ದೇಶ ಸುತ್ತಿದರೆ ಏನಾಗುತ್ತೆ? ೬ನೇ ತರಗತಿಯಲ್ಲಿ ಓದುತ್ತಿರುವ ಚಿಂಟುಗೆ ಮನೆಯಲ್ಲಿ ಕನ್ನಡ ಪಾಠ ನಡೆದಿತ್ತು. ಕನ್ನಡ ಮನೆಯ ಮಾತಾದ್ದರಿಂದ ಓದಲು ಬರೆಯಲು ಅವನಿಗೆ ಕಷ್ಟ ಏನಿರಲಿಲ್ಲ. ಆದರೆ ಗಾದೆ, ನುಡಿಗಟ್ಟುಗಳೆಂದರೆ ಗೊಂದಲ ಅವನಿಗೆ. 'ದೇಶ ಸುತ್ತು ಕೋಶ ಓದು' ಗಾದೆಯನ್ನು ಅವನ ವಿವರಿಸಿ ಹೇಳುತ್ತಿದ್ದರು. 'ದೇಶ ಸುತ್ತಿದರೆ ಏನಾಗುತ್ತಪ್ಪಾ?' ಎಂದು ತಂದೆ ಕೇಳಿದರೆ, ಟೇಬಲ್ ಸುತ್ತ ಸುತ್ತುತ್ತಿದ್ದ ಚಿಂಟು, 'ದೇಶ ಸುತ್ತಿದರೆ ಏನಾಗುತ್ತೆ? ಸುಸ್ತಾಗತ್ತೆ...' ಎನ್ನಬೇಕೆ?. -ಅಂಬಿಕಾ ಆರ್. *** ಸೇರಿಗೆ ಸವ್ವಾಸೇರು ಗುಂಡೂರಾಯರು ಕುಖ್ಯಾತ ಲಾಯರು. ತಮ್ಮ ಕಕ್ಷಿದಾರರಿಂದ ಹೆಚ್ಚಿನ ಹಣ ಪೀಕುತ್ತಾರೆ ಎನ್ನುವುದಕ್ಕೆ ಅವರು ಫೇಮಸ್ಸು. ಒಮ್ಮೆ ತಮ್ಮ ೩೦ ವರ್ಷದ ಮಗ ಹಠಾತ್ ಹೃದಯಾಘಾತದಿಂದ ಆಸ್ಪತ್ರೆ ಸೇರಿದ. ೪೫ ದಿನಗಳ ಸಾವು ಬದುಕಿನ ಹೋರಾಟದ ನಂತರ ಮಗ ಗುಣಮುಖನಾದ. ಅದೇ ಖುಷಿಯಲ್ಲಿ ಗುಂಡೂರಾಯರು ಡಾಕ್ಟರ್ ಹತ್ತಿರ ಮಾತನಾಡುತ್ತ, 'ನನ್ನ ಮಗನ ಪ್ರಾಣ ಉಳಿಸಿದ್ದೀರಿ. ನಿಮ್ಮ ಋಣ ತೀರಿಸಲಾರೆ. ತಮ್ಮ ಫೀಸ್ ಎಷ್ಟು ಹೇಳಿ' ಎಂದು ಕೇಳಿದರು. ಈ ಮೊದಲು ಅವರು ಮಗ ಗುಣಮುಖನಾಗದಿದ್ದರೆ ಕೇಸು ಜಡಿಯುವುದಾಗಿ ವೈದ್ಯರಿಗೆ ಹೇಳಿದ್ದರು. ಅದನ್ನು ನೆನೆಸಿಕೊಂಡ ವೈದ್ಯರು, 'ನಿಮ್ಮ ಮಗನನ್ನು ಬದುಕಿಸುವ ನನ್ನ ಪ್ರಯತ್ನದಲ್ಲಿ ಸೋತಿದ್ದರೆ, ನನ್ನಿಂದ ಎಷ್ಟು ಹಣ ಪರಿಹಾರಕ್ಕಾಗಿ ದಾವೆ ಹೂಡುತ್ತಿದ್ದೀರಿ. ಹೇಳಿ?' ಎಂದ. 'ಕನಿಷ್ಠ ೧೦ ಕೋಟಿ ರೂಪಾಯಿಗೆ ದಾವೆ ಹಾಕುತ್ತಿದ್ದೆ' ಎಂದರು. ವೈದ್ಯರು. 'ಹಾಗಾದ್ರೆ ಅದರ ಅರ್ಧದಷ್ಟು, ಅಂದರೆ ನನ್ನ ಫೀಸ್ ೫ ಕೋಟಿ ರೂಪಾಯಿ' ಎಂದರು. ಕ್ಷಣ ಗುಂಡೂರಾಯರ ಹೃದಯ ಬಡಿತವೇ ನಿಂತ ಹಾಗಾಯಿತು. -ಆರ್. ಎಸ್. ಪ್ರಕಾಶ್ *** ಭಾಷೆಯ ಅವಾಂತರ ನಮ್ಮಜ್ಜಿ ಹೇಳಿದ ಘಟನೆಯಿದು ದೇವದುರ್ಗದ ನಮ್ಮ ಸೋದರತ್ತೆಗೆ ಅಂಧ್ರದ ಕರ್ನೂಲಿನ ಹುಡುಗ ಅಳಿಯನಾಗಿ ಬಂದಿದ್ದ. ಬೆಳಗೆದ್ದು ಅಂಗಳ ಕಸ ಬಳಿಯುತ್ತಿದ್ದ ನಮ್ಮಜ್ಜಿಯ ಮುಂದೆ ಬಂದು ನಿಂತ ಅಳಿಯ ಮಹಾಶಯ, 'ಅಮ್ಮ, ಬಗ್ಗು, ಬಗ್ಗು' ಎನ್ನತೊಡಗಿದ ಏನೆಂದು ಅರಿಯದ ಅಜ್ಜಿ ಕೈಲಿರುವ ಕಸಬರಿಗೆಯನ್ನು ಕೆಳಹಾಕಿ. ಮಗಳನ್ನು ಕೂಗಿದಳು. 'ನೋಡಮ್ಮಾ ನಿನ್ನ ಗಂಡ ಬಂದು ಅವಾಗಿಂದ ಬಗ್ಗು ಬಗ್ಗು ಅಂತಿದ್ದಾನೆ. ಏನಿದು ಬೆಳಗೆದ್ದು ಅಪಸವ್ಯ. ಎಂದಾಗ, 'ಅಯ್ಯೋ ಅಮ್ಮಾ ಬಗ್ಗು ಅಂದರೆ ಇದ್ದಿಲು, ಹಲ್ಲುಜ್ಜಲು ಇದ್ದಿಲು ಕೇಳ್ತಿದ್ದಾರೆ’ ಎಂದಾಗ ಅಜ್ಜಿ ಸಹಜಸ್ಥಿತಿಗೆ ಬಂದಿದ್ದು. ವಿಜಯಭಾಸ್ಕ‌ರ್ ಅದಿತಿ *** ನೇರ ಪ್ರಸಾರ ಕಾರ್ಯಕ್ರಮ! ಎಫ್ ಎಂ ರೇಡಿಯೋ ಕೇಂದ್ರಕ್ಕೆ ಫೋನ್ ಮಾಡಿದ ಪಪ್ಪು 'ಇದು ಎಫ್.ಎಂ. "ರೇಡಿಯೋ ತಾನೆ?' ಎಂದ. ರೇಡಿಯೋ ಜಾಕಿ ಹೌದೆಂದ. 'ನನ್ನ ಮಾತು ಪೂರ್ತಿ ಪಟ್ಟಣಕ್ಕೆ ಕೇಳಿಸುವುದೆ?' ಎಂದ. ಜಾಕಿ ಕೇಳಿಸುತ್ತದೆಯೆಂದ, 'ಮನೆಯಲ್ಲಿ ಎಫ್.ಎಂ. ಆಲಿಸುತ್ತಿರುವ ನನ್ನ ತಂಗಿಗೂ ಕೇಳಿಸುವುದೆ?' ಈ ಬಾರಿ ರೇಡಿಯೋ ಜಾಕಿ ಹೌದೆಂದು ಕೊಂಚ ಅಸಮಾಧಾನದಿಂದಲೇ ಹೇಳಿದ. ಪಪ್ಪು ನಿರಾಳತೆಯ ನಿಟ್ಟುಸಿರು ಬಿಡುತ್ತಾ ಉಸುರಿದ, 'ಹಲೋ ಪಿಂಕಿ, ನಾನು ನಿನ್ನಣ್ಣ ಪಪ್ಪು... ಎಫ್.ಎಂನಲ್ಲಿ ನನ್ನ ಧ್ವನಿ ಕೇಳಿಸುತ್ತಿದ್ದರೆ ತಕ್ಷಣ ಮೋಟಾರ್ ಚಾಲೂ ಮಾಡು. ನಾನು ಮಹಡಿ ಮೇಲಿನ ಟಾಯ್ಲೆಟ್ ನಲ್ಲಿದ್ದೇನೆ ಮತ್ತು ನೀರು ಖಾಲಿಯಾಗಿದೆ. ನಿನ್ನ ಫೋನ್ ಕೂಡಾ ಸ್ವಿಚ್ ಆಫ್ ಆಗಿರುವ ಹಾಗಿದೆ...' ರೇಡಿಯೋ ಜಾಕಿ ಆತನ ಸಮಯ ಪ್ರಜ್ಞೆಗೆ ಬೆರಗಾಗಿ ಹೋದ. -ರಮಣ್ ಶೆಟ್ಟಿ ರೆಂಜಾಳ್ ಕಲೆ: ಗಣೇಶ ಆಚಾರ್ಯ (ಮಾರ್ಚ್ ೨೦೨೪ರ ಮಯೂರ ಸಂಚಿಕೆಯಿಂದ ಸಂಗ್ರಹಿತ)