ಸ್ಟೇಟಸ್ ಕತೆಗಳು (ಭಾಗ ೧೫೭೦) - ಸಂವತ್ಸರ
ಬರಹಗಾರರ ಬಳಗ
ಜನವರಿ ೨೩, ೨೦೨೬
೫ ವೀಕ್ಷಣೆಗಳು
ಮನೆಗಿಂತ ಹೆಚ್ಚು ಅಪ್ಪ ಹೊರಗಡೆನೇ ಇರ್ತಾಯಿದ್ರು, ಮನೆಯ ಕಾರ್ಯಕ್ರಮಕ್ಕೆ ಆಗಾಗ ಗೈರು ಹಾಜರಾಗ್ತಾಯಿದ್ರು, ಆದ್ರೆ ಊರಲ್ಲಿ ನಡೆಯುವ ಯಾವ ಕಾರ್ಯಕ್ರಮಕ್ಕೂ ಅಪ್ಪನ ಉಸ್ತುವಾರಿ ಇರಲೇಬೇಕಿತ್ತು, ಅಪ್ಪನ ಸುತ್ತಮುತ್ತ ಒಂದಿಷ್ಟು ಗೆಳೆಯರು ತುಂಬಿಕೊಳ್ಳುತ್ತಾನೆ ಇದ್ದರು, ಒಂದು ದಿನವೂ ಯಾರ ಮೇಲೂ ಸಿಟ್ಟು ಮಾಡಿಕೊಂಡವರಲ್ಲ, ಎಲ್ಲರನ್ನೂ ಆತ್ಮೀಯತೆಯಿಂದ ಮಾತನಾಡುತ್ತ ಎಲ್ಲರೊಳಗೆ ಗಟ್ಟಿ ಬಾಂಧವ್ಯ ಇಟ್ಟುಕೊಂಡವರು, ಅಪ್ಪನಿಗೆ ಮನೆಗಿಂತ ಹೊರಗ್ಯಾಕೆ ಅಷ್ಟು ಖುಷಿ ಅನ್ನೋದು ಮಗನಿಗೆ ಅರ್ಥ ಆಗ್ತಾ ಇರಲಿಲ್ಲ, 25 ವರುಷಗಳ ಮದುವೆ ವಾರ್ಷಿಕೋತ್ಸವವನ್ನ ಮಗನೇ ಆಯೋಜಿಸಿದ್ದ, ಅಪ್ಪನ ಕಾರ್ಯಕ್ರಮ. ಆ ದಿನ ತುಂಬಿದ ಸಭೆ ಪ್ರತಿಯೊಬ್ಬರೂ ಮಾತನಾಡಿದ ಮಾತು ಅವರ ಗೌರವ ಆದರಗಳು ಪ್ರೀತಿಯ ಆಲಿಂಗನ ಅಪ್ಪುಗೆಗಳನ್ನು ಕಂಡಾಗ ಅಪ್ಪ ಸಂಪಾದಿಸಿದ್ದೇನು ಅನ್ನೋದು ಅರ್ಥವಾಯಿತು. ಮನೆಯನ್ನ ತೊರೆದು ಸಮಾಜಕ್ಕಾಗಿ ಬದುಕಿದ ಅಪ್ಪನ ಎಲ್ಲ ಕ್ಷಣಗಳು ಕಣ್ಣ ಮುಂದೆ ಬಂದವು. ಅಪ್ಪನ ಮೇಲಿದ್ದ ಗೌರವ ಇನ್ನೂ ಹೆಚ್ಚಾಯ್ತು ಸಂಪಾದನೆಂದರೆ ಏನು ಅನ್ನೋದು ಇವತ್ತು ಅರ್ಥವಾಗಿತ್ತು. ಆ ಸಂಭ್ರಮದ ಕಾರ್ಯಕ್ರಮದಲ್ಲಿ ಓಡಾಡ್ತಾ ಓಡಾಡ್ತಾ ತಾನು ಸಮಾಜದ ಭಾಗವಾಗುವ ಅನ್ನೋದ್ದನ್ನ ಮಗ ತೀರ್ಮಾನ ಮಾಡಿಕೊಂಡ... ಅಪ್ಪ ಅಮ್ಮನ ಮುಖದಲ್ಲಿ ಸಂತೋಷವಿತ್ತು.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರಕಟಿಸಿದ: ಜನವರಿ ೨೩, ೨೦೨೬
|
ನವೀಕರಿಸಿದ: ಏಪ್ರಿಲ್ ೨೧, ೨೦೨೬