ಪಾಲಕರು-ಶಿಕ್ಷಕರ ಸಭೆ ಹೆಚ್ಚಳ ಶಾಲೆಗಳ ಶ್ರೇಯಕ್ಕೆ ಪೂರಕ
ಕೆ.ಪಿ.ಅಶ್ವಿನ್ ರಾವ್
ಡಿಸೆಂಬರ್ ೩೦, ೨೦೨೫
೨೩ ವೀಕ್ಷಣೆಗಳು
ಸರಕಾರಿ ಶಾಲಾ ಮಕ್ಕಳ ಕಲಿಕೆ ಮತ್ತು ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಇನ್ನು ಮುಂದೆ ಪ್ರತೀ ಎರಡು ತಿಂಗಳುಗಳಿಗೆ ಒಮ್ಮೆ ಪಾಲಕರು- ಶಿಕ್ಷಕರ ಸಭೆ ನಡೆಸಲು ಮುಂದಾಗಿರುವುದು ಉತ್ತಮ ಕ್ರಮ. ಇದುವರೆಗೆ ವರ್ಷಕ್ಕೆ ಕೇವಲ ಮೂರು ಬಾರಿ ನಡೆಯುತ್ತಿದ್ದ ಈ ಸಭೆಗಳು ಇನ್ನು ಮುಂದೆ ವರ್ಷಕ್ಕೆ ಕನಿಷ್ಠ ನಾಲೈದು ಬಾರಿ ನಡೆಯಲಿವೆ. ಮಕ್ಕಳ ಕಲಿಕೆ, ಸಾಮರ್ಥ್ಯ, ದೌರ್ಬಲ್ಯಗಳು - ಮತ್ತು ಇನ್ನೇನಾದರೂ ಸಮಸ್ಯೆಗಳಿದ್ದರೆ ಪರಿಹಾರ ಕಂಡು ಕೊಳ್ಳುವುದು ಇದರಿಂದ ಸಾಧ್ಯವಾಗಲಿದೆ.
ಮಕ್ಕಳ ಕಲಿಕೆ ವಾತಾವರಣ ಸುಧಾರಣೆಗಾಗಿ ಶಿಕ್ಷಣ ಇಲಾಖೆ ಈ ಸ್ವಾಗತಾರ್ಹ ಕ್ರಮಕ್ಕೆ ಮುಂದಾಗಿದೆ. ಸರಕಾರಿ ಶಾಲೆಯಲ್ಲಿ ಕಲಿಯುತ್ತಿರುವ ತಮ್ಮ ಮ್ಮ ಮಕ್ಕಳ ಬಗ್ಗೆ ಹೆತ್ತವರಿಗೆ ಏನೇ ಸಮಸ್ಯೆ ಇದ್ದರೂ ಶಾಲೆಯಲ್ಲಿ ನಡೆಯುವ ಈ ಸಭೆ ಅದಕ್ಕೆ ವೇದಿಕೆಯಾಗಲಿದೆ.
ಈವರೆಗೆ ವರ್ಷಕ್ಕೆ ೩ ಬಾರಿ ಪಾಲಕರು- ಶಿಕ್ಷಕರ ಸಭೆ ನಡೆಯುತ್ತಿತ್ತು. ಆದರೆ ಇನ್ನು ಮುಂದೆ ಸಭೆಯನ್ನು ಶೈಕ್ಷಣಿಕ ಚಟುವಟಿಕೆಯ ಪ್ರಮುಖ ಭಾಗವಾಗಿ ಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಅಂದರೆ ಶಾಲೆಯಲ್ಲಿ ನಡೆಯುವ ಪಾಠ ಪ್ರವಚನಗಳಂತೆ ಪಾಲಕರು-ಶಿಕ್ಷಕರ ಸಭೆಯನ್ನು ಶೈಕ್ಷಣಿಕ ಚಟುವಟಿಕೆಯ ಅಂಗವಾಗಿ ಪರಿಗಣಿಸಲಾಗುತ್ತದೆ. ಇದು ಸರಕಾರಿ ಶಾಲೆಗಳ ಬಲವರ್ಧನೆಗೂ ಕಾರಣವಾಗಲಿದೆ. ಮಕ್ಕಳ ಹೆತ್ತವರು ಆಯಾ ಶಾಲೆಯ ಅಭಿವೃದ್ಧಿ ಬೆಳವಣಿಗೆ, ಆಗುಹೋಗುಗಳಲ್ಲಿ ಪ್ರಮುಖ ಭಾಗೀದಾರರು ಆಗಿರುತ್ತಾರೆ. ಈ ಪಾಲು ದಾರಿಕೆಯನ್ನು ಗಟ್ಟಿಗೊಳಿಸುವ ಅವಕಾಶ ಪಾಲಕರು-ಶಿಕ್ಷಕರ ಸಭೆಗಳಿಂದ ಆಗಲಿದೆ. ಪ್ರತೀ ಎರಡು ತಿಂಗಳಿಗೊಮ್ಮೆ ಸಭೆ ನಡೆಸುವುದರಿಂದ ಇದಕ್ಕೊಂದು ನಿರಂತರತೆ ಸಿಗಲು ಸಾಧ್ಯವಿದೆ. ಇದರಿಂದ ಪ್ರತೀ ಮಗುವಿನ ಬೆಳವಣಿಗೆಯ ಕುರಿತಾದ ವಿಶಿಷ್ಟ ಅಂಶಗಳು ಚರ್ಚೆಯಾಗಿ ಗಮನಕ್ಕೆ ಬರುವುದು ಮಾತ್ರ ವಲ್ಲದೆ ಇಡೀ ಶಾಲೆಯ ಪ್ರಗತಿಯೂ ಸಾಧ್ಯವಾಗಲಿದೆ. ಒಂದರ್ಥದಲ್ಲಿ ಶಾಲೆಯ ಆಗುಹೋಗುಗಳಲ್ಲಿ ಸಮಾಜ, ಸಮುದಾಯ ಒಳಗೊಳ್ಳುವ ಪ್ರಕ್ರಿಯೆ ಈ ಸಭೆಗಳ ಹೆಚ್ಚಳದಿಂದ ಆಳವಾಗಿ ಆಗಲಿದೆ.
ನವೆಂಬರ್ ೧೪ರಂದು ಆಯೋಜಿಸಲಾಗಿದ್ದ ಪಾಲಕರು-ಶಿಕ್ಷಕರ ಬೃಹತ್ ಸಭೆಯ ಯಶಸ್ಸಿನಿಂದ ಪ್ರೇರಣೆಗೊಂಡು ಶಿಕ್ಷಣ ಇಲಾಖೆಯು ಇನ್ನು ಮುಂದೆ ಪ್ರತೀ ೨ ತಿಂಗಳಿಗೊಮ್ಮೆ ಶಿಕ್ಷಕ-ಪಾಲಕರ ಸಭೆ ನಡೆಸಲು ತೀರ್ಮಾನಿಸಿದೆ. ಸಭೆಗಳ ದಿನಾಂಕವನ್ನು ಸಾಕಷ್ಟು ಮುಂಚಿತವಾಗಿ ನಿರ್ಧರಿಸುವುದರಿಂದ ಮಕ್ಕಳ ಹೆತ್ತವರಿಗೆ ಆ ಕುರಿತಾಗಿ ತಯಾರಿ ನಡೆಸುವುದಕ್ಕೂ ಸಮಯ ಸಿಗಲಿದೆ.
ಈ ನಿಗದಿತ ದಿನಾಂಕಗಳಲ್ಲಿ ರಾಜ್ಯಾದ್ಯಂತ ಏಕಕಾಲದಲ್ಲಿ ಸಭೆ ನಡೆಯುವುದು ಕೂಡ ಉತ್ತಮ ಅಂಶ ಮಗುವಿನ ಕಲಿಕೆಯ ವಾತಾವರಣವನ್ನು ಸುಧಾರಿಸಲು, ಸಾಮರ್ಥ್ಯಗಳನ್ನು ಗುರುತಿಸಲು, ಸಮಸ್ಯೆಗಳನ್ನು ಪರಿಹರಿಸಲು ಮತ್ತು ಶಾಲೆಯೊಂದಿಗೆ ಮನೆ, ಸಮಾಜದ ಸಂಪರ್ಕವನ್ನು ಬಲಪಡಿಸಲು ಈ ಸಭೆಗಳು ಸಹಾಯ ಮಾಡಲಿವೆ.
ಇನ್ನು ಆಗಬೇಕಾಗಿರುವ ಕಾರ್ಯವೆಂದರೆ, ಈ ಸಭೆಗಳು ಸಮರ್ಪಕವಾದ -ರೀತಿಯಲ್ಲಿ ನಡೆಯುವಂತೆ ನೋಡಿಕೊಳ್ಳುವುದು. ಆಗ ಸಭೆಯ ಧೈಯೋ ದ್ದೇಶಗಳು ಈಡೇರಲು ಸಾಧ್ಯ. ಖಾಸಗಿ ಶಾಲೆಗಳ ಪೈಪೋಟಿಯ ಮುಂದೆ ಸರಕಾರಿ ಶಾಲೆಗಳು ಯಾರಿಗೂ ಬೇಡವಾದವು, ಅಲ್ಲಿನ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯವರು ಎಂಬ ಭಾವನೆ ಇದ್ದರೆ ಇಂಥ ಕ್ರಮಗಳು ಅದನ್ನು ದೂರ ಮಾಡಲು ಕಾರಣವಾಗಬಲ್ಲವು. ಶಾಲೆಗಳು ಭವಿಷ್ಯದ ಪೀಳಿಗೆಯನ್ನು ನಿರ್ಮಾಣ ಮಾಡುವ ಕೇಂದ್ರಗಳು. ಇಂತಹ ಶಾಲೆಗಳ ಆಗುಹೋಗುಗಳಲ್ಲಿ ಸಮುದಾಯ ಹೆಚ್ಚು ಒಳಗೊಳ್ಳುವುದು ಶಾಲೆಗಳ ಸ್ವಾಸ್ಥ್ಯಕ್ಕೂ ಸಮಾಜದ ಶ್ರೇಯಕ್ಕೂ ಪೂರಕ. ಈ ಹಿನ್ನೆಲೆಯಲ್ಲಿ ಸರಕಾರದ ಈ ಕ್ರಮ ಸ್ವಾಗತಾರ್ಹವಾಗಿದೆ.
ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೩೦-೧೨-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರಕಟಿಸಿದ: ಡಿಸೆಂಬರ್ ೩೦, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬