ಕನ್ನಡ ಪತ್ರಿಕಾ ಲೋಕ (ಭಾಗ ೨೪೧) - ಆಚಾರ - ವಿಚಾರ
ಶ್ರೀರಾಮ ದಿವಾಣ
ಜನವರಿ ೦೪, ೨೦೨೬
೧೮ ವೀಕ್ಷಣೆಗಳು
ಉಡುಪಿ ಪೇಜಾವರ ಮಠದ "ಆಚಾರ - ವಿಚಾರ"
ಉಡುಪಿಯ ಪೇಜಾವರ ಮಠದ ಶ್ರೀ ವಿಜಯಧ್ವಜ ಜ್ಞಾನಪೀಠ (ರಿ) ವತಿಯಿಂದ ಸುಮಾರು ೨೦ ವರ್ಷಗಳ ಕಾಲ ಪ್ರಕಟವಾಗುತ್ತಿದ್ದ ಮಾಸಪತ್ರಿಕೆಯಾಗಿದೆ " ಆಚಾರ - ವಿಚಾರ". ೨೦೦೦ನೇ ಇಸವಿಯಲ್ಲಿ ಪಾಕ್ಷಿಕ ಪತ್ರಿಕೆಯಾಗಿ ಆರಂಭವಾದ "ಆಚಾರ - ವಿಚಾರ" ನಿರಂತರವಾಗಿ ಪ್ರಕಟಗೊಳ್ಳುತ್ತಾ ಕೊನೆಗೆ ಕೊರೋನಾ ಲಾಕ್ ಡೌನ್ ಪರಿಣಾಮವಾಗಿ ೨೦೨೦ರಲ್ಲಿ ಸ್ಥಗಿತಗೊಂಡಿತು.
ಪೇಜಾವರ ಮಠದ ಪರವಾಗಿ ಎನ್. ಭರತೀಶ ಬಳ್ಳಾಲ್ ಪ್ರಕಾಶಕರಾಗಿದ್ದರು. ಪಿ. ಮಾಧವ ಐತಾಳ್ ಮುದ್ರಕರಾಗಿದ್ದರು. ಪೂರ್ವಾರ್ಧದ ವರ್ಷಗಳಲ್ಲಿ ಕಿನ್ನಿಮೂಲ್ಕಿಯ ಶ್ರೀನಿಧಿ ಪ್ರಿಂಟರ್ಸ್ ನಲ್ಲಿ ಪತ್ರಿಕೆ ಮುದ್ರಣವಾಗುತ್ತಿದ್ದರೆ, ಉತ್ತರಾರ್ಧ ವರ್ಷಗಳಲ್ಲಿ ಸೂರ್ಯ ಆಫ್ ಸೆಟ್ ಪ್ರಿಂಟರ್ಸ್ ನಲ್ಲಿ ಮುದ್ರಣವಾಗುತ್ತಿತ್ತು.
ಪುಸ್ತಕ ರೂಪದಲ್ಲಿ ೪೦ ಪುಟಗಳಲ್ಲಿ ಪ್ರಕಟಗೊಳ್ಳುತ್ತಿದ್ದ "ಆಚಾರ - ವಿಚಾರ" ಪತ್ರಿಕೆಯ ಬಿಡಿ ಸಂಚಿಕೆಗೆ ಪೂರ್ವಾರ್ಧದ ವರ್ಷಗಳಲ್ಲಿ ಬೆಲೆ ಐದು ರೂಪಾಯಿಗಳಾಗಿತ್ತು. ಮಧ್ಯದ ಅವಧಿಯಲ್ಲಿ ಎಂಟು ರೂಪಾಯಿಗಳಾಗಿತ್ತು. ಕೊನೆಗೆ ೧೫ ರೂಪಾಯಿಯಾಗಿತ್ತು. ವಾರ್ಷಿಕ ಚಂದಾ ಮೊತ್ತ ಆರಂಭದ ವರ್ಷಗಳಲ್ಲಿ ೫೦ ರೂಪಾಯಿ, ಮದ್ಯೆ ನೂರು ರೂಪಾಯಿಗಳಾಗಿತ್ತು. ನಂತರ ೧೫೦ ರೂಪಾಯಿಗಳಾಗಿತ್ತು. ಕೊನೆಗೆ ೨೦೦ ರೂಪಾಯಿಗಳಾಗಿತ್ತು. ಆಜೀವ ಸದಸ್ಯತ್ವ ಮೊತ್ತ ೧೦೦೦ ರೂಪಾಯಿಯಾಗಿತ್ತು. ಪೋಷಕತ್ವ ಮೊತ್ತ ಆರಂಭದಲ್ಲಿ ೨೦೦೦ ರೂಪಾಯಿಗಳಾಗಿತ್ತು. ಕೊನೆಗೆ ಈ ಮೊತ್ತವನ್ನು ೩೦೦೦ ರೂಪಾಯಿಗಳಿಗೆ ಹೆಚ್ಚಿಸಲಾಗಿತ್ತು.
ಪೇಜಾವರ ಮಠದ ಅಂದಿನ ಹಿರಿಯ ಯತಿಗಳಾಗಿದ್ದ ವಿಶ್ವೇಶತೀರ್ಥ ಶ್ರೀಪಾದರು ಮಹಾಪೋಷಕರಾಗಿದ್ದರು. ಕಿರಿಯ ಯತಿ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಸಂಚಾಲಕರಾಗಿದ್ದರು. ವಿದ್ಯಾವಲ್ಲಭತೀರ್ಥ ಶ್ರೀಪಾದರು ನಿರ್ವಾಹಕರಾಗಿದ್ದರು. ರಾಘವೇಂದ್ರ ಆಚಾರ್ಯ, ಪ್ರದೀಪ ಕಲ್ಕೂರ, ವಿಶ್ವೇಶ ಭಟ್ ಹಾಗೂ ನಾಗರಾಜ ಬಲ್ಲಾಳ್ ಪೋಷಕ ಮಂಡಳಿ ಸದಸ್ಯರಾಗಿದ್ದರು. ವಿ|| ಹರಿದಾಸ ಉಪಾಧ್ಯಾಯ, ವಿ|| ಪಿ. ಲಕ್ಷ್ಮೀನಾರಾಯಣ ಶರ್ಮ, ವಿ|| ಸಗ್ರಿ ರಾಘವೇಂದ್ರ ಉಪಾಧ್ಯಾಯ, ವಿ|| ಕೆ. ವಾದಿರಾಜ ಉಪಾಧ್ಯಾಯ ಹಾಗೂ ದಾಮೋದರ ಐತಾಳ ಸಲಹಾ ಮಂಡಳಿ ಸದಸ್ಯರಾಗಿದ್ದರು.
ಡಾ. ಹೆಚ್. ಕೆ. ಸುರೇಶ ಆಚಾರ್ಯ ಪ್ರಧಾನ ಸಂಪಾದಕರಾಗಿದ್ದರು. ವಿ|| ಅಮೃತೇಶ ಡಿ. ಎಸ್. ಹಾಗೂ ವಿ|| ವಿ. ಸತ್ಯನಾರಾಯಣ ಆಚಾರ್ಯ ಸಹ ಸಂಪಾದಕರಾಗಿದ್ದರು. ೨೦೧೪ರ ನಂತರ ಅಮೃತೇಶರ ಬದಲು ಜಲಂಚಾರು ರಘುಪತಿ ತಂತ್ರಿ ಸಹ ಸಂಪಾದಕರಾಗಿದ್ದರು.
೨೦೦೦ನೇ ಇಸವಿಯ ಆರಂಭದ ಸಂಚಿಕೆಯಿಂದ ಮೊದಲ್ಗೊಂಡು ೨೦೦೯ರ ವರೆಗೆ ಯು. ಆರ್. ಮಧುಸೂದನ ಸಾಮಗ ಮುದ್ರಣ, ಪ್ರಸರಣ ಇತ್ಯಾದಿ ನಿರ್ವಹಿಸುತ್ತಿದ್ದರು. ಇವರ ನಂತರ ಮೈಲಾರ ರಾವ್ ಕುಲಕರ್ಣಿ ನಿರ್ವಹಿಸುತ್ತಿದ್ದರು. ಪತ್ರಿಕೆಯಲ್ಲಿ ಪೇಜಾವರ ಮಠದ ಹಿರಿಯ ಯತಿಗಳಾಗಿದ್ದ ವಿಶ್ವೇಶ ತೀರ್ಥರ "ಶ್ರೀನುಡಿ" ಮತ್ತು ಪೇಜಾವರ ಕಿರಿಯ ಯತಿಗಳಾದ ವಿಶ್ವಪ್ರಸನ್ನ ತೀರ್ಥರ "ಶ್ರೀಮುಖ" ಖಾಯಂ ಅಂಕಣಗಳಾಗಿತ್ತು. ಶ್ರೀ ಭಂಡಾರಕೇರಿ ಮಠದ ವಿದ್ಯೇಶ ತೀರ್ಥರು, "ದಂಡಿ" ಕಾವ್ಯನಾಮಾಂಕಿತರ ಲೇಖನ, ಉಡುಪಿ ಶ್ರೀಮನ್ಮಧ್ವಸಿದ್ಧಾಂತ ಪ್ರಬೋಧಿನಿ ಸಂಸ್ಕೃತ ಮಹಾಪಾಠಶಾಲೆಯ ಪ್ರಾಂಶುಪಾಲರಾದ ಡಾ. ಹೆಚ್. ಕೆ. ಸುರೇಶ ಆಚಾರ್ಯ, ಪ್ರಾಧ್ಯಾಪಕರಾದ ಸಗ್ರಿ ರಾಘವೇಂದ್ರ ಉಪಾಧ್ಯಾಯ, ಅಮೃತೇಶ ಡಿ. ಎಸ್., ಡಿ. ಶಿವಪ್ರಸಾದ ತಂತ್ರಿ, ವಿ. ಸತ್ಯನಾರಾಯಣ ಆಚಾರ್ಯ, ಚಿತ್ರಾಪುರ ಗೋಪಾಲಕೃಷ್ಣ ಆಚಾರ್ಯ ಕುಳಾಯಿ, ಅವಿಲಃ ಉಡುಪಿ, ಶುಚಿಷತ್, ಕಡಿಯಾಳಿ ವಾದಿರಾಜ ಉಪಾಧ್ಯಾಯ, ಕೊರಂಗ್ರಪಾಡಿ ಕುಮಾರಗುರು ತಂತ್ರಿ, ಬೆಂಗಳೂರಿನ ಜಿ. ಹೆಚ್. ಜಗನ್ನಾಥ್, ಮಣಿಪಾಲದ ಮುನಿಯಾಲು ಆಯುರ್ವೇದ ಮಹಾವಿದ್ಯಾಲಯದ ಉಪನ್ಯಾಸಕರಾದ ಡಾ. ಡಿ. ಗುರುರಾಜ ತಂತ್ರಿ, ಹೆರ್ಗ ಹರಿಪ್ರಸಾದ ಭಟ್, ಸತ್ಯನಾರಾಯಣ ವೆಂಕಟರಾವ್, ಡಾ|| ಕಡಂದಲೆ ಗಣಪತಿ ಭಟ್, ಎಸ್. ವೇದವ್ಯಾಸಾಚಾರ್ಯ ಮೊದಲಾದ ವಿದ್ವಾಂಸರು ಪತ್ರಿಕೆಯ ಖಾಯಂ ಬರೆಹಗಾರರಾಗಿದ್ದರು.
ಶ್ರುತಿ, ಸ್ಮೃತಿ, ಉಪನಿಷತ್ತು, ಪುರಾಣ ಸಹಿತ ವಿವಿಧ ಧಾರ್ಮಿಕ ಗ್ರಂಥಗಳ ವ್ಯಾಖ್ಯಾನಗಳು, ಸಂಬಂಧಿತ ಲೇಖನಗಳು ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದುವು. ರಾಮಕೃಷ್ಣ ಜೋಷಿಯವರ ಪದಬಂಧವೂ ಇತ್ತು.
~ ಶ್ರೀರಾಮ ದಿವಾಣ
ಪ್ರಕಟಿಸಿದ: ಜನವರಿ ೦೪, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬