ಗಾನ ವಿಜ್ಞಾನ ಚೇತನ (ಭಾಗ ೯) - ಸುಮತೀಂದ್ರ ನಾಡಿಗ್
ಕೆ.ಪಿ.ಅಶ್ವಿನ್ ರಾವ್
ಡಿಸೆಂಬರ್ ೩೧, ೨೦೨೫
೧೫ ವೀಕ್ಷಣೆಗಳು
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಕಳಸದವರಾದ ಸುಮತೀಂದ್ರ ನಾಡಿಗರು ಜನಿಸಿದ್ದು ೧೯೩೫ರ ಮೇ ೪ರಂದು. ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಡಾ. ಸುಮತೀಂದ್ರ ನಾಡಿಗ ಕಥೆ, ಕಾವ್ಯ, ವಿಮರ್ಶೆ, ಅನುವಾದ, ಮಕ್ಕಳ ಸಾಹಿತ್ಯ ಪ್ರಕಾರಗಳಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ.
ಕೃತಿಗಳು: ಸ್ಥಿತಪ್ರಜ್ಞ, ಗಿಳಿ ಮತ್ತು ದುಂಬಿ, ಕಾರ್ಕೋಟಕ, ಆಯ್ದ ಕಥೆಗಳು (ಕಥಾ ಸಂಕಲನಗಳು), ನಿಮ್ಮ ಪ್ರೇಮಕುಮಾರಿಯ ಜಾತಕ, ಕಪ್ಪುದೇವತೆ, ಉದ್ಘಾಟನೆ, ಭಾವಲೋಕ, ತಮಾಷೆ ಪದ್ಯಗಳು, ಕುಹೂಗೀತೆ, ನಟರಾಜ ಕಂಡ ಕಾಮನಬಿಲ್ಲು, ಸಮಗ್ರ ಕಾವ್ಯ, ಪಂಚಭೂತಗಳು, ಜಡ ಮತ್ತು ಚೇತನ (ಕವನ ಸಂಗ್ರಹಗಳು), ಅಡಿಗರ ಕಾವ್ಯ, ಕಾವ್ಯ ಎಂದರೇನು?, ವಿಮರ್ಶೆಯ ದಾರಿಯಲ್ಲಿ, ಸಖೀಗೀತದಲ್ಲಿ ಋತುವರ್ಣನೆ, ಹೀಗೊಂದು ಸಾಹಿತ್ಯ ಚರಿತ್ರೆ, ಇನ್ನೊಂದು ಸಾಹಿತ್ಯ ಚರಿತ್ರೆ, ನೆಲೆಗಳು (ವಿಮರ್ಶಾ ಲೇಖನಗಳು), ಹನ್ನೊಂದು ಹಂಸಗಳು, ಸಾಹಸ, ಗಾಳಿಪಟ, ಇಲಿ ಮದುವೆ (ಮಕ್ಕಳ ಸಾಹಿತ್ಯ). ಇವಲ್ಲದೆ ಇಂಗ್ಲಿಷ್‌ನಿಂದ ಅನೇಕ ಕತೆ, ಕಾದಂಬರಿ ಮತ್ತು ವಿಮರ್ಶಾ ಕೃತಿಗಳನ್ನು ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
***
ನಮಗಾಗಿಯೇ
ನಮಗಾಗಿಯೇ ದುಡಿಯುತಿರುವ
ಕ್ರಿಮಿಗಳನ್ನೂ ಸಾಕುತಿರುವ
ನಮ್ಮ ಕೃಷಿಯ ಪರಿಸರ
ಹಾಳುಮಾಡುತಿರುವುದಿಂದು ಬರೀ ಕೃತಕ ಗೊಬ್ಬರ
ನಾವು ಕುಡಿಯಲೆಂದು ಹರಿವ ನದಿಯು
ನಮಗೆ ಕೊಟ್ಟ ವರವ ನಾವೆ ಕೆಡಿಸುತಿರುವೆವು
ಕಾರ್ಖಾನೆಯ ಹಾಳು ಮೂಳು ವಿಷಗಳನ್ನು
ಹರಿಯ ಬಿಟ್ಟು ನೀರ ಕೆಡಿಸುತಿರುವೆವು
ನಡೆದಾಡುವ, ಹಾರುತಿರುವ, ಈಜುತಿರುವ
ಜೀವಿಗಳನು ನಾಶ ಪಡಿಸುತಿರುವೆವು
ಪ್ರಕೃತಿಗೊಂದೇ ರೀತಿಯಲ್ಲಿ ಮಕ್ಕಳು
ನಾವೆನ್ನುವುದನು ಮರೆತು ಕೊಲ್ಲುತಿರುವೆವು
ಕಾರ್ಖಾನೆಯ ಎಂಜಿನ್ನಿನ ಕೆಟ್ಟ ಸುಟ್ಟ ಹೊಗೆಗಳಿಂದ
ಗಾಳಿ ಮಲಿನ ಗೊಳಿಸುತ
ಗಿಡಮರಗಳ ಕಡಿಯುತ
ನಾವು ನಿಂತ ರೆಂಬೆಯನ್ನು
ನಾವೆ ಕಡಿಯುತಿರುವೆವು
(ಗಾನ ವಿಜ್ಞಾನ ಚೇತನ ಕೃತಿಯಿಂದ ಸಂಗ್ರಹಿತ)
ಪ್ರಕಟಿಸಿದ: ಡಿಸೆಂಬರ್ ೩೧, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬