ಅವತ್ತು ಗುರುಗಳ ಬಳಿಗೆ ಹೋಗಿದ್ದೆ ಗುರುಗಳೇ ಪ್ರಶ್ನೆಗಳು ಸಾವಿರ ಇವೆ, ಎಲ್ಲದಕ್ಕೂ ನಿಮ್ಮಲ್ಲಿ ಉತ್ತರ ಕೇಳುವುದಕ್ಕೆ ಸರಿಯಾಗುವುದಿಲ್ಲ, ಹಾಗಾಗಿ ತುಂಬಾ ಕಾಡುತ್ತಿರುವ ಪ್ರಶ್ನೆಗಳನ್ನು ನಿಮ್ಮ ಮುಂದೆ ಇಡ್ತೇನೆ. ದಯವಿಟ್ಟು ಉತ್ತರ ಕೊಡಿ ಜೀವನದಲ್ಲಿ ಗೆಲುವು ಸಾಧಿಸಬೇಕು ಅದ್ಭುತವನ್ನು ಪಡೆದುಕೊಳ್ಳಬೇಕು ಯಶಸ್ವಿ ವ್ಯಕ್ತಿಯನ್ನಿಸ್ಕೊಳ್ಳಬೇಕು ಇದೆಲ್ಲ ಸಾಧ್ಯ ಆಗೋದಕ್ಕೆ ಇನ್ನು ಎಷ್ಟು ವರ್ಷ ಹೀಗೆ ಪ್ರಯತ್ನ ಪಡಬೇಕು? ಗುರುಗಳು ಹೇಳಿದರು “ನೋಡು ನಿನ್ನ ಈ ಆಲೋಚನೆಗಳೆಲ್ಲ ಸರಿ ಆದರೆ ನೀನು ಎಷ್ಟು ನಿನ್ನ ಬದುಕಿನ ಬಗ್ಗೆ ಜವಾಬ್ದಾರಿ ಇಟ್ಟುಕೊಂಡಿದ್ದೀಯಾ? ಒಂದು ಕ್ಷಣವನ್ನು ವ್ಯರ್ಥ ಮಾಡಿದೆ ಪ್ರಯತ್ನ ಪಡ್ತಾ ಇದ್ದೀಯಾ? ನಿನಗೊಂದು ಕೆಲಸವನ್ನ ವಹಿಸಿದಾಗ ಆ ಕೆಲಸವನ್ನು ನಿಧಾನವಾಗಿ ಮುಗಿಸ್ತಾ ಇನ್ನೊಂದು ಕೆಲಸ ಕಡೆಗೆ ಹೆಜ್ಜೆ ಇಡ್ತೀಯಾ? ಕ್ಷಣದಲ್ಲಾಗುವುದನ್ನ ದಿನಗಳವರೆಗೆ ಎಳೆದು ಮುಂದುವರಿಸುತ್ತಿರುವವನು ನೀನು. ಹೀಗಾದಾಗ ಗೆಲುವು ಹೇಗೆ ಸಿಗೋದಕ್ಕೆ ಸಾಧ್ಯ. ಆ ಕ್ಷಣದ ಕೆಲಸವನ್ನ ಆ ಕ್ಷಣದಲ್ಲೇ ನಿಭಾಯಿಸು. ಒಂದು ದಿನ ನಿನಗೆ ಸಿಕ್ಕಿರುವ ಸಮಯದಲ್ಲಿ ಹೆಚ್ಚಿನ ಕ್ಷಣವನ್ನು ಶ್ರಮವಹಿಸಿ ದುಡಿದು ಗೆಲುವಿನ ನಿರೀಕ್ಷೆಯಿಲ್ಲದೆ ಏಕಮುಖವಾಗಿ ಪ್ರಾಮಾಣಿಕ ಪ್ರಯತ್ನವನ್ನ ಪಟ್ಟರೆ ಎಲ್ಲ ಗೆಲುವುಗಳು ನಿನ್ನನ್ನು ಹುಡುಕಿ ಬರುತ್ತವೆ. ಅವರಿವರ ತಪ್ಪುಗಳಿಗೆ ಕೈ ತೋರಿಸುತ್ತಾ ಅವರ ತಪ್ಪಿನಿಂದ ನಿನ್ನ ಜೀವನ ಹೀಗಾಯ್ತು ಅಂದುಕೊಳ್ಳುವುದಕ್ಕಿಂತ ನಿನ್ನ ತಪ್ಪುಗಳನ್ನು ತಿದ್ದಿಕೊಂಡು ಮುನ್ನಡೆದು ಬಿಡು ಗೆಲುವು ನಿನ್ನದಾಗಿರುತ್ತದೆ. ಗುರುಗಳ ಮಾತನ್ನು ಒಪ್ಪಿಕೊಂಡು ಹೆಜ್ಜೆ ಇಟ್ಟಿದ್ದೇನೆ. - ಧೀರಜ್ ಬೆಳ್ಳಾರೆ                                   ಚಿತ್ರ ಕೃಪೆ: ಇಂಟರ್ನೆಟ್ ತಾಣ