್ರಹಿಸಿ ಮಾರಾಟ ಮಾಡುತ್ತಾ, ಕೃಷಿ ಕೆಲಸಗಾರರಾಗಿ ದುಡಿಯುತ್ತಾ ಅವರು ತಮ್ಮ ಬದುಕು ಕಟ್ಟಿಕೊಂಡರು. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, ಶಿರಸಿ, ಯಲ್ಲಾಪುರ, ಕಾರವಾರ ಮತ್ತು ಮುಂಡಗೋಡ ತಾಲೂಕುಗಳಲ್ಲಿ ಅವರ ಕುಟುಂಬಗಳು ನೆಲೆಸಿವೆ.  ತಮ್ಮ ಆಹಾರಕ್ಕಾಗಿ ಮತ್ತು ಜೇನು ಇತ್ಯಾದಿ ಕಾಡಿನ ಉತ್ಪನ್ನಗಳನ್ನು ಸಂಗ್ರಹಿಸಲಿಕ್ಕಾಗಿ ಕಾಡನ್ನು ಅವಲಂಬಿಸಿದ್ದ ಸಿದ್ಧಿಗಳು ಎತ್ತರದ ಮರಗಳನ್ನು ಹತ್ತುವುದರಲ್ಲಿ ಪರಿಣತರು. ಅದೇನಿದ್ದರೂ, ಸಿದ್ಧಿಗಳು ಪರಿಶಿಷ್ಟ ಬುಡಕಟ್ಟಿನವರು ಎಂದು ಸರಕಾರ ಘೋಷಿಸಿದ ನಂತರ ಪರಿಸ್ಥಿತಿ ಬದಲಾಗಿದೆ. ಈಗ ಅವರಿಗೆ ಸರಕಾರದ ಹಲವಾರು ಸಮಾಜ ಕಲ್ಯಾಣ ಯೋಜನೆಗಳ ಅನುಸಾರ ಅನೇಕ ಸವಲತ್ತುಗಳು ಸಿಗುತ್ತಿವೆ. ಈಗಂತೂ ಆಹಾರಧಾನ್ಯಗಳನ್ನು ಪಡಿತರ ವ್ಯವಸ್ಥೆಯ ಮೂಲಕ ಅವರ ಮನೆಬಾಗಿಲಿಗೇ ತಲಪಿಸಲಾಗುತ್ತಿದೆ. ಹಾಗಾಗಿ ಸಿದ್ಧಿಗಳು ಈಗ ಆಹಾರಕ್ಕಾಗಿ ಕಾಡಿನಲ್ಲಿ ಪರದಾಡಬೇಕಾದ ಅಗತ್ಯವಿಲ್ಲ. ಇದರಿಂದಾಗಿ, ಕಾಡಿನಲ್ಲಿ ಬದುಕಲು ಅವಶ್ಯವಾಗಿದ್ದ ಕೌಶಲ್ಯಗಳನ್ನು ಈಗಿನ ತಲೆಮಾರಿನವರು ಕಲಿತಿಲ್ಲ.  ಈಗೊಂದು ದಶಕದಿಂದ ಸಿದ್ಧಿ ಜನಾಂಗದ ಯುವಕಯುವತಿಯರು ಶಿಕ್ಷಣ ಪಡೆಯಲು ಆಸಕ್ತಿ ತೋರುತ್ತಿದ್ದಾರೆ. ಹಲವರು ಕಾಲೇಜುಗಳಿಗೆ ಸೇರಿ, ಪದವಿ ಶಿಕ್ಷಣ ಪಡೆದಿದ್ದಾರೆ. ಅದರಿಂದಾಗಿ ಅನೇಕರಿಗೆ ಉತ್ತರ ಕನ್ನಡದ ಪಟ್ಟಣಗಳಲ್ಲಿ, ಗೋವಾದಲ್ಲಿ ಮತ್ತು ಮುಂಬಯಿಯಲ್ಲಿ ಉದ್ಯೋಗ ಪಡೆಯಲು ಸಾಧ್ಯವಾಗಿದೆ.  ದೃಢವಾದ ಮೈಕಟ್ಟಿನ ಸಿದ್ಧಿಗಳು ಓಟದ ಸ್ಪರ್ಧೆಗಳಲ್ಲಿ ಮತ್ತು ಅಥ್ಲೆಟಿಕ್ಸಿನಲ್ಲಿ ಉತ್ತಮ ಸಾಧನೆ ಮಾಡಬಲ್ಲರು. ಅನೇಕ ಯುವಕಯುವತಿಯರು ಸೂಕ್ತ ತರಬೇತಿ ಪಡೆದು, ಈಗಾಗಲೇ ರಾಜ್ಯಮಟ್ಟದಲ್ಲಿ ಹೆಸರು ಗಳಿಸಿದ್ದಾರೆ.  ಶತಮಾನಗಳಿಂದ ದಟ್ಟ ಅರಣ್ಯದೊಳಗೆ ಬದುಕಿದ್ದ ಸಿದ್ಧಿಗಳು ತಮ್ಮ ಸಾಂಪ್ರದಾಯಿಕ ಆಚರಣಿಗಳನ್ನು ಉಳಿಸಿಕೊಂಡಿರುವುದು ವಿಶೇಷ. ಗಮಟೆ ಕುಣಿತದಲ್ಲಿ ಗಂಡಸರು ಸಾಂಪ್ರದಾಯಿಕ ಉಡುಗೆ ತೊಟ್ಟು, ಗಮಟೆಯ ಬಡಿತಕ್ಕೆ ಸರಿಯಾಗಿ ಕುಣಿಯುತ್ತಾರೆ. (ಮಣ್ಣಿನ ಕುಂಡದ ಮೇಲ್ಭಾಗಕ್ಕೆ ಚರ್ಮದ ಹಾಳೆ ಬಿಗಿದು ತಯಾರಿಸುವ ಸಂಗೀತ ಉಪಕರಣ ಗಮಟೆ) ಸಿದ್ಧಿ ಮಹಿಳೆಯರ ಸಾಂಪ್ರದಾಯಿಕ ಕುಣಿತ ಪುಗುಡಿ ಕುಣಿತ. ಇತ್ತೀಚೆಗೆ “ಸಿದ್ಧಿ ಹಬ್ಬ”ದಲ್ಲಿ ಸಿದ್ಧಿಗಳು ಈ ಕುಣಿತಗಳನ್ನು ಪ್ರದರ್ಶಿಸುತ್ತಿದ್ದಾರೆ. ತಮ್ಮ ಸಾಂಸ್ಕೃತಿಕ ಆಚರಣೆಗಳನ್ನು ಬಾಹ್ಯ ಸಮಾಜಕ್ಕೆ ಪರಿಚಯಿಸಲು ಸಿದ್ದಿಗಳು ಮುಂದಾಗುತ್ತಿರುವುದು ಒಳ್ಳೆಯ ಬೆಳವಣಿಗೆ.  ಫೋಟೋ 1: ಸಿದ್ಧಿ ಜನಾಂಗದ ಜನರು 
ಫೋಟೋ 2: ಸಿದ್ಧಿ ಪುರುಷರ ಗಮಟೆ ಕುಣಿತ … ಕೃಪೆ: ಡೆಕ್ಕನ್ ಹೆರಾಲ್ಡ್