ವಸಂತ ಪಂಚಮಿ--ಸರಸ್ವತಿ ಜಯಂತಿ
ಬರಹಗಾರರ ಬಳಗ
ಜನವರಿ ೨೩, ೨೦೨೬
೮ ವೀಕ್ಷಣೆಗಳು
ಮಾಘ ಮಾಸ ಶುಕ್ಲ ಪಕ್ಷದ ಪಂಚಮಿಯಂದು ವಿದ್ಯಾರ್ಥಿಗಳಲ್ಲಿ ಜ್ಞಾನ, ಬುದ್ಧಿವಂತಿಕೆ, ಸೃಜನಶೀಲತೆ, ಆಧ್ಯಾತ್ಮಿಕತೆ, ಕಲಿಕೆಗೆ, ಸಂವಹನಕ್ಕೆ, ಸ್ವಯಂಶಿಸ್ತು ಆಚರಣೆಗೆ ಸದಾ ಹರಸುವ ದೇವತೆ ಸರಸ್ವತಿಯ ಜಯಂತಿಯನ್ನು ಈ ಪಂಚಮಿಯಂದು (ಈ ವರ್ಷ ಜನವರಿ ೨೩) ಆಚರಿಸಲಾಗುತ್ತದೆ. ವಸಂತ ಮಾಸದ ಆಗಮನಕ್ಕೆ ಸ್ವಾಗತವ ಕೋರುವ ವಸಂತ ಪಂಚಮಿ ಎಂದೂ ಹೇಳುತ್ತಾರೆ. ಈ ಹಬ್ಬ, ಪೂಜೆ, ಆಚರಣೆ ಬುಧ ಮತ್ತು ಗುರು ಗ್ರಹಕ್ಕೆ ಸಂಬಂಧಿಸಿದ್ದು ಎಂದು ಉಲ್ಲೇಖವಿದೆ. ಪ್ರಾತಃ ಕಾಲ ಪ್ರಶಸ್ತವಂತೆ ಈ ಪಂಚಮಿ ಪೂಜೆಗೆ. ಪಾಣಿಪೀಠದ ಮೇಲೆ ಬಿಳಿಯ ವಸ್ತ್ರವನುಟ್ಟ, ಹಳದಿ ವಸ್ತ್ರ ಆಭರಣ ತೊಟ್ಟ ಸರಸ್ವತಿಯ ಭಾವಚಿತ್ರ ಅಥವಾ ಮೂರ್ತಿಯನ್ನಿಟ್ಟು ವೈವಿಧ್ಯ ಪುಷ್ಪಗಳಿಂದ ಅರ್ಚಿಸಿ, ಧೂಪ ದೀಪ ಬೆಳಗಿ, ಹಣ್ಣು ಸಿಹಿತಿಂಡಿಗಳ ನೈವೇದ್ಯ ಮಾಡಿ ವಿಶೇಷವಾಗಿ ಪ್ರಾರ್ಥಿಸುವರು. ಸಂಗೀತ ತರಬೇತಿ, ಹೊಸ ವ್ಯವಹಾರ ಪ್ರಾರಂಭಿಸಲು, ವೇದಮಂತ್ರ ಕಲಿಕೆ ಆರಂಭಿಸಲು ಈ ದಿನ ಒಳ್ಳೆಯದಂತೆ. ವಿದ್ಯಾ ಮಾತೆಯ ಆಶೀರ್ವಾದ ಸದಾ ಇದೆಯೆಂಬ ನಂಬಿಕೆ ಭಕ್ತರದ್ದಾಗಿದೆ. ಶ್ವೇತ ಕಮಲದಳದ ಮೇಲೆ ಕುಳಿತ ದೇವಿಗೆ 'ಗಾಯತ್ರಿ ಮಂತ್ರ' ಹೇಳಿ ಆರಾಧಿಸುವುದಿದೆ. ಸಕಲ ಕಷ್ಟಗಳ ನಿವಾರಣೆಗೆ ಗಾಯತ್ರಿ ಮಂತ್ರ ಪಠಣ ಒಳ್ಳೆಯದು. ಹೊಸ ಹೊಸ ಜ್ಞಾನದ ಅನ್ವೇಷಣೆಗೆ, ಬುದ್ಧಿಯ ಮಟ್ಟದ ವಿಸ್ತಾರಕ್ಕೆ, ಆತ್ಮಬಲಕ್ಕೆ, ಮೃದುವಾದ ಧೋರಣೆಗೆ ಮನಸ್ಸು ಜಾಗ್ರತವಾಗಲು ಈ ಸರಸ್ವತಿ ಆರಾಧನೆ ಸೂಕ್ತವಾದ್ದು. 'ಓಂ ಐಂ ಸರಸ್ವತ್ಯೈ ನಮಃ’ ಪಠಣ ಮಾಡುವುದು ಶ್ರೇಯಸ್ಕರ. ಗಣೇಶ ಪ್ರಾರ್ಥನೆ, ಪೂಜೆ ಆರಂಭದಲ್ಲಿ ಮಾಡಿ, ಪುಸ್ತಕಗಳು, ಸಂಗೀತ ಪರಿಕರಗಳನ್ನಿಟ್ಟು ಆರಾಧಿಸಬಹುದು. ಬಾಹ್ಯ ವಿಕಸನದೊಂದಿಗೆ, ಆಂತರಿಕ ಜ್ಞಾನವೂ ವೃದ್ಧಿಸಲು ಸಹಕಾರಿ. ನಮ್ಮ ಪರಿಸರದ ಮಕ್ಕಳೊಂದಿಗೆ ಆಡಂಬರ ರಹಿತವಾಗಿ ಆಚರಿಸಿ, ಪೂಜೆಯ, ಹಬ್ಬದ ಮಹತ್ವವನ್ನು ತಿಳಿಸೋಣ,ಸರಸ್ವತಿ ಮಾತೆ ಎಲ್ಲರಿಗೂ ಸನ್ಮಂಗಲವನ್ನುಂಟು ಮಾಡಲಿ ಎಂದು ಬೇಡಿಕೊಂಡು ಪಾದಪದ್ಮಗಳಿಗೆ ಶಿರಬಾಗೋಣ.
-ರತ್ನಾ ಕೆ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಜನವರಿ ೨೩, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬