ಮರೆತುಬಿಟ್ಟಿದ್ದೀರಲ್ಲಾ ? ನಿಮಗ್ಯಾರಿಗೂ ನಾನು ನೆನಪಿರಲಿಕ್ಕಿಲ್ಲ. ನಾನು ನಿಮ್ಮ ವಿಷಯವನ್ನ ನಿಮ್ಮ ಮಾತಿನ ಮೂಲಕವೇ ಹಲವಾರು ಕಿವಿಗೆ ತಲುಪಿಸಿದ್ದೆ. ನಿಮಗೆ ತುಂಬಾ ಹತ್ತಿರದವನಾಗಿದ್ದೆ. ಆಗಾಗ ನೀವು ನನ್ನ ನೆನಪಿಸಿಕೊಳ್ಳುತ್ತಿದ್ದಿರೀ, ಇದೀಗ ಕೈಯಲ್ಲೊಂದು ಮೊಬೈಲ್ ಬಂದ ಮೇಲೆ ನಾನು ಮಾಯವಾಗಿ ಬಿಟ್ಟಿದ್ದೇನೆ. ಒಂದು ರೂಪಾಯಿ ಕಾಯಿನ್ ಹಿಡಿದು ನನ್ನೊಳಗೆ ಹಾಕಿ ನಿಮಗೆ ಬೇಕಾದ ಸಂಖ್ಯೆಗಳನ್ನ ಡಯಲ್ ಮಾಡಿ ಅವರ ಜೊತೆಗೆ ಒಂದು ನಿಮಿಷ ಮಾತನಾಡುತ್ತಿದ್ದರೆ  ನಿಮಗೆ ಸಮಯದ ಮಹತ್ವ ಗೊತ್ತಾಗ್ತಾ ಇತ್ತು, ಒಂದು ರುಪಾಯಿಯ ಮಹತ್ವ ತಿಳಿದಿತ್ರು. ಈಗ ಆ ಎರಡು ನಿಮಗೆ ಆಗ್ತಾನೆ ಇಲ್ಲ. ಉಚಿತವಾಗಿ ಕರೆ ಮಾತಾಡಬಹುದು, ಯಾರ ಜೊತೆಗೆ ಬೇಕಾದ್ರೂ ಮಾತಾಡಬಹುದು, ಹಾಗಾಗಿ ನೀವು ಅಗತ್ಯವಿದ್ದವರ ಜೊತೆನೂ ಮಾತಾಡ್ತಾ ಇಲ್ಲ. ನಾನೀಗ ನಿಮಗೆಲ್ಲೂ ಕಾಣಿಸುತ್ತಿಲ್ಲ. ಆಗಾಗ ಕೆಲವೊಂದು ಗುಜರಿ ಅಂಗಡಿಗಳಲ್ಲಿ ಮೂಲೆಗೆ ಒರಗಿದ್ದೇನೆ. ಈಗ ಬಳಸುವವರು ಇಲ್ಲ ನಾನು ಹಲವು ಬಂಧಗಳನ್ನು ಗಟ್ಟಿಗೊಳಿಸಿದ್ದೆ, ದೂರದೂರಿಗೆ ಸುದ್ದಿ ತಲುಪಿಸಿದ್ದೆ, ಪ್ರೀತಿ ಹುಟ್ಟಿಸಿದ್ದೆ, ಮಮತೆ ಹೆಚ್ಚಿಸಿದ್ದೆ, ಇಷ್ಟೆಲ್ಲ ಮಾಡಿದವನನ್ನ ಮರೆತು ಬಿಡುವುದೆಷ್ಟು ಸರಿ? ನನ್ನನ್ನ ಬಳಸ್ತಾ ಇರಿ, ಸಮಯದ ಮಹತ್ವ ಮತ್ತು ಹಣದ ಮಹತ್ವ ಎರಡನ್ನು ಒಂದಷ್ಟು ಜನರಿಗಾದರೂ ತಲುಪಿಸುವ ಪ್ರಯತ್ನ ನನ್ನದು. ನನ್ನನ್ನ ಉಪಯೋಗಿಸಿ ಹಾಗೆ ಮರೆತು ಬಿಡಬೇಡಿ. - ಧೀರಜ್ ಬೆಳ್ಳಾರೆ                                   ಚಿತ್ರ ಕೃಪೆ: ಇಂಟರ್ನೆಟ್ ತಾಣ