ಅಕ್ಷರಗಳ ಸಂಶೋಧನೆ - ಬರವಣಿಗೆ - ಸಾಹಿತ್ಯ -  ಕನ್ನಡ ಭಾಷೆ - ಮನುಜ ಮತ - ವಿಶ್ವಪಥ. ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ  ಎಂಬ ಮಲೆನಾಡಿನ ವ್ಯಕ್ತಿಯೊಬ್ಬರು ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು - ಸಂಸ್ಕೃತಿಯನ್ನು - ಕನ್ನಡ ಮಣ್ಣಿನ ಸಾಂಸ್ಕೃತಿಕ ಪ್ರಜ್ಞೆಯನ್ನು ಮುಗಿಲೆತ್ತರಕ್ಕೆ ಏರಿಸಿ ಅದರ ಗಡಿಯನ್ನು ವಿಸ್ತರಿಸಿ ಭಾಷೆಯ ಮಹತ್ವ ಸಾರಿದವರು. ಅಕ್ಷರಗಳಲ್ಲಿ ಕೇವಲ ಭಾವನೆಗಳನ್ನು ಮಾತ್ರ ತುಂಬದೆ ಒಂದು ನಾಡಿನ ಮನುಷ್ಯ ಪ್ರಜ್ಞೆಯನ್ನು ಚಿಂತನೆಯಾಗಿಸಿ ವಿಶ್ವ ಮಾನವತೆಗೆ ದಾರಿ ತೋರಿದ ಅದ್ಬುತ ಚಿಂತಕ. ಅವರ ಜನುಮದಿನದ ನೆನಪಿನ ನೆಪದಲ್ಲಿ ( ಡಿಸೆಂಬರ್ ೨೯ )ಒಂದಷ್ಟು ಅಕ್ಷರಗಳ ಆತ್ಮಾವಲೋಕನ. ಅಕ್ಷರಗಳ ಸಂಶೋಧನೆಯೊಂದಿಗೆ ಉಗಮವಾದ ಅದ್ಭುತ ಸೃಷ್ಟಿ ಈ ಬರವಣಿಗೆ. ಅಕ್ಷರಗಳಿಗಿಂತ ಮೊದಲು ಸಹ ಬರವಣಿಗೆ ಅಸ್ತಿತ್ವದಲ್ಲಿತ್ತು. ಆದರೆ ಚಿತ್ರ, ಸಂಜ್ಞೆ ಮುಂತಾದ ವಿಚಿತ್ರ, ವೈಶಿಷ್ಟ್ಯ ರೂಪದಲ್ಲಿ ಅದು ಬಳಕೆಯಲ್ಲಿತ್ತು. ಬರವಣಿಗೆ ಅದೊಂದು ಬರೆಯುವ ಕ್ರಿಯೆ ಅಥವಾ ಅಭಿಪ್ರಾಯ ವ್ಯಕ್ತಪಡಿಸುವ ಮಾರ್ಗ ಅಥವಾ ಭಾವನೆಗಳ ದಾಖಲೀಕರಣ ಅಥವಾ ಅಕ್ಷರಗಳ ಜೋಡಣಾ ಸ್ವಾತಂತ್ರ್ಯ ಅಥವಾ ಭಾಷೆಯ ಕ್ರಮಬದ್ಧ ಉಪಯೋಗ ಅಥವಾ ಸಂಪರ್ಕ ಮಾಧ್ಯಮ ಅಥವಾ ಮನುಷ್ಯನ ಒಂದು ಕಲಾ ಪ್ರಕಾರ ಹೀಗೆ ನಾನಾ ರೀತಿಯ ಉತ್ತರಗಳನ್ನು ಹುಡುಕಿ ಹೇಳಬಹುದು. ಯಾವಾಗ ಬರಹ ಒಂದು ಕ್ರಮಬದ್ಧತೆಯನ್ನು ಪಡೆಯಿತೋ ನಂತರದಲ್ಲಿ  ವಿವಿಧ ಭಾಷೆಗಳು ಬೆಳವಣಿಗೆ ಹೊಂದಿದವು. ಅಕ್ಷರ ಸಂಶೋಧನೆಗೂ ಮೊದಲು ಭಾಷೆಗಳು ಅಸ್ತಿತ್ವದಲ್ಲಿದ್ದವು. ಆದರೆ ಲಿಪಿ ಇರಲಿಲ್ಲ. ಲಿಪಿಯ ಉಗಮದ ನಂತರ ಭಾಷೆಗಳು ಮಹತ್ವ ಪಡೆದುಕೊಂಡವು. ಲ್ಯಾಟಿನ್, ಪ್ರಾಕೃತ, ಪಾಲಿ, ಪಾರ್ಸಿ, ಸ್ಪಾನಿಷ್,  ಚೀನೀ, ಅರಬ್ಬೀ, ಪರ್ಷಿಯನ್, ಹಿಬ್ರೂ, ಸಂಸ್ಕೃತ ಮುಂತಾದ ಭಾಷೆಗಳು ಅತ್ಯಂತ ಪ್ರಾಚೀನ ಎಂದು ಹೇಳಲಾಗುತ್ತದೆ. ನನಗೆ ಈ ವಿಷಯದಲ್ಲಿ ತುಂಬಾ ಸ್ಪಷ್ಟವಾಗಿ ಮತ್ತು ಆಳವಾಗಿ ತಿಳಿದಿಲ್ಲ. ಸಾಮಾನ್ಯ ಜ್ಞಾನ ಮಾತ್ರ ಇದೆ. ಖಚಿತವಾಗಿ ತಿಳಿದ  ಭಾಷಾ ತಜ್ಞರು ಇನ್ನಷ್ಟು ಮಾಹಿತಿ ಹಂಚಿಕೊಳ್ಳಬಹುದು. ಏಕೆಂದರೆ ಎಷ್ಟೋ ಭಾಷೆಗಳು ನಾಶವಾಗಿದೆ. ಮತ್ತೆಷ್ಟೋ ಭಾಷೆಗಳ ದಾಖಲೆಗಳು, ಇತಿಹಾಸ ತಿಳಿಯದೇ ಇರಬಹುದು. ಇತಿಹಾಸ ಏನೇ ಇರಲಿ ಬರವಣಿಗೆ ಎಂಬುದು ಮಾನವ ನಾಗರಿಕತೆಯ ಎಲ್ಲವನ್ನೂ ಅಡಗಿಸಿಕೊಂಡು ಅದನ್ನು ಇಲ್ಲಿಯವರೆಗೂ ಮುನ್ನಡೆಸಿಕೊಂಡು ಬಂದ ಅತ್ಯುತ್ತಮ ವಾಹಕ. ಬರಹಗಳ ಮೂಲಗಳು, ರೀತಿಗಳು, ಉಪಕರಣಗಳು, ಪ್ರಕಾರಗಳು, ರೂಪಗಳು, ಉದ್ದೇಶಗಳು, ಲಿಪಿಗಳು, ಭಾಷೆಗಳು ಎಷ್ಟೇ ಇರಬಹುದು, ಆದರೆ ಬರಹ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ. ಬರಹವಿಲ್ಲದೆಯೂ ಮನುಷ್ಯ ಬದುಕಬಹುದು ಮತ್ತು ಈಗಲೂ ಬಹಳಷ್ಟು ಜನ ಬದುಕುತ್ತಿದ್ದಾರೆ, ಅದು ಅನಿವಾರ್ಯವಲ್ಲ. ಆದರೆ ಬರಹವಿಲ್ಲದಿದ್ದರೆ ಮನುಷ್ಯ ಕಳೆದುಕೊಳ್ಳುತ್ತಿದ್ದುದು ಏನು ಎಂದು ಯೋಚಿಸಿದಾಗ ಬರಹದ ಮಹತ್ವ ಅರ್ಥವಾಗುತ್ತದೆ. ಕನ್ನಡ ಸಾಹಿತ್ಯ ಲೋಕದಲ್ಲಿ, ಇತಿಹಾಸದ ದಿಗ್ಗಜರ ಸಾಲಿನಲ್ಲಿ, ಮೇರು ಪರ್ವತದಂತೆ ಕಂಗೊಳಿಸುತ್ತಿರುವ ವ್ಯಕ್ತಿತ್ವ ಕುವೆಂಪು ಅವರ. ಸಾಹಿತ್ಯ ಎಂದರೇನು ?  ಸಾಹಿತಿ ಎಂದರೆ ಯಾರು ?  ಅಕ್ಷರಗಳ ಮಾಂತ್ರಿಕ ಶಕ್ತಿ ಹೇಗಿರುತ್ತದೆ ?  ಬರಹಗಳಲ್ಲಿ ಬದುಕಿನ ಸಂದೇಶ ಹೇಗೆ ನೀಡುವುದು ?  ಸಾಹಿತ್ಯದ ವಿವಿಧ ಪ್ರಕಾರಗಳ ಮೂಲಕ ಸಾಮಾಜಿಕ, ಸಾಂಸ್ಕೃತಿಕ ಪ್ರಭಾವ ಹೇಗೆ ಬೀರುತ್ತದೆ ? ಮುಂತಾದ ಪ್ರಶ್ನೆಗಳಿಗೆ ಉತ್ತರ ರೂಪದಲ್ಲಿ ಕುವೆಂಪು ಅವರನ್ನು ಹೆಸರಿಸಬಹುದು..... ಕನ್ನಡ ಭಾಷೆಯನ್ನು ವಿಸ್ತಾರಗೊಳಿಸುವಲ್ಲಿ, ಕನ್ನಡ ‌ಸಾಹಿತ್ಯದ ಓದುಗರ ಚಿಂತನೆಗಳನ್ನು ವಿಶಾಲಕ್ಕೆ ಕೊಂಡೊಯ್ಯುವಲ್ಲಿ, ಕರ್ನಾಟಕದ ಕೀರ್ತಿಯನ್ನು ರಾಷ್ಟ್ರೀಯ ಮಟ್ಟದಲ್ಲಿ ಬೆಳೆಸುವಲ್ಲಿ, ಸಾಮಾನ್ಯ ಜನರಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸುವಲ್ಲಿ ಕುವೆಂಪು ಅವರ ಕೊಡುಗೆ ಸಾಕಷ್ಟಿದೆ. " ಮಂತ್ರ ಮಾಂಗಲ್ಯ " ಎಂಬ ಸರಳ ವಿವಾಹ ಪದ್ದತಿಯನ್ನು ಪರಿಚಯಿಸುವಲ್ಲಿ ಮತ್ತು ವಿಶ್ವ ಮಾನವ ಪ್ರಜ್ಞೆ ಜಾಗೃತಗೊಳಿಸುವಲ್ಲಿ ಕುವೆಂಪು ಅವರ ಸಾಹಿತ್ಯ ಶ್ರೇಷ್ಠತೆಯನ್ನು ಗುರುತಿಸಬಹುದು. ಸಾಹಿತ್ಯವನ್ನು ಅತ್ಯಂತ ವಿಶಾಲ ಅರ್ಥದಲ್ಲಿ ಗ್ರಹಿಸಬೇಕು. ಭಾಷೆಯ ಮೇಲಿನ ಹಿಡಿತ, ವಿಷಯಗಳ ವ್ಯಾಪ್ತಿ, ಅದು ಸಾಹಿತ್ಯ ಕ್ಷೇತ್ರ ಮತ್ತು ಜನಸಾಮಾನ್ಯರಲ್ಲಿ ಬೀರಿರುವ ಪ್ರಭಾವ, ಎಷ್ಟು ದೀರ್ಘಕಾಲದಿಂದ ಅದು ಉಳಿದು ಬಂದಿದೆ, ಪ್ರಶಸ್ತಿ ಮಾನದಂಡಗಳಲ್ಲಿ ಅದಕ್ಕಿರುವ ಸ್ಥಾನ, ಓದುವಾಗ ಆ ಸಾಹಿತ್ಯ ಓದುಗರ ಮನದಲ್ಲಿ ಮೂಡಿಸುವ ಭಾವ ತರಂಗಗಳು,  ಸಾಹಿತ್ಯ ಪ್ರಕಾರಗಳು, ಭಾರತೀಯ ಮತ್ತು ವಿಶ್ವದ ಇತರ ಭಾಷೆಗಳ ಸಾಹಿತ್ಯದ ಆಳ ಅಗಲಗಳ ಮೂಲದಿಂದ  ಪರಿಶೀಲನೆ, ಸಾಹಿತ್ಯದ ದೂರದೃಷ್ಟಿ, ಮಾನವೀಯ ಸ್ಪಂದನೆ, ಸಾಹಿತಿಯ ಒಟ್ಟು ವ್ಯಕ್ತಿತ್ವ ಮುಂತಾದ ಎಲ್ಲವನ್ನೂ ಒಳಗೊಂಡಿರಬೇಕು. ಸಾಂಕೇತಿಕವಾಗಿ ಹೇಳುವುದಾದರೆ....ರಾಮಾಯಣ ದರ್ಶನಂ ಎಂಬ ಮಹಾಕಾವ್ಯ, ಜಯ ಭಾರತ ಜನನಿಯ ತನುಜಾತೆ ಎಂಬ ನಾಡಗೀತೆ, ನೇಗಿಲ ಯೋಗಿ ಎಂಬ ರೈತ ಗೀತೆ, ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೇ, ದೋಣಿ ಸಾಗಲಿ ಮುಂದೆ ಹೋಗಲಿ, ಎಲ್ಲಾದರು ಇರು ಎಂತಾದರೂ ಇರು, ಭಾರಿಸು ಕನ್ನಡ ಡಿಂಡಿಮವ ಎಂಬ ಭಾಷಾ ಮಹತ್ವದ ರಚನೆಗಳು, ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡತಿ ಎಂಬ ಕಾದಂಬರಿಗಳು, ಶೂದ್ರ ತಪಸ್ವಿ, ಬೆರಳ್ಗೆ ಕೊರಳ್ ನಾಟಕಗಳು, ಎಲ್ಲಕ್ಕಿಂತ ಹೆಚ್ಚಾಗಿ ವಿಶ್ವದ ಮಾನವರೆಲ್ಲರೂ ಒಂದೇ ಎನ್ನುವ " ವಿಶ್ವ ಮಾನವ ಪ್ರಜ್ಞೆ " ಎತ್ತಿ ಹಿಡಿದ ಮಹಾನ್ ಸಾಹಿತಿ ಕುವೆಂಪು. ಅವರನ್ನು ಅತ್ಯಂತ ಪ್ರೀತಿ, ಅಭಿಮಾನದಿಂದ ಸ್ಮರಿಸುತ್ತಾ...... -ವಿವೇಕಾನಂದ. ಎಚ್. ಕೆ., ಬೆಂಗಳೂರು ಚಿತ್ರ ಕೃಪೆ: ಇಂಟರ್ನೆಟ್ ತಾಣ