ಪಶುಪಾಲನೆಗೆ ಸಹಕಾರಿ ಮೊಳಕೆ ಮೇವು ಉತ್ಪಾದನೆ
ಕೆ.ಪಿ.ಅಶ್ವಿನ್ ರಾವ್
ಜನವರಿ ೦೬, ೨೦೨೬
೧೬ ವೀಕ್ಷಣೆಗಳು
ಹೈನುಗಾರಿಕೆ ಮಾಡುವುದೆಂದರೆ ಅದಕ್ಕೆ ಬರೇ ಹಸು ಮಾತ್ರ ಇದ್ದರೆ ಸಾಲದು. ಮೇವು ಉತ್ಪಾದನೆ ಮಾಡಬೇಕು. ಅದಕ್ಕೆ ಹಟ್ಟಿಗಿಂತ ಹತ್ತು ಪಾಲು ಸ್ಥಳಾವಕಾಶ ಬೇಕು. ನೀರಾವರಿ ಬೇಕು. ಹಸುವಿಗಿಂತ ಹೆಚ್ಚು ಅದಕ್ಕೆ ಖರ್ಚು ತಗಲುತ್ತದೆ. ಇದನ್ನು ಹೋಗಲಾಡಿಸಿ ಕಡಿಮೆ ಸಂಪನ್ಮೂಲ ಬಳಕೆ ಮಾಡಿ ಮೇವು ಉತ್ಪಾದಿಸುವ ತಾಂತ್ರಿಕತೆಯಾಗಿ ಬಂದದ್ದೇ ಹೈಡ್ರೋಫೋನಿಕ್ಸ್ ತಾಂತ್ರಿಕತೆ.
ಇದರಲ್ಲಿ ಮಣ್ಣು ರಹಿತವಾಗಿ ಮೇವಿನ ಸಸಿ ಬೆಳೆಯಲಾಗುತ್ತದೆ.ಆದ ಕಾರಣ ಇದಕ್ಕೆ ಹೈಡ್ರೋಫೋನಿಕ್ಸ್ ಅಥವಾ ಜಲ ಕೃಷಿಯಲ್ಲಿ ಮೇವು ಉತ್ಪಾದನೆ ಎನ್ನುತ್ತಾರೆ. ಸುಮಾರು ೮ ವರ್ಷದ ಹಿಂದೆ ಹೈಡ್ರೋಫೋನಿಕ್ಸ್ ವಿಧಾನದಲ್ಲಿ ಮೇವು ಬೆಳೆಸುವ ವಿಧಾನ ನಮ್ಮಲ್ಲಿ ಪ್ರಚಾರಕ್ಕೆ ಬಂತು. ಅದಕ್ಕಾಗಿ ಮೇವು ಉತ್ಪಾದಿಸುವ ಸ್ವಯಂ ಚಾಲಿತ ಮನೆಗಳನ್ನು ಒದಗಿಸಿಕೊಡುವ ವ್ಯವಸ್ಥೆಬಂತು. ಈ ವಿಧಾನದಲ್ಲಿ ತ್ವರಿತವಾಗಿ ಮೇವು ಉತ್ಪಾದನೆ ಮಾಡಲಾಗುತ್ತದೆ. ಹೆಚ್ಚು ಸ್ಥಳಾವಕಾಶ ಬೇಡ. ಕೆಲಸದವರೂ ಹೆಚ್ಚು ಬೇಡ. ನೀರು ಉಳಿತಾಯವಾಗುತ್ತದೆ ಎಂಬ ಕಾರಣಕ್ಕೆ ಇದು ಜನಪ್ರಿಯವೂ ಆಯಿತು. ಆದರೆ ಆ ಸಮಯದಲ್ಲಿ ಇದ್ದ ವ್ಯವಸ್ಥೆಗಳು ದೊಡ್ಡ ಪ್ರಮಾಣದ ಹೈನುಗಾರರನ್ನೇ ಗುರಿಯಾಗಿಸಿಕೊಂಡಿತ್ತು. ಹೆಚ್ಚು ಬೆಲೆ ಕೊಟ್ಟು ಖರೀದಿಸಬೇಕಾಗಿತ್ತು. ವಿದ್ಯುತ್ ಶಕ್ತಿ ಬೇಕಾಗಿತ್ತು. ಸಣ್ಣ ಪ್ರಮಾಣದ ಹೈನುಗಾರರಿಗೆ ಇದು ಕೈಗೆಟಕದ್ದಾಗಿತ್ತು.
ಈಗ ಈ ತಾಂತ್ರಿಕತೆಯಲ್ಲಿ ಹಲವಾರು ಮಾರ್ಪಾಡುಗಳಾಗಿದ್ದು.ಕಡಿಮೆ ವೆಚ್ಚದಲ್ಲಿ ಮೇವು ಉತ್ಪಾದಿಸುವ ವ್ಯವಸ್ಥೆಗಳನ್ನು ಮಾಡಿಕೊಡುವವರು ಅಲ್ಲಲ್ಲಿ ತಮ್ಮ ವ್ಯವಹಾರ ಪ್ರಾರಂಭಿಸಿದ್ದಾರೆ. ಈ ವ್ಯವಸ್ಥೆಗಳು ಕಡಿಮೆ ಬೆಲೆಯದಾಗಿದ್ದು ತುಂಬಾ ಸರಳ ವ್ಯವಸ್ಥೆಯಾಗಿ ಸ್ವ ತಯಾರಿಕೆ ಸಹ ಮಾಡಿಕೊಳ್ಳುವಂತದ್ದಾಗಿದೆ.
ಮೊಳಕೆ ಕಾಳುಗಳ ಮೇವು ಉತ್ಪಾದನೆ ಎಂದರೆ ದ್ವಿದಳ ಬೀಜ (ಜೋಳ, ಹೆಸರು, ಹುರುಳಿ ಯಾವುದಾದರೂ) ಗಳನ್ನು ನೆನೆ ಹಾಕಿ ಅದನ್ನು ದಪ್ಪಕ್ಕೆ ಅದಕ್ಕಾಗಿಯೇ ಇರುವ ಪ್ಲಾಸ್ಟಿಕ್ ಟ್ರೇ ಗಳಲ್ಲಿ ದಪ್ಪಕ್ಕೆ ಬಿತ್ತನೆ ಮಾಡಿ ಕೇವಲ ನೀರು ಮಾತ್ರ ಕೊಡುತ್ತಾ ಎಂಟು ದಿನಗಳ ಕಾಲ ಬೆಳೆಸಿ ಸುಮಾರು ಅರ್ಧ ಅಡಿ ಎತ್ತರದ ಸಸಿಯಾಗುವಾಗ ಅದನ್ನು ಪಶುಗಳಿಗೆ ಮೇವಾಗಿ ಕೊಡುವುದು. ೮ ದಿನಕ್ಕಿಂತ ಹೆಚ್ಚು ಇಡಬಾರದು. ಒಂದು ಕಿಲೋ ಜೋಳವನ್ನು ನೆನೆಸಿ ಮೊಳಕೆ ಬರಿಸಿ ಸಸಿ ಮಾಡಿದಾಗ ಅದು ತನ್ನ ತೂಕವನ್ನು ೧೦ ಪಟ್ಟು ಹೆಚ್ಚಿಸಿಕೊಳ್ಳುತ್ತದೆ. ಅಂದರೆ ೧೦ ಕಿಲೋ ಜೋಳದ ಬಿತ್ತನೆ ಮಾಡಿದಾಗ ಅದರಿಂದ ದೊರೆಯುವ ಮೇವು ೧೦೦ ಕಿಲೋ ಆಗುತ್ತದೆ.
ಇತ್ತೀಚೆಗೆ ಎಲ್ಲಾ ಕೃಷಿ ವಸ್ತು ಪ್ರದರ್ಶನಗಳಲ್ಲಿ ಈ ಮೇವು ಉತ್ಪಾದನಾ ವ್ಯವಸ್ಥೆ ತಯಾರಕರ ಪ್ರದರ್ಶನಗಳಿರುತ್ತವೆ. ಸುಮಾರು ೧೦೦ ಚದರ ಅಡಿಯ ಅಥವಾ ಅದಕ್ಕಿಂತ ಕಡಿಮೆ ಸ್ಥಳಾವಕಾಶದ ಮೇವು ಉತ್ಪಾದನಾ ಘಟಕ ತಯಾರಿಕೆಗೆ ಸುಮಾರು ೨೫೦೦೦ ದಿಂದ ೩೦೦೦೦ ಸಾವಿರ ತನಕ ಆಗುತ್ತದೆ ಎನ್ನುತ್ತಾರೆ.ಇದನ್ನು ಅವರವರೇ ತಯಾರಿಸಿಕೊಂಡರೂ ಇಷ್ಟೇ ಬೆಲೆ ಆಗಬಹುದು.
ಸಾಮಾನ್ಯವಾಗಿ ಹೆಚ್ಚಿನವರು ಯುಪಿವಿಸಿ ಪೈಪುಗಳನ್ನು ಪರಸ್ಪರ ಪಿಟ್ಟಿಂಗುಗಳ ಮೂಲಕ ಜೋಡಿಸಿ ಈ ಮೇವು ಉತ್ಪಾದನಾ ಮನೆಗಳನ್ನು ತಯಾರಿಸಿರುತ್ತಾರೆ. ಮನೆಯನ್ನು ನೆರಳು ಬಲೆಯಲ್ಲಿ ಮುಚ್ಚಿರುತ್ತಾರೆ.ಇದರ ಬದಲು ಇಡೀ ಮನೆಯನ್ನು ಅಲ್ಯೂಮೀನಿಯಂ ಫಾಬ್ರಿಕೇಷನ್ ಪೈಪುಗಳ ಮೂಲಕ ಸಿದ್ದಪಡಿಸಿಕೊಳ್ಳಬಹುದು. ಇದು ಸ್ವಲ್ಪ ಹೆಚ್ಚು ಭಾರವನ್ನು ತಡೆದುಕೊಳ್ಳುವ ಶಕ್ತಿ ಪಡೆದಿರುತ್ತದೆ. ನೆರಳು ಬಲೆ ಹೊದಿಸುವ ಬದಲಿಗೆ ಪಾಲಿಥೀನ್ ಶೀಟನ್ನು ಹೊದಿಸಿದರೆ ಒಳಗೆ ಮೊಳಕೆಗಳು ಇನ್ನೂ ಸ್ವಲ್ಪ ಹೆಚ್ಚು ಬೆಳವಣಿಗೆಯನ್ನು ಹೊಂದಲು ಸಹಾಯಕವಾಗುತ್ತದೆ.
ಮಾಹಿತಿ: ರಾಧಾಕೃಷ್ಣ ಹೊಳ್ಳ
ಪ್ರಕಟಿಸಿದ: ಜನವರಿ ೦೬, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬