ಶಿಖಂಡಿ ಅಂದರೆ ಯಾರು ?
Krishna Raj Bhat
ಡಿಸೆಂಬರ್ ೩೧, ೨೦೨೫
೨೮ ವೀಕ್ಷಣೆಗಳು
shikhandi,ಶಿಖಂಡಿ
ಲೇಖನ
ಶಿಖಂಡಿ ಎಂಬುವುದು ಧೈರ್ಯ ಇಲ್ಲದವನು , ಹೇಡಿ ಮುಂತಾದ ಅರ್ಥದಲ್ಲಿ ಅವಹೇಳನಕಾರಿ ಪದವಾಗಿ ಉಪಯೋಗಿಸಲ್ಪಡುತ್ತದೆ . ಆದರೆ ಶಿ ಖಂಡಿ ಎಂಬ ಪದಕ್ಕೆ ಏನು ಅರ್ಥ ಎಂದು ನೋಡೋಣ .
ಶಿಖಂಡೀ ಎಂಬುದು ವಿಷ್ಣು ಸಹಸ್ರನಾಮದಲ್ಲಿ ಬರುವ ಭಗವಾನ್ ಮಹಾವಿಷ್ಣುವಿನ 1000 ಹೆಸರುಗಳಲ್ಲಿ 311 ನೇ ಹೆಸರು . ಶ್ಲೋಕ ರೂಪದಲ್ಲಿ ಹೇಳಿದಾಗ
ಇಷ್ಟೋ ವಿಶಿಷ್ಟಃ ಶಿಷ್ಟೇಷ್ಟಃ ಶಿಖಂಡೀ ನಹುಷೋ ವೃಷಃ ।
ಶಿಖೆ ಅಂದರೆ ಜುಟ್ಟು , ಅಂಡ ಅಂದರೆ ಮೊಟ್ಟೆ . ಅಂಡಾಕಾರದಲ್ಲಿ ಅಂದರೆ ಮೊಟ್ಟೆಯ ರೀತಿ ಕೂದಲನ್ನು ತಲೆಯ ಮೇಲೆ ಕಟ್ಟಿಕೊಂಡವನೇ ಶಿಖಂಡೀ . ಇನ್ನು ನವಿಲಿನ ತಲೆಯ ಮೇಲೂ ಜುಟ್ಟು ಇರುವುದರಿಂದ ನವಿಲಿಗೂ ಶಿಖಂಡೀ ಎನ್ನುತ್ತಾರೆ . ಶ್ರೀಕೃಷ್ಣನು ತಲೆಯ ಮೇಲೆ ನವಿಲಿನ ಗರಿಯನ್ನು ಧರಿಸಿದ್ದರಿಂದ ಕೂಡ ಆ ಹೆಸರು ಬಂತೆಂದು ಕೆಲವು ವಿವರಣೆಗಳು ಹೇಳುತ್ತವೆ . ಬಾಲ ಕೃಷ್ಣನ ಚಿತ್ರವನ್ನು ನೋಡಿದಾಗ ಕೂದಲನ್ನು ಸುಂದರವಾಗಿ ಮೇಲೆತ್ತಿ ಕಟ್ಟಿ, ನವಿಲು ಗರಿಯನ್ನು ಧರಿಸಿರುತ್ತಾನೆ ಅಲ್ಲವೇ ? ಹಾಗಾಗಿ ಶಿಖಂಡಿ ಎಂಬ ಹೆಸರಿಗೆ ಸುಂದರವಾದ ಅರ್ಥ ಇದೆ.
ಅಂದ ಹಾಗೆ ಶಿಖಂಡಿಯು ದ್ರುಪದ ರಾಜನ ಮಗಳಾಗಿ ಹುಟ್ಟಿ , ಯಕ್ಷನೊಂದಿಗೆ ಲಿಂಗ ಮಿನಿಮಯ ಮಾಡಿಕೊಂಡು ಗಂಡಾಗಿ ಬದಲಾವಣೆಯಾದವ. ಎಲ್ಲಕ್ಕಿಂತ ಮುಖ್ಯವಾಗಿ ಪಾಂಡವರ ಸೈನ್ಯದ ಒಂದು ಅಕ್ಷೋಹಿಣಿ ಪಡೆಯನ್ನು ಮುನ್ನಡೆಸಿದ ಸೇನಾನಿ ಹಾಗೂ ಮಹಾ ವೀರ . ಗತ ಜನ್ಮದಲ್ಲಿ ಕಾಶಿ ರಾಜಕುಮಾರಿ ಅಂಬೆಯಾಗಿದ್ದು ಭೀಷ್ಮನ ಮೇಲೆ ಸೇಡು ತೀರಿಸಿಕೊಳ್ಳಲು ಪುನರ್ಜನ್ಮ ಪಡೆದು ಬಂದವನು(ಳು ) .
ಇತ್ತೀಚಿನ ಎರಡು ಹಿಟ್ ಚಿತ್ರಗಳಾದ ಕಾಂತಾರ ಹಾಗೂ ಧುರಂಧರ್ ನ ಹೀರೋಗಳ ಹೇರ್ ಸ್ಟೈಲ್ ನೋಡಿದ ಮೇಲೆ ಮೇಲಿನದ್ದು ನೆನಪಾಯಿತು. ಜೊತೆಗೆ ಸಾಂಧರ್ಭಿಕ ಚಿತ್ರವನ್ನು ಲಗಾಯಿತಿಸಿದ್ದೇನೆ.
ಕೊನೆಯ ಮಾತು :
ಮಹಾಭಾರತ ಯುದ್ಧದ ಹತ್ತನೇ ದಿನ , ಶಿಖಂಡಿಯು ಅರ್ಜುನನ ಮುಂದೆ ಗುರಾಣಿಯಂತೆ ನಿಂತಿರುತ್ತಾನೆ . ಕೌರವರ ಸೇನಾಪತಿ ಭೀಷ್ಮರು ಹೆಣ್ಣು ಮಕ್ಕಳ ಜೊತೆ ಯುದ್ಧ ಮಾಡುವುದಿಲ್ಲ ಎಂದು ಶಪಥ ಮಾಡಿರುವುದರಿಂದ , ಶಸ್ತ್ರ ಪ್ರಯೋಗ ಮಾಡಲು ಹಿಂಜರಿಯುತ್ತಾರೆ. ಈ ಸಂದರ್ಭವನ್ನು ಬಳಸಿಕೊಂಡು ಅರ್ಜುನನು ಬಾಣಗಳ ಮಳೆಯನ್ನೇ ಸುರಿಸಿ ಭೀಷ್ಮ ಪಿತಾಮಹನನ್ನು ಧರೆಗುರುಳಿಸಿದ ಎಂದು ಮಹಾಭಾರತ ಹೇಳುತ್ತದೆ . ನೋಡಿ - ಇಲ್ಲಿ ಭೀಷ್ಮರಿಗೆ ಶಿಖಂಡಿಯು ಈಗ ಯಾವ ಲಿಂಗದವನು ಎಂದು ಮುಖ್ಯವಾಗಲಿಲ್ಲ . ಹುಟ್ಟುವಾಗ ಯಾವ ಲಿಂಗದವನಾಗಿದ್ದ ಅದೇ ಮುಖ್ಯವಾಯಿತು ಈ ಸಂಘರ್ಷವು ಈಗಲೂ ಸಹ ನಡೆಯುತ್ತಿದೆ. ಟ್ರಂಪ್ ಸಾಹೇಬರ ಸರ್ಕಾರವು ಲಿಂಗ ಪರಿವರ್ತನೆ ಮಾಡಿಕೊಂಡವರು ತಮ್ಮ ಹೊಸ ಲಿಂಗದ ಅಡಿಯಲ್ಲಿ ಕ್ರೀಡಾಕೂಟಗಳಲ್ಲಿ ಭಾಗವಹಿಸಬಾರದು (ಉದಾ . ಗಂಡಾಗಿ ಹುಟ್ಟಿ ಹೆಣ್ಣಾಗಿ ಲಿಂಗ ಪರಿವರ್ತನೆ ಮಾಡಿಕೊಂಡವರು ಹೆಣ್ಣು ಮಕ್ಕಳ ಕುಸ್ತಿ ಸ್ಪರ್ಧೆಗಳಲ್ಲಿ ಭಾಗವಹಿಸಬಾರದು ) ಎಂಬ ಕಾನೂನುಗಳನ್ನು ಮಾಡಲು ಹೊರಟಿದೆ. ಈ ಉಸಾಬರಿಯೇ ಬೇಡ ಎಂದು ಎಷ್ಟೋ ಫಾರಂ ಗಳಲ್ಲಿ - ಲಿಂಗ ಎಂದಿದ್ದ ಕಾಲಂ ಗಳಲ್ಲಿ , ಜನನ ಸಮಯದಲ್ಲಿ ಇದ್ದ ಲಿಂಗ ಎಂದು ಬದಲಾವಣೆಯಾಗಿವೆ !
ಚಿತ್ರ ಕೃಪೆ : ಅಂತರ್ಜಾಲ
ಪ್ರಕಟಿಸಿದ: ಡಿಸೆಂಬರ್ ೩೧, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬